ಗುರುವಾರ, ಡಿಸೆಂಬರ್ 28, 2023

ತಗೊಳ್ಳಿ ತಿನ್ನುವಷ್ಟೇ ಊಟ!

ಸಂಬಂಧಿಕರ ಒಂದು ಗೃಹಪ್ರವೇಶ ಸಮಾರಂಭಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ನನ್ನೆದುರಿನಲ್ಲಿ, ಒಬ್ಬ ತಾಯಿ, ಪಕ್ಕದಲ್ಲಿ ಅವಳ ಸುಮಾರು 6 ವರ್ಷದ ಒಂದು ಮಗು, ಪಕ್ಕದಲ್ಲಿ ಮಗುವಿನ ಆರೈಕೆಗೆ ಮೀಸಲಾಗಿರುವ ಒಬ್ಬಳು ಹೆಣ್ಣು ಮಗಳು ಮತ್ತು ಕಾರಿನ ಡ್ರೈವರ್ ಇಷ್ಟು ಜನ ಊಟಕ್ಕೆ ಕುಳಿತಿದ್ದರು. ಮೇಲ್ನೋಟಕ್ಕೆ ಮಗು ತುಸು ಅನಾರೋಗ್ಯದಿಂದ ಮಂದವಾಗಿರುವುದು ತೋರುತ್ತಿತ್ತು. ಈಗಿನ ಕಾಲದಲ್ಲಿ, ಸಮಾರಂಭಗಳಲ್ಲಿ ಯಾವುದಕ್ಕೆ ಕೊರತೆಯಾದರೂ ಕೂಡ ಭೋಜನ ಮಾತ್ರ ಅದ್ದೂರಿಯಾಗಿರಬೇಕು. ಜನರಿಗೆ ತಿನ್ನಲು ಸಾಧ್ಯವೋ ಇಲ್ಲವೋ ೨೦-೩೦ ಬಗೆ ಐಟಮ್ಸ್ಗಳೆಂತೂ ಊಟದ ಬಾಳೆ ಎಲೆ ಮೇಲಿರಬೇಕು. ನಗರ ಪ್ರದೇಶಗಳಲ್ಲಂತೂ, ಎಲ್ಲವೂ ಈಗ ಕಾಂಟ್ರಾಕ್ಟ್ ಲೆಕ್ಕ. ವಿವಿಧ ಭಕ್ಷ್ಯಗಳನ್ನು ಒಳಗೊಂಡ ಪ್ರತೀ ಬಾಳೆಗೆ ನಿಗದಿತ ಬೆಲೆ. ಊಟ ಪ್ರಾರಂಭವಾಯಿತು. 
ಬಾಳೆಯ ತುಂಬಾ ಸಾಲಾಗಿ ಒಂದಾದ ಮೇಲೊಂದು ಭಕ್ಷ್ಯಗಳನ್ನು ಬಡಿಸುತ್ತಾ ಹೋದರು. ಸಾಮಾನ್ಯವಾಗಿ ಮಕ್ಕಳ ಊಟದ ಶೈಲಿ ಪಾಲಕರಿಗೆ ತಿಳಿದಿರುತ್ತದೆ. ಊಟದ ಶಿಸ್ತು ಬರುವರೆಗೂ ತಮಗಿಷ್ಟವಾದ ಒಂದಷ್ಟು ಸಿಹಿ ಮತ್ತು ಕರಿದ ಪದಾರ್ಥಗಳನ್ನಷ್ಟೇ ತಿಂದು ಎದ್ದೇಳುವುದು ಮಕ್ಕಳ ರೂಢಿ. ಬಡಿಸುತ್ತಿರುವ ಯಾವ ಭಕ್ಷ್ಯಗಳನ್ನೂ ಬೇಡವೆನ್ನದೆ ಎಲ್ಲವನ್ನು ಅವರೆಲ್ಲರೂ ಹಾಕಿಸಿಕೊಂಡರು. ಮಗುವಿನ ಆರೋಗ್ಯ ಯಾಕೋ ಅನುಮಾನವಾಸ್ಪದವಾಗಿದ್ದರಿಂದ, ತಾಯಿ ಮಗುವಿನ ಸಹಾಯಕಿಗೆ ಊಟ ಮಾಡದೆ ಕಾಯುವಂತೆ ಸೂಚನೆ ನೀಡಿದಳು. ಅನ್ನ ಸಾರು ಪೂರಿ ಸಾಗು ಎಲ್ಲವೂ ಆ ಸಹಾಯಕಿಯ ಬಾಳೆಯಲ್ಲಿ ಸಂಗ್ರಹವಾಗುತ್ತಿತ್ತು. ಬಹುಶಃ ಎಲ್ಲರೂ ಒಂದೇ ಪಂಕ್ತಿಯಲ್ಲಿ ಊಟ ಮಾಡಿ ಎದ್ದು ಹೊರಡುವ ಅನಿವಾರ್ಯತೆ ಇದ್ದಿರಬಹುದು. ನಾನು ಗಮನಿಸಿದಂತೆ ಮಗುವಿನ ತಾಯಿಯು ಪಂಕ್ತಿಯಲ್ಲಿ ಏನನ್ನು ಹೇಳಿ ಬಡಿಸಿಕೊಳ್ಳುತ್ತಿದ್ದಾಳೋ, ಅವೆಲ್ಲವನ್ನು ಮಗು ತನಗೂ ಬೇಕೆಂದು ಹಠ ಹಿಡಿದು ಕೇಳಿ ಹಾಕಿಸಿಕೊಳ್ಳುತ್ತಿತ್ತು ಆ  ತಾಯಿಯೂ ಯಾವುದೇ ಮುಲಾಜಿಲ್ಲದೆ ಮತ್ತೆ ಮತ್ತೆ  ಮಗುವಿಗೆ  ಆಹಾರ ಕೇಳುತ್ತಿದ್ದಳು. ಅದಾಗಲೇ  ಎರಡು ಪೂರಿಗಳಿರುವ ಬಾಳೆಯಲ್ಲಿ, ಮತ್ತೊಂದು ಪೂರಿ ಬಂದು ಬಿದ್ದಿತ್ತು. ಮಗುವಿಗೆ ಪುಸಲಾಯಿಸಿ ತುಸು ತಿನ್ನಿಸಲು ಪ್ರಯತ್ನಿಸಿದರಾದರೂ, ಮಗು ಹೆಚ್ಚೇನೂ ಆಹಾರವನ್ನು ತೆಗೆದುಕೊಳ್ಳಲಿಲ್ಲ. ಪ್ರಿಯವಾದದ್ದನ್ನು ತಿನ್ನಲಿ ಎಂದು ಅದಾಗಲೇ ಅನಾರೋಗ್ಯದಲ್ಲಿರುವ ಮಗುವಿಗೆ ಕರಿದ ಬೋಂಡವನ್ನು ತಿನ್ನಿಸುವ ಪ್ರಯತ್ನ ಮಾಡಿದರು. ಅನ್ನ ಸಾರು ಸಾಂಬಾರು ಪಲಾವ್, ಎಲ್ಲವನ್ನು ಬದಿಗೊತ್ತಿ, ಕೊನೆಗೆ ಅನ್ನ ಮೊಸರು ಹಾಕಿಸಿಕೊಂಡು ಊಟ ಮಾಡಿಸುವ ಪ್ರಯತ್ನ ಕೂಡ ನಡೆಯಿತು. ಎಲ್ಲ ಒತ್ತಾಯದ ಪ್ರಯತ್ನದ ಬಳಿಕ ಮಗು ತಿಂದದ್ದೆಲ್ಲವನ್ನು ಅಲ್ಲಿಯೇ ವಾಂತಿ ಮಾಡಿಕೊಂಡಿತು. ಹಿಂದಿನ ಹೊತ್ತಿನ ಆಹಾರ ಜೀರ್ಣವಾಗಿರಲಿಲ್ಲ ಎಂಬುದು ತಿಳಿಯುತ್ತಿತ್ತು. ಒಂದೆಡೆ ತಿನ್ನಲು ಸಮಯವಿಲ್ಲದೆ, ಬಂದದ್ದೆಲ್ಲ ಭಕ್ಷಗಳನ್ನು ಹಾಕಿಸಿಕೊಳ್ಳುತ್ತಿರುವ ತಾಯಿ, ಇನ್ನೊಂದೆಡೆ ಹುಷಾರಿಲ್ಲದಿದ್ದರೂ ಎಲ್ಲವನ್ನೂ ಕೇಳಿ ಹಾಕಿಸಿಕೊಂಡು ತಿನ್ನಲು ಆಸಕ್ತಿ ಇಲ್ಲದ ಮಗು, ಮತ್ತೊಂದೆಡೆ, ಮಗುವಿನ ಜವಾಬ್ದಾರಿಯ ವೃತ್ತಿಯಲ್ಲಿರುವ ಹೆಣ್ಣು ಮಗಳು ಮಗುವಿನ ಪಾಲನೆಗೆ ಕಾಯುತ್ತಾ ಕುಳಿತು ಕೊನೆಯಲ್ಲಿ ಬಾಳೆ ತೆಗೆಯುವವರು ಬಂದು ಬಿಡುತ್ತಾರೆ ಎಂಬ ಗಡಿಬಿಡಿಯಲ್ಲಿ ಬಾಳೆ ತುಂಬಾ ಪದಾರ್ಥಗಳಿದ್ದರೂ ಅರ್ಧಂಬರ್ಧ ತಿಂದು ಉಳಿದಷ್ಟು ಬಿಟ್ಟು ಹೊರಟವಳು!! ವಾಂತಿ ಆದ ನಂತರ ಮಗುವಿನ ಹೊಟ್ಟೆಯಲ್ಲಿ ಏನು ಉಳಿದಿಲ್ಲ ಎಂದು ಆ  ತಾಯಿ ಖೇದಗೊಂಡು, ಪಂಕ್ತಿಯ ಕೊನೆಯಲ್ಲಿ, ಮಗುವಿಗೆ ಪ್ರಿಯವಾದ ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಐಸ್ ಕ್ರೀಮ್ ಅನ್ನು ತಿನ್ನಿಸಿ ಅದರ ಹಠಕ್ಕೆ ಇನ್ನೊಂದು ಐಸ್ ಕ್ರೀಮ್ ಕೊಂಡು ತಿನಿಸಿ ಊಟದಿಂದ ಎದ್ದರು ಆ ಮಹಾತಾಯಿ!! ಸಮಾರಂಭಗಳಲ್ಲಿ ಊಟದ ಶಿಸ್ತು ಇಲ್ಲದಿದ್ದಲ್ಲಿ ಅದೆಷ್ಟು ಆಹಾರ ಪೋಲಾಗುತ್ತದೆ, ಆರೋಗ್ಯಕ್ಕೆ ಕುತ್ತು ಮತ್ತು ಹಣಕಾಸಿನ ನಷ್ಟ ಎಂಬುದಕ್ಕೆ ಇದೊಂದು ನಿದರ್ಶನ. ಇಂತಹ ಅದೆಷ್ಟು ಸಣ್ಣಪುಟ್ಟ ಶೈಕ್ಷಣಿಕ ವಿಷಯಗಳು ನಮ್ಮ ಕಲಿಕೆಗೆ  ಬೇಕಾಗುತ್ತವೆ ಮತ್ತು ಮಕ್ಕಳು ನಮ್ಮನ್ನು ನೋಡಿ  ಕಲಿಯುತ್ತಾರೆ.

ಊಟದ ಕಾರ್ಯಕ್ರಮಗಳಿಗೆ ಮಕ್ಕಳೊಡನೆ ಹೋದಾಗ ಊಟ ಪೋಲಾಗದಂತೆ ನೋಡಿಕೊಳ್ಳಲು  ಹೀಗೊಂದಿಷ್ಟು ವಿಷಯಗಳು ನನಗನ್ನಿಸಿದ್ದು : 

೧. ವಯಸ್ಸಿನಲ್ಲಿ ಅತ್ಯಂತ ಚಿಕ್ಕ ಮಗುವಾಗಿದ್ದರೆ ಅನ್ಯಥಾ ಒಂದು ಬಾಳೆ ಎಲೆ ಊಟವನ್ನು ದಂಡ ಮಾಡದೆ, ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿಸಬಹುದು ಅಥವಾ ಬೇರೊಂದು ತಟ್ಟೆಯಲ್ಲಿ ಬೇಕಾದಷ್ಟೇ ಕೇಳಿ ಹಾಕಿಸಿಕೊಂಡು ತಿನ್ನಿಸಬಹುದು.

2. ಪಾಲಕರಾಗಿ ಮಗುವಿನ ಆಹಾರದ ಶೈಲಿಯನ್ನು ಅರಿತುಕೊಂಡು ಸಮಾರಂಭ ಊಟಕ್ಕೆ ಕೂತಾಗ ಮಕ್ಕಳ ಇಷ್ಟ ಕಷ್ಟದ ಪದಾರ್ಥಗಳ ಬಗ್ಗೆ ಗಮನ ಕೊಟ್ಟು 
 ಅವರು ತಿನ್ನದ ಪದಾರ್ಥಗಳನ್ನು ಕೈಯೊಡ್ಡಿ ಊಟದ ಎಲೆಗೆ ಅನಾವಶ್ಯಕ ಬಡಿಸುವುದನ್ನು ಬೇಡವೆನ್ನಬಹುದು

೩. ಮಕ್ಕಳಿಗೆ ಪದಾರ್ಥಗಳನ್ನು ಮೊದಲಿಗೆ ಸ್ವಲ್ಪವೇ ಬಡಿಸಿದಷ್ಟನ್ನು ತಿನ್ನಲು ಪ್ರೋತ್ಸಾಹಿಸಿ, ಮಗು ಇಷ್ಟಪಟ್ಟರೆ ಮತ್ತೊಮ್ಮೆ ಭಕ್ಷ್ಯಗಳನ್ನು ಕೇಳಿ ಹಾಕಿಸಿದರೆ, ಮಕ್ಕಳಲ್ಲಿಯೂ ಊಟದ ಆತ್ಮವಿಶ್ವಾಸ ಹೆಚ್ಚುತ್ತದೆ 

೪. ನಮ್ಮ ಬಲವಂತಕ್ಕೆ ಮಕ್ಕಳು ಊಟಕ್ಕೆ ಕೂರಬಾರದು. ಹಾಗೊಮ್ಮೆ ಕಾರ್ಯಕ್ರಮ ಮುಗಿಸಿ ಬೇಗ ಹೋಗುವ ಅನಿವಾರ್ಯತೆ ಇದ್ದರೆ, ಮಕ್ಕಳು ಊಟಕ್ಕೆ ಕೂರುವ ಮುನ್ನ ಎಷ್ಟು ಹಸಿದಿದ್ದಾರೆ, ಅವರು ಹಿಂದದಿಂದ ತಿಂದ ಯಾವ ಆಹಾರ ಜೀರ್ಣವಾಗಲು ಎಷ್ಟು ಸಮಯ ಹಿಡಿಯುತ್ತದೆ ಎಂಬಿತ್ಯಾದಿ ವಿಷಯಗಳನ್ನು ಗಮನಿಸಿಕೊಂಡು, ಮಕ್ಕಳ ಬಾಳೆಎಲೆಗೆ ಅವರಿಗೆ ಅವಶ್ಯಕತೆ ಇರುವಷ್ಟೇ ಆಹಾರವನ್ನು ಕೇಳಿ ಹಾಕಿಸಿಕೊಳ್ಳಬೇಕು. 

೫. ಸಮಾರಂಭಗಳಲ್ಲಿ ಮಕ್ಕಳ ಮುಂದೆ ಆಹಾರವನ್ನು ಹಾಕಿಸಿಕೊಂಡು ಪೋಲು ಮಾಡುವ ಸಂಪ್ರದಾಯ ನಮ್ಮದಾದರೆ ಮಕ್ಕಳು ಕೂಡ ಅದನ್ನೇ ನೋಡಿ ಕಲಿಯುತ್ತಾರೆ. ತುಸು ರುಚಿಯ ಹೆಚ್ಚು ಕಮ್ಮಿಯಾದರೂ ಊಟ ಮಾಡುವ ಕಲೆಯನ್ನು, ಆಹಾರವನ್ನು ಕೃತಜ್ಞತೆಯಿಂದ ಸ್ವೀಕರಿಸುವುದನ್ನು, ರುಚಿಯಾದ್ದನ್ನು ಕೊಂಡಾಡುವ ಬಗೆ ಇತ್ಯಾದಿ ಚಿಕ್ಕ ಚಿಕ್ಕ ವಿಷಯಗಳನ್ನು ಮಕ್ಕಳಿಗೆ ನಮ್ಮ ದಿನನಿತ್ಯದ ತಿಂಡಿ ಊಟಗಳಲ್ಲಿ ಕಲಿಸಿಕೊಟ್ಟರೆ, ಮಕ್ಕಳೇ ತಮಗೆ ಬೇಕಾದುದನ್ನು ನಿರ್ಧರಿಸಿ ತೃಪ್ತಿಯಿಂದ ಊಟ ಮಾಡುತ್ತಾರೆ. 

೬. ಆಹಾರ ಬೆಳೆಗಳ ಬೆಳೆಯುವುದರಿಂದ ಹಿಡಿದು, ಅವುಗಳ ನಿರ್ವಹಣೆ, ಖಾದ್ಯ ತಯಾರಿಕೆಯ ಹಿಂದಿನ ಶ್ರಮ, ಸಂಗ್ರಹ ಮತ್ತು ಸಂರಕ್ಷಣೆ ಇತ್ಯಾದಿ ವಿಷಯಗಳ ಕುರಿತು ಆಗಾಗ್ಗೆ ಮಕ್ಕಳೊಂದಿಗೆ ಮಾತನಾಡುತ್ತಿದ್ದರೆ, ಪ್ರಾಯೋಗಿಕವಾಗಿ ಆಹಾರ ತಯಾರಿಕೆಯಲ್ಲಿ ಮಕ್ಕಳನ್ನು ಕೂಡ ಜೊತೆಗೂಡಿಸಿಕೊಂಡರೆ, ಆಹಾರ ಪೋಲು ಮಾಡುವ ಮುನ್ನ ಮಕ್ಕಳೇ ತಮನ್ನೇ ಆಹಾರದ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ