ಗುರುವಾರ, ಡಿಸೆಂಬರ್ 21, 2023

ಹೊಗಳಿಕೆ - ತಾಕಿಸು ನಿಜದ ಸೂಜಿಮೊನೆ

"ನೋಡು ನೀನೀಗ ಊಟ ಮಾಡ್ಲಿಲ್ಲ ಅಂದ್ರೆ ಯಾರೂ ನಿಂಗೆ ಗುಡ್ಗರ್ಲ್ ಹೇಳಲ್ಲ, ಬ್ಯಾಡ್ಗರ್ಲ್ ಅಂತಾರೆ, ಬೇಕಾ ನಿಂಗೆ ಬ್ಯಾಡ್ಗರ್ಲ್ ಅಂತ ಹೇಳಿಸ್ಕೊಳೋದು?"

"ನಮ್ಮ ಹುಡ್ಗನಿಗೆ ಸ್ವಲ್ಪ ಪಾಲಿಶ್ ಹೊಡೆದು ಗುಡ್ ಬಾಯ್ ಅಂದ್ರೆ ಸಾಕು, ಹೇಳಿದ್ದೆಲ್ಲ ಕೆಲಸ ಮಾಡತ್ತೆ ಪಾಪ"

"ಅವಳಿಗೆ ಸುಮ್ಸುಮ್ನೆ ಗುಡ್ ಗರ್ಲ್ ಅಂತ ಹೊಗಳಿ ಅಟ್ಟಕ್ಕೇರಿಸಿ ಇಟ್ಟಿದ್ದೀಯ ನೀನು, ತಾನು ಮಾಡಿದ್ದೆಲ್ಲ ಸರಿ ಅಂತ ವಾದ ಮಾಡ್ತಾಳೆ ನೋಡು ಈಗ.. "

"ಅಮ್ಮ ಆದ್ರೆ ಗುಡ್ ಅಂತಾಳೆ, ನೀನು ನೋಡಿದ್ರೆ ಯಾವಾಗ್ಲೂ ಸಿಡುಕ್ತಾನೆ ಇರ್ತೀಯಲ ಅಪ್ಪ.. "

 "ಅವನು ಮಾಡಿರೋ ಡ್ರಾಯಿಂಗ್ ನೋಡಿ ಅಜ್ಜಿ ಚೆನ್ನಾಗಿದೆ ಅಂತ ಅಷ್ಟೇ ಹೇಳಿದ್ರಂತೆ, ವಾವ್ ಸೂಪ್ಪರ್ , ಗುಡ್ ಅಂತ ಏನೂ ಹೇಳಲೇ ಇಲ್ಲ ಅಂತ ಮುನಿಸ್ಕೊಂಡಿದಾನೆ ಮಗ" 

"ಗುಡ್ ಗರ್ಲ್ ಅಲ್ವ ನೀನು? ಬಾ ಚಾಕೊಲೇಟ್ ಕೊಡ್ತೀನಿ ತೊಡೆ ಮೇಲೆ ಕೂತ್ಗ್ಗೋ ಬಾ.. " 

ಈ ರೀತಿಯ ಸಂಭಾಷಣೆ ನಮ್ಮ ನಿಮ್ಮ ಮನೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಗುತ್ತಲೇ ಇರುತ್ತವೆ ಅಲ್ವ? 

ಮಕ್ಕಳಿಗೆ ಹೊಗಳಿಕೆ ನೀಡುವುದು ಸರಿಯೇ ತಪ್ಪೇ ಎಂಬ ಜಿಜ್ಞಾಸೆ ನಮಗೆ ಕಾಡುವುದು ಸಹಜ. ಮಕ್ಕಳಿಗೆ ಪ್ರೋತ್ಸಾಹ ಅತ್ಯಗತ್ಯ. ಪ್ರೋತ್ಸಾಹವಿಲ್ಲದೆ  ಮಕ್ಕಳು ಸಾಯುವುದಿಲ್ಲ ಆದರೆ ಒಣಗುತ್ತಾರೆ. ಪ್ರಶಂಸೆ ಎಂದರೆ ಇನ್ನೊಬ್ಬರು ಮಾಡಿದ ಕಾರ್ಯಕ್ಕೆ ಅಂಗೀಕಾರ ಅಥವಾ ಅನುಮೋದನೆ. ಏನನ್ನಾದರೂ ಕಲಿಸುವಾಗ, ಮಕ್ಕಳು ತಮ್ಮ ಪ್ರಯತ್ನಕ್ಕಾಗಿ ತಮ್ಮ ಬಗ್ಗೆ ಹೆಮ್ಮೆ ಪಡುವ ಆಂತರಿಕ ಪ್ರೇರಣೆಯಾಗಿ ಹೊಗಳಿಕೆಯನ್ನು ಇಷ್ಟಪಡುತ್ತಾರೆ.  ಇತರರು ಮೆಚ್ಚುವುದನ್ನು ನೋಡಿದಾಗ ಮಕ್ಕಳು ಆ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಉತ್ಕೃಷ್ಟ ಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಅದೇ ಹೊಗಳಿಕೆ ಅರ್ಥಹೀನ ಮತ್ತು ಪ್ರಾಮಾಣಿಕವಲ್ಲದಿದ್ದರೆ, ಪ್ರತಿಕೂಲವಾಗಿ ಮಕ್ಕಳು ಒಂದೋ ಅನುಮೋದನೆಯ ಚಟಕ್ಕೆ ಬೀಳುತ್ತಾರೆ ಇಲ್ಲವಾದರೆ ಭವಿಷ್ಯದಲ್ಲಿ ಜಗತ್ತಿನ ಸವಾಲುಗಳ ಎದುರಿಸಲಾಗದೆ ದ್ವಂದ್ವಕ್ಕೆ ಒಳಗಾಗುತ್ತಾರೆ.  ಈ ಒಣ ಹೊಗಳಿಕೆ ಮತ್ತು ಉತ್ತೇಜನ/ಸಕಾರಾತ್ಮಕ ಗುರುತಿಸುವಿಕೆಯ ಅಂತರ ಕೂದಲೆಳೆಯಷ್ಟು. ಅದನ್ನು ಪೋಷಕರು ಅರಿತು ಮಕ್ಕಳಿ ಬೆಳವಣಿಗೆಗೆ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಹೀಗೊಂದಷ್ಟು ಟಿಪ್ಸ್.  

ಪ್ರಾಮಾಣಿಕ ಹೊಗಳಿಕೆಯು ಮಗುವಿಗೆ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. ಅವರ ಸ್ವಾಭಿಮಾನವನ್ನು ಪೋಷಿಸುತ್ತದೆ. ಧನಾತ್ಮಕ ಕ್ರಿಯೆಗಳಿಗೆ ಮಕ್ಕಳನ್ನು ಸರಿಯಾದ ರೀತಿಯಲ್ಲಿ ವಿವರಣೆ ನೀಡಿ ಹೊಗಳುವುದು, ಅವರ ಆ ಸದ್ಗುಣಗಳು ಮತ್ತೆ ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 


ಹೊಗಳಿಕೆ ಪ್ರಾಮಾಣಿಕವಾಗಿರಲಿ :  ನಾವು ಹೇಳಿದ ಕೆಲಸ ಮಗು ಮಾಡಿ ಮುಗಿಸಬೇಕು ಎಂಬ ಕಾರಣಕ್ಕಾಗಿ ಮಕ್ಕಳಿಗೆ ಗುಡ್ ಅಥವಾ ಸತ್ಯವಲ್ಲದ ಹೆಗ್ಗಳಿಕೆ ನೀಡಬೇಡಿ. ಉದಾಹರಣೆಗೆ, ಡ್ರಾಯಿಂಗ್ ಮಾಡಿ ಮುಗಿಸಿದ ಮಗುವಿಗೆ ನೀನೊಬ್ಬ ಅದ್ಭುತ ಕಲಾವಿದ ಎಂದು ಹೊಗಳುವುದಕ್ಕಿಂತಲೂ, ಆ ಮಗು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ, ಎಳೆದ ನೇರವಾದ ಗೆರೆ, ಬಳಸಿದ ಬಣ್ಣ, ಬೇಕಾದಲ್ಲೇ ಬಣ್ಣ ತುಂಬಿದ ಏಕಾಗ್ರತೆ ಇತ್ಯಾದಿ ವಿಷಯಗಳ ಗಮನಿಸಿ ನಿರ್ಧಿಷ್ಟ ಮೆಚ್ಚುಗೆ ಸೂಚಿಸಬೇಕು.  "ಹಾಲು ಕುಡಿದು ಖಾಲಿ ಮಾಡಿದ್ಯಾ? ಗುಡ್ ಅಮ್ಮ ಬೈಯ್ಯೋಷ್ಟ್ರಲ್ಲಿ ಕುಡಿದು ಬಿಟ್ಟೆ ನೋಡು ಇವತ್ತು" ಎಂಬ ಮಾತಿನಲ್ಲಿ ಮೆಚ್ಚುಗೆ ಇದ್ದರೂ, ನಕಾರಾತ್ಮಕ ವಾಗ್ದಂಡ ಕೂಡ ಬಳಸುವುದರಿಂದ, ಮಕ್ಕಳಿಗೆ ಹಾಲು ಕುಡಿಯುವುದು ತಾನು ದೇಹಕ್ಕೆ ಸಹಾಯ ಮಾಡಿದ ಕಾರಣಕ್ಕೆ ಎಂಬುದ ಅರಿವಾಗದೇ, ಅಮ್ಮ ಬೈತಾರೆ ಹಾಗಾಗಿ ಕುಡಿಯಬೇಕು ಎಂಬ ಸಂದೇಶ ಗೊಂದಲಕ್ಕೀಡು ಮಾಡುತ್ತದೆ. ಅದರ ಬದಲು, "ಹಾಲು ಕುಡಿದು ಶಕ್ತಿವಂತ, ಆರೋಗ್ಯವಂತಳಾದೆ ನೋಡು ನೀನೀಗ" ಎಂಬ ಮೆಚ್ಚುಗೆ ಆ ಮಗುವಿಗೆ ತಾನು ಕಲಿತ ಕೆಲಸದ ಕುರಿತು ಹೆಮ್ಮೆ ಉಂಟಾಗುತ್ತದೆ. 

ಮಕ್ಕಳು ದೇಹ ಭಾಷೆ ಮತ್ತು ಸ್ವರಕ್ಕೆ ಹೆಚ್ಚು ಸಂವೇದನಾಶೀಲರಿರುತ್ತಾರೆ. ಆದ್ದರಿಂದ, ನೀವು ಮಕ್ಕಳನ್ನು ಹೊಗಳುವಾಗ, ನೀವು ಆ ವಿಷಯವನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಅವರಿಗೆ ತಿಳಿಸಿ. ಸ್ಮೈಲ್, ಉತ್ತಮ ಕಣ್ಣಿನ ಸಂಪರ್ಕ, ಭುಜಕ್ಕೊಂದು ಶಬ್ಬಾಶ್ ನೀಡುವುದು, ಕೈಕುಲುಕುವುದು ಮತ್ತು ಸ್ನೇಹಪರ ದೇಹ ಭಾಷೆ ಮಾತಿಗಿಂತಲೂ ದೊಡ್ಡ ವ್ಯತ್ಯಾಸವನ್ನು ಮಾಡಬಹುದು.   

ಹೊಗಳಿಕೆ ನಿರಂತರವಾಗಿರಲಿ : ಯಾವುದೋ ಒಂದು ನಾವು ಅಳೆಯುವ  'ದೊಡ್ಡ ಸಾಧನೆ' ಯನ್ನು ಮಗು ಮಾಡಿದಾಗ ಮಾತ್ರವೇ ಹೊಗಳಿಕೆ ಎಂಬುದು ಸರಿಯಲ್ಲ. ಹೊಗಳಿಕೆ ಯಾರೋ ಬೇರೆಯವರಿಂದ ಬರಬೇಕು ನಮ್ಮ ಮಗುವಿಗೆ, ನಾವೇ ನೀಡಬಾರದು ಎಂಬ ಸಂಕೋಚವೂ ಬೇಡ. ಯಾವುದೋ ಸ್ಪರ್ಧೆಯಲ್ಲಿ ಸೋತರೂ ಕೂಡ, ಮಗುವಿನ ಸಣ್ಣ ಸಣ್ಣ ಪ್ರಯತ್ನ, ಆಟವಾಡಿದ ಶೈಲಿ, ಸವಾಲನ್ನು ಧೈರ್ಯವಾಗಿ ಎದುರಿಸಿದ ಬಗೆ ಇತ್ಯಾದಿ ಕುರಿತಾಗಿ ನಮ್ಮ ಮಗುವಿಗೆ ಯಾವ ಶಿಕ್ಷಕರು, ದೊಡ್ಡ ದೊಡ್ಡ ಜನರು ಕೊಡದಿದ್ದರೂ ನಾವು ಕೊಡಬಹುದು. ಮಗುವಿನ ಯಾವುದೇ ಸಣ್ಣ ಯಶಸ್ಸನ್ನು ಗಮನಿಸಿ ಹೊಗಳಿದರೆ, ಆ ಮಗು ಹೆಚ್ಚು ಆತ್ಮವಿಶ್ವಾಸ, ಸೃಜನಶೀಲ ಸಂತೋಷ ಮತ್ತು ಪ್ರೀತಿಯಿಂದ ಇರುವ ವ್ಯಕ್ತಿಯಾಗಬಹುದು.  "ನೀನು ಇರುವುದು ನಮ್ಮ ಪಾಲಿನ ಸಂತೋಷ" ಎಂಬ ಮಾತು ಕೂಡ ಸಣ್ಣ ಮಗುವಿನ ಜೊತೆ ನಮ್ಮ ಬಾಂಧವ್ಯ ಹೆಚ್ಚುವಂತೆ ಮಾಡುತ್ತದೆ. 

ಕಳೆದು ಹೋದುದರ ಕುರಿತು ಖೇದ ಬೇಡ : "ಅಬ್ಬಾ, ಕಳೆದ ಸಲ ಬಾಟಲಿ ಗೆ ನೀರು ತುಂಬಿಸಿದಾಗ ಇಡೀ ಮನೆ ಹೊಳೆ ಮಾಡಿದ್ಯಲ, ಈ ಸಲ ಇನ್ನೇನ್ ಮಾಡಿದ್ಯೋ ಅಂದ್ಕೊಂಡೆ. ಪರ್ವಾಗಿಲ್ಲ ಅಂತೂ ತುಂಬಿದ್ಯಲ.." ಎಂಬ ಹೊಗಳಿಕೆಯಲ್ಲಿ, ಮಗುವಿನ ಕುರಿತಾದ ಅಪನಂಬಿಕೆಯ ವ್ಯಂಗ್ಯವಿದೆ.   ಕಲಿಯುವಾಗ ತಪ್ಪುಗಳು ಸಹಜ. ತಪ್ಪಿನಿಂದ ಕಲಿತಿರುತ್ತಾರೆ ಕೂಡ. ಮುಂದಕ್ಕೆ ಸರಿ ಮಾಡಿಕೊಂಡಾಗಲೂ ಕೂಡ, ನಿರ್ಣಯಾತ್ಮಕ ಹೇಳಿಕೆ ಕೊಟ್ಟು, ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವಂತೆ ಮಾಡಬೇಡಿ. ಬದಲಾಗಿ, "ಕಳೆದ ಸಲದ ನಿನ್ನ ವಿಫಲ ಪ್ರಯತ್ನದಿಂದ ಈ ಸಲ ನೀನು ಅತ್ಯಂತ ಜಾಗರೂಕಳಾಗಿ ನೀರು ತುಂಬಿದ್ದನ್ನು ನಾನು ಗಮನಿಸಿದೆ" ಎಂಬ ಮಾತು ಸಾಕು ಮಗುವಿಗೆ ತನ್ನ ಸಾಮರ್ಥ್ಯದ ಕುರಿತು ಆತ್ಮವಿಶ್ವಾಸ ಬರಲು!

ಮಕ್ಕಳು ತಮಗಾಗಿ ಕೆಲಸ ಮಾಡಿಕೊಳ್ಳಲು ಅವಕಾಶ ಕೊಡಿ : ಮಕ್ಕಳಿಗೆ 'ನೀನು ಒಳ್ಳೆಯ ಮಗು ಚೆಲ್ಲದೇ ತಿನ್ನಬೇಕು ಜಾಣ ಮರಿ' ಎಂಬಿತ್ಯಾದಿ ಪದಗಳ ಮಗುವಿನ ಚಟುವಟಿಕೆಗಳ ಮುಂಚೆಯೇ ಬಳಸಿ, ಅದು ತನ್ನ ಪ್ರಯತ್ನದಲ್ಲಿ ಸೋತರೆ,  'ಹೋಗ ನೀ ಜಾಣ ಅಲ್ಲ' ಎಂದು ಹಂಗಿಸುವುದರಿಂದ ಮಗುವು ತಾನು ಜಾಣನಲ್ಲ, ತನ್ನಿಂದ ಏನೂ ಸಾಧ್ಯವಾಗದು ಎಂಬ ನಕಾರಾತ್ಮಕ ಭಾವನೆ ತಂದುಕೊಳ್ಳುತ್ತದೆ.  ಬದಲಾಗಿ, ಪ್ರ'ಯತ್ನಿಸಿ ನೋಡು' ಎಂದು ಅವಕಾಶ ಮತ್ತು ಸಮಯ ಕೊಟ್ಟು, ಮಗು ಚಮಚದಿಂದ ತಿನ್ನಲು ಒಂದೆರಡು ಬಾರಿ ಸೋತು ನಂತರ ಯಶಸ್ವಿಯಾದಾಗ ಆಗ ಆ ಪ್ರಯತ್ನಕ್ಕಾಗಿ ಮೆಚ್ಚುಗೆ ನೀಡಿದರೆ ಮಗುವಿನ ಆತ್ಮವಿಶ್ವಾಸ ಹೆಚ್ಚುತ್ತದೆ. 

ಮಕ್ಕಳ ಸ್ವಂತಿಕೆಯನ್ನು ಆಚರಿಸಿ : ಮನೆಗೆ ನೆಂಟರು ಬಂದರೆ, ಆದರಾತಿಥ್ಯ ಮಾಡಲು ಬರಬೇಕು, ಯಾವ ಮನಸ್ಥಿತಿಯಲ್ಲಿದ್ದರೂ, ಬೇರೆಯವರಿಗೋಸ್ಕರ ನಗುತ್ತಲಿರಬೇಕು, ಇಲ್ಲಾಂದ್ರೆ ಎಲ್ಲರೂ 'ಛೀ ಎಷ್ಟು ಕೆಟ್ಟವನು/ಕೆಟ್ಟವಳು' ಅಂತಾರೆ. ಎಂಬಿತ್ಯಾದಿ ಬೇರೆಯವರ ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಒಳ್ಳೆಯತನ ನಿರ್ಧಾರಿತ ಎಂಬ ಭಾವನೆ ಮಕ್ಕಳಿಗೆ ನೀಡುವುದರಿಂದ, ಅದು ಮಕ್ಕಳಿಗೆ ಒತ್ತಡವನ್ನು ತರುತ್ತದೆ. ಬೇರೆ ಮಕ್ಕಳ ಇತರ ಚಟುವಟಿಕೆ ಗಮನಿಸಿ, ಅವನಷ್ಟು ಚೆನ್ನಾಗಿ ನೀ ಬರೆದಿಲ್ಲ ಎಂಬಿತ್ಯಾದಿ ತುಲನಾತ್ಮಕ ಮಾತುಗಳನ್ನು ನಾವಾಡಿದರೆ, ಮಕ್ಕಳ ಸಾಮರ್ಥ್ಯ ಬೇರೆ ಇನ್ಯಾವುದೇ ವಿಷಯಗಳಲ್ಲಿ ಇದ್ದರೂ ಅವರು  ಕುಂಠಿತ ಬೆಳೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿ ಅನನ್ಯ ಸಾಮರ್ಥ್ಯಗಳನ್ನು ಕಂಡು ಹಿಡಿದು ಮೆಚ್ಚುಗೆಯ ಮೂಲಕ ಆಚರಿಸಿ. ಅವರ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಸ್ವಂತ ಮಾನದಂಡಗಳನ್ನು ಹೊಂದಿಸಲು  ಮಕ್ಕಳಿಗೆ ಸಹಾಯ ಮಾಡಿ. 

ಸರಳ ಭಾಷೆಯಲ್ಲಿ ಮೆಚ್ಚುಗೆ, ವಿವರಣೆ ಇರಲಿ : ಮಕ್ಕಳಿಗೆ ಅವರು ಕಾಣುವಷ್ಟೇ ಪ್ರಪಂಚ ಅವರ ಪಾಲಿಗೆ. ಅವರ ವಯಸ್ಸು ಮತ್ತು ಸಾಮರ್ಥ್ಯದ ಆಧಾರದ ಮೇಲೆ ಅವರಿಗೆ ಅರ್ಥವಾಗುವ ಪದಗಳಲ್ಲಿಯೇ ಹೊಗಳಿಕೆ ನೀಡಿ. ಎರಡು ಮಕ್ಕಳಿರುವ ಮನೆಯಲ್ಲಿ ಒಡನಾಡಿಗಳ ಮಧ್ಯೆ ತುಲನಾ ಭಾವನೆ ಸಹಜ. ಮನೆಯಲ್ಲಿ ಸಣ್ಣ ತಂಗಿಯೊಂದು ತಾನೇ ಹಲ್ಲುಜ್ಜಿಕೊಂಡು ಬಂದರೆ, ತುಸು ದೊಡ್ಡ ಅಣ್ಣ ತನ್ನ ಸಾಕ್ಸ್ ತಾನೇ ತೊಳೆದುಕೊಂಡು ಬಂದರೆ, ಇಬ್ಬರಿಗೂ ಕೇವಲ ಗುಡ್ ಎಂಬ ಪದ ಬಳಕೆಕಿಂತಲೂ,  ಅವರ ಯಾವ ಪ್ರಯತ್ನ, ಅವರನ್ನು ಇನ್ನಷ್ಟು ಸಮರ್ಥರನ್ನಾಗಿ ಮಾಡಿತು ಎಂಬುದನ್ನು ವಿವರಿಸಿ ಮೆಚ್ಚುಗೆ ಸೂಚಿಸಿದರೆ, ಮಕ್ಕಳಿಬ್ಬರಿಗೂ ಯಾವ ಯಾವ ವಯಸ್ಸಿನಲ್ಲಿ ಏನೇನು ಕೆಲಸಕ್ಕೆ ತಾವು ಸಮರ್ಥರು ಎಂಬುದರ ಅರಿವಾಗಿ, ಮಕ್ಕಳು ಬಲುಬೇಗ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ. ಮಕ್ಕಳ  ಜೊತೆ ಆಗಾಗ ಮಾತನಾಡಿ ಅವರು ಪಡೆದ ಮೆಚ್ಚುಗೆಯ     ಗ್ರಹಿಕೆಯನ್ನು, ಭಾವಾರ್ಥವನ್ನು ಖಾತ್ರಿಪಡಿಸಿಕೊಳ್ಳಿ

ನಕಾರಾತ್ಮಕ ಸ್ವ-ಮಾತುಗಳನ್ನು ತಪ್ಪಿಸಿ : ಮನೆಯಲ್ಲಿ ಹೆತ್ತವರ ಮಾತುಗಳನ್ನು ಕೇಳಿ ಮಕ್ಕಳು ಕಲಿಯುತ್ತಾರೆ. ಹೆತ್ತವರು ತಮ್ಮನ್ನು ತಾವೇ ಬೈದುಕೊಳ್ಳುವುದು ಕಡಿಮೆ ಮಾಡಿದರೆ ಸ್ವಾಭಿಮಾನ ಬಲವಾಗುತ್ತದೆ. ಆಗ ಮಕ್ಕಳು ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದಿಲ್ಲ.ಮಕ್ಕಳು ತಮ್ಮ ಬಗ್ಗೆಯೇ ನಕಾರಾತ್ಮಕವಾಗಿ ಮಾತನಾಡುತ್ತಿದ್ದರೆ, ಅದನ್ನು ತಡೆದು, ಅದರ ವಿರುದ್ಧವಾಗಿ ಸಾಬೀತುಪಡಿಸಲು ಕೆಲವು ಪುರಾವೆಗಳನ್ನು ನೀಡಿ, ಮಕ್ಕಳಿಗೆ ಅವರು ಪ್ರಯತ್ನ ಪಟ್ಟಷ್ಟಕ್ಕಾದರೂ ಅಭಿನಂದನೆ ನೀಡಿ. 

ಪ್ರಶಂಸೆ ಮಗುವಿಗೆ ಮಾತ್ರವಲ್ಲ ಮನೆಯಲ್ಲಿರಲಿ : ಪ್ರಶಂಸೆ ಎನ್ನುವುದು ಕೇವಲ ಮಕ್ಕಳಿಗೆ ಮಾತ್ರ ಬೇಕಾಗಿರುವುದಲ್ಲ. ಹೋಂ ವರ್ಕು ಮುಗಿಸಿದ ಮಗುವಿಗೆ ಬೇಕಾದ ಗುಡ್ ಎಂಬ ಹೊಗಳಿಕೆ, ತನ್ನ ಆರಾಮ ವಲಯವನ್ನು ಬಿಟ್ಟು ಎದ್ದು ಹೋಗಿ ವ್ಯಾಯಾಮ ಮಾಡಿ ಬಂದ ಗಂಡನಿಗೂ ಬೇಕು. ತನ್ನ ಬಿಡುವಿಲ್ಲದ ಕಾರ್ಯಗಳ ನಡುವೆ, ತನ್ನ ಹವ್ಯಾಸಗಳಿಗೆ ಆದ್ಯತೆ ಇಟ್ಟುಕೊಂಡ ಹೆಂಡತಿಗೂ ಬೇಕು. ಔಷಧೀಯ ತಪ್ಪದೇ ತೆಗೆದುಕೊಳ್ಳುವ ಅಜ್ಜಿಗೂ ಬೇಕು, ಗಿಡಗಳ ಆರೈಕೆ ನೋಡುವ ಅಜ್ಜನಿಗೂ ಬೇಕು. ಪ್ರತಿಯೊಬ್ಬರ ಸದಾಶಯ ಚಟುವಟಿಕೆಗಳಿಗೂ ಅತ್ಯಗತ್ಯ ಈ ಪ್ರಶಂಸೆ. ಮನಸ್ಸಿನ ಪೌಷ್ಟಿಕ ಆಹಾರವದು.  ಮಗುವೊಂದು ಸಧೃಡ ಮನಸ್ಥಿತಿಯಲ್ಲಿ ಬೆಳೆಯಬೇಕಾದರೆ, ಆ ಮನೆಯ ಸದ್ಯಸ್ಯರು ಪರಸ್ಪರ ತಮ್ಮ ಸಣ್ಣ ಪುಟ್ಟ ಸಾಧನೆಯನ್ನು ಅರಿತು ಪ್ರಶಂಸಿಸಬೇಕು. ಆಗ ಮಾತ್ರ ಮಕ್ಕಳಿಗೆ ತಮ್ಮ ಗುರಿಗಳತ್ತ ಸಾಗಲು ಪ್ರೋತ್ಸಾಹ ಸಿಕ್ಕಿ, ಬದುಕು ಮೌಲ್ಯಯುತವಾಗಿರುತ್ತದೆ. 

ಶಾಲೆಯ ಪಾತ್ರವೂ ಮುಖ್ಯ : ಈ ದಿನಗಳಲ್ಲಿ ಮಕ್ಕಳು ಮನೆಯಲ್ಲಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ. ಇಲ್ಲಿ ಶಿಕ್ಷಕರ ಪಾತ್ರವು ಬರುತ್ತದೆ. ಅವರು ತಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹೊಗಳಿಕೆಯನ್ನು ಬಳಸುವುದು ಮತ್ತು ಕೌಶಲ್ಯಗಳನ್ನು ಗುರುತಿಸುವುದು ಅಸಮ್ಮತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಶಾಶ್ವತವಾದ ಅನಿಸಿಕೆಗಳನ್ನು ರಚಿಸುತ್ತದೆ.

ದೊಡ್ಡ ದೊಡ್ಡ ಮಾತಿನ ಬಲೂನು ಹಿಗ್ಗಿದಾಗ್ಗೆಲ್ಲ ತಾಕಿಸು ನಿಜದ ಸೂಜಿಮೊನೆ.. ಎಂಬ ಸಾಲೇ ಹೇಳುವಂತೆ ಹೊಗಳಿಕೆ ಎಷ್ಟು ಸಹಾಯಕವೋ ಅಷ್ಟೇ ಅತಿಯಾದ ಒಣ ಹೊಗಳಿಕೆ ಅಷ್ಟೇ ಮಾರಕ. ಮುಂದೆ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಟ್ಟಾಗ, ತಮ್ಮ ಸಾಮರ್ಥ್ಯ ಕಮ್ಮಿ ಎನಿಸಿ ನಲುಗುವ ಸನ್ನಿವೇಶ ಬರಬಹುದು.  ಹೊಗಳಿಕೆಯು ಅಧಿಕೃತ ಮತ್ತು ಸಮಯೋಚಿತವಾಗಿರದಿದ್ದರೆ, ಮಕ್ಕಳು ನಿರ್ವಹಣಾ ಶಕ್ತಿಯನ್ನುಕಳೆದುಕೊಳ್ಳುತ್ತಾರೆ . ಬೇರೆಯವರ ಒಪ್ಪುವಿಕೆಯ ಮೇಲೆ ತಮ್ಮ ಬದುಕನ್ನು ಅವಲಂಭಿತ ಮಾಡಿಕೊಳ್ಳುತ್ತಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಾರೆ. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ