ಗುರುವಾರ, ಡಿಸೆಂಬರ್ 14, 2023

ಸೋಲಲಿ ಮಕ್ಕಳ ಸೋಲಿನ ಭಯ

ಮಗು ಬಿಸಿನೀರ ಕಾಯಿಸಿ, ಇಕ್ಕಳದಿಂದ ಲೋಟಕ್ಕೆ ನೀರನ್ನು ಎರಸುವಾಗ, ನೀರು ಕೆಳಗೆ ಚೆಲ್ಲಿತೋ.. "ನೀರು ಚೆಲ್ಲಿದ್ಯಾ? ಎದ್ದೇಳು ಮಾರಾಯ್ತಿ, ನಾನು ಮಾಡಿ ಕೊಡ್ತೀನಿ, ನಿಂಗೆ ಒಂದು ಕೆಲಸವೂ ನೆಟ್ಟಗೆ ಮಾಡಲು ಬರುವುದಿಲ್ಲ. ಸುಮ್ನೆ ನನಗಿಲ್ಲಿ ಒಂದಷ್ಟು ತೊಂದರೆ ಕೊಡಕ್ಕೆ.. "

ಆಟದಲ್ಲಿ ನಾಲ್ಕು ರೌಂಡ್ ಭಾಗವಹಿಸಿ, ಐದನೇ ರೌಂಡ್ ಗೆ ಸೋಲಾಗಿ ಬಂದ ಮಗುವಿಗೆ, "ಇನ್ನೊಂಚೂರು ಗಮನ ಇಟ್ಟು  ಆಡಿದ್ರೆ ಏನಾಗ್ತಿತ್ತು ನಿಂಗೆ? ಅಲ್ಲಿ ಇಲ್ಲಿ ನೋಡ್ತಾ ಕೂರ್ತೀಯ ಲೇಜಿ ತರ, ಏನ್ ಪ್ರಯೋಜನ ಈಗ ಅತ್ರೆ, ಸೀರಿಯಸ್ ಇಲ್ಲ ನೀನು ಸ್ಪೋರ್ಟ್ಸ್ ಕಡೆ, ಈ ಚಂದಕ್ಕೆ ಕೋಚಿಂಗ್ ಯಾಕೆ ನಿಂಗೆ? ಎಲ್ಲ ದುಡ್ಡು ವೇಸ್ಟ್"

"ಅಯ್ಯೋ ಅಲ್ಲಿ ಹತ್ತಬೇಡ, ಬಿದ್ದೋಗ್ತೀಯ, ಬಿದ್ದರೆ ನಾನು ಬರಲ್ಲ ಆಮೇಲೆ ಎತ್ತಕ್ಕೆ"

"ಚೆನ್ನಾಗಿ ಓದಿದ್ದೆಅಂತೀಯಾ,  ಎಕ್ಷಾಮ್ ಟೆನ್ಶನ್ ಮಾಡ್ಕೊಂಡ್ರೆ ಇನ್ನೇನಾಗತ್ತೆ, ಈಗ ಇಲ್ಲಿ ಆನ್ಸರ್ ಬರ್ತ್ತಿತ್ತು ಅಂದ್ರೆ ಏನು ಪ್ರಯೋಜನ, ಯು ಜಸ್ಟ್ ಲಾಸ್ಟ್ ಯುವರ್ ಗೋಲ್ಡನ್ಚಾನ್ಸ್" 

"ಅಯ್ಯೋ ಏನು ಕೆಟ್ಟವರು ಆ ಕೋಚ್, ಕೈ ಕಾಲಿಗೆ ನೋವಾಗಿದೆ ಅಂತಿದಾಳೆ ಮಗಳು, ಆದ್ರೂನೂ ಆಡು ಅಂತಾರಲ್ಲ, ಸ್ವಲ್ಪನೂ ಕರುಣೇನೇ ಇಲ್ಲ. ಇದೇ ತರ ನೋವಾಗಿ ನೋವಾಗಿ ಕೈ ಕಾಲು ಮುರ್ಕೊಂಡ್ರೆ?" 

"ಲಕ್ಷಗಟ್ಟಲೆ ದುಡ್ಡು ಕೊಟ್ಟು ಇಷ್ಟು ಫೇಮಸ್ಸ್ಕೂಲ್ ಗೆ ಹಾಕಿದೀವಿ,  ಗೇರ್ ಸೈಕಲ್, VR ಗೇಮ್ಸು, ಎಲ್ಲಾ ಕೊಟ್ಟಾಯ್ತು ನೀನು ಖುಷಿಗೆ, ಇನ್ನು ಒಳ್ಳೆ ಮಾರ್ಕ್ಸ್ ಬಂದಿಲ್ಲ ಅಂದ್ರೆ, ನಮ್ಮ ಲೇಔಟ್, ಅಪ್ಪನ ಕೋರ್ಟ್ ಕೊಲೀಗ್ಸ್ ಎಲ್ಲರ ಮುಂದೆ ಅವಮಾನ. ಜುಡ್ಜ್ ರಮಾನಂದ್ ಅವರ ಮಗ ಅಂದ್ರೆ ಎಲ್ಲ  ೧೦೦% ಮಾರ್ಕ್ಸ್ ಇರ್ಬೇಕು ಏನು ಗೊತ್ತಾಯ್ತಲ್ಲ?? "

ಇಂತವು ಅದೆಷ್ಟು ಮಾತು ನಾವು ನಿತ್ಯ ಮಕ್ಕಳಿಗೆ ಆಡುತ್ತೇವೆ. ಆಟದಲ್ಲಿ-ಪಾಠದಲ್ಲಿ ಸೋತಾಗ, ಮಕ್ಕಳ ಪ್ರಯತ್ನವನ್ನು ಮೊದಲು ಸಂಭ್ರಮಿಸದೇ,ಅವರ ತಯಾರಿಯ ಗುಣಮಟ್ಟವನ್ನು ಅರಿಯದೆ, ಒಮ್ಮೆಲೇ, ಫಲಿತಾಂಶ ಬಂದಾಗ, ಸೋತರೆ - ಬೈಗುಳ ನೀಡಿ, ಅವಮಾನ ಮಾಡಿ, ಸೌಲಭ್ಯಗಳ ಹಿಂಪಡೆದು, 'ಸೋಲೆಂದರೆ ಭಯ' ಎನ್ನುವಂತೆ ಮಾಡುವುದು ನಾವೇ ಅಲ್ಲವೇ? 

ಸೋಲು ಯಾರಿಗೆ ತಾನೇ ಇಷ್ಟವಾಗುತ್ತದೆ? ಉಸಿರಿಗೆ ಉಸಿರು ಹಿಡಿದು ಸ್ಪರ್ಧಿಸಿ, ಒಂದೇ ಒಂದು ಗೋಲಿನಲ್ಲಿ ಸೋತಾಗ, ಒಂದೇ ಒಂದು ಮಾರ್ಕ್ಸ್ನಲ್ಲಿ ಫೇಲ್ ಆದಾಗ, ಒಂದೇ ಒಂದು ತಪ್ಪು ಉತ್ತರದಿಂದ, ಸಂಬಂಧವನ್ನು ಕಳೆದುಕೊಂಡಾಗ, ಸೋಲು ಹಿಂಸೆಯೆನಿಸುತ್ತದೆ. ಗೆದ್ದವನ ಏಕಪಕ್ಷೀಯ ಸಂಭ್ರಮದ ಎದುರು, ಸೋಲು ನಮ್ಮನ್ನು ನಿಷ್ಕ್ರೀಯಗೊಳಿಸುತ್ತದೆ. ಸೋತಾಗ ಗೆಳೆಯರೆದುರು ಅವಮರ್ಯಾದೆಯಾಗುತ್ತದೆ. ನಾವಿಷ್ಟ ಪಡುವ ಜನರು ನಮ್ಮಿಂದ ದೂರವಾಗಿ ಗೆದ್ದವರ ಪರವಾಗುತ್ತಾರೆ, ನಿರೀಕ್ಷಕರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡು, ಆ ವರೆಗೆ ಸಿಗುತ್ತಿದ್ದ ಸೌಲಭ್ಯಗಳೆಲ್ಲ ನಮ್ಮ ಕೈತಪ್ಪಿ ಹೋಗಬಹುದು. ಜನರ ಮಧ್ಯೆ ಒಪ್ಪಿಗೆಯ ವ್ಯಕ್ತಿಯಾಗದೆ, ಬೈಯಿಸ್ಸಿಕೊಳ್ಳಬಹುದು. ಮಾಡಿದ ತಪ್ಪಿಗೆ ಅನ್ಯ ಪರಿಹಾರವಿಲ್ಲ ಎಂದು ಜರ್ಜರಿತಗೊಂಡು, ಬದುಕು ಅಂತ್ಯವೆನಿಸಬಹುದು. ಆ ಕ್ಷಣದ ಅನುಭವಗಳು ಇವುಗಳಾದರೆ, ಸೋಲನ್ನು ಕೊರಗುವಂತೆ ಮಾಡುವ ಮತ್ತೊಂದಷ್ಟುಸಮಸ್ಯೆಗಳಿರುತ್ತವೆ. ಉದಾಹರಣೆಗೆ,  ಸೋತಾಗ 'ನಾನು ನಾಲಾಯಕ್ಕು' ಎಂಬ ಸ್ವಯಂ ತೀರ್ಪು, ತನ್ನ ಗೆಲುವಿನ ಕುರಿತಾಗಿ ಇತರರಿಗಿರುವ ನಿರೀಕ್ಷೆಗೆ ಉತ್ತರವಿಲ್ಲದ ಆತಂಕ, ಹೊಸಪ್ರಯತ್ನಕ್ಕೆ ಹೆದರಿಕೆ, ಅವಮರ್ಯಾದೆ, ಸಿಟ್ಟು, ಸ್ವಂತಿಕೆ ಇಲ್ಲದೇ ಇರುವುದು, ಛಲದ ಸ್ವಭಾವದ ಕೊರತೆ, ಇತ್ಯಾದಿ ದೊಡ್ಡ ಪ್ರಮಾಣದ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. 


ಸೋಲಿನ ಭಯ ಹೋಗಲಾಡಿಸುವ ಬಗೆ :

ಸೋಲನ್ನು ಸಂಭ್ರಮಿಸುವುದ ಕಲಿಸಬೇಕು - ಮಗುವೊಂದು ಸೋತು ಮರಳಿದಾಗ ಬೈಯದೆ, ಮಗುವು ಆ ಸ್ಪರ್ಧೆಗೆ ಆಯ್ಕೆಗೊಂಡಿದ್ದಕ್ಕೆ, ಮುಂದೆ ಹೋಗಿ ಪ್ರಯತ್ನಿಸಿದ್ದಕ್ಕೆ, ಸೋಲುವ ಹಂತದವರೆಗೆ ತನ್ನ ಛಲವನ್ನು ಕಾಪಾಡಿಕೊಂಡ ಬಗ್ಗೆ , ಇತ್ಯಾದಿ ವಿಷಯಗಳ ಕುರಿತು, ಮಗುವಿನ ಸಾಮರ್ಥ್ಯಕ್ಕಿಂತಲೂ ಮೊದಲು ಪ್ರಯತ್ನಕ್ಕೆ ಪ್ರಶಂಸಿಸಿ, ಧನಾತ್ಮಕ ಅಭಿಪ್ರಾಯ ನೀಡಿ ಗೌರವಿಸಬೇಕು. ನಮ್ಮ ಪ್ರೀತಿ ಮಕ್ಕಳಿಗೆ ಅವಿರತ. ಸ್ಪರ್ಧೆಯ ಮೇಲಿನ ಫಲಿತಾಂಶದ ಮೇಲೆ ಪ್ರೀತಿ ಆಧಾರಿತ ಎಂಬ ಅಭದ್ರತೆ ಮಗುವಿಗೆ ಬರಬಾರದು. ನಂತರ ಸೋತಿದ್ದಕ್ಕೆ ಕಾರಣ, ತಪ್ಪುಗಳ ಲಿಸ್ಟ್, ಕಲಿಕೆಗೆ ಬೇಕಾದ ಅಗತ್ಯತೆ ಇತ್ಯಾದಿ ಕುರಿತಾಗಿ ಸಂಭಾಷಣೆ ನಡೆಸಬಹುದು.  

ಸೋಲಿನ ಅನುಭವ ಕಥನ - ಮಗುವಿನ ಎದುರು ಪೋಷಕರಾಗಿ ನಾವು ಹೀರೋಗಳಾಗಿರಬೇಕು ಎಂದು, ಕೇವಲ ನಮ್ಮ ಗೆಲುವು, ಪ್ರಸಿದ್ಧತೆ, ಜನರ ಹೊಗಳಿಕೆ, ಪ್ರತಿಷ್ಠೆಯನ್ನಷ್ಟೇ ಬಿಂಬಿಸುತ್ತ ಹೋಗುತ್ತೇವೆ.  ಬದಲಿಗೆ ಹಿಂದೆ  ನಾನೆಲ್ಲಿ ಎಡವಿದ್ದೆ, ಯಾವ ತಪ್ಪಿನಿಂದ ನನಗೆ ತೊಂದರೆಯಾಯಿತು ಮತ್ತು ಅದರಿಂದ ನಾನು ಹೇಗೆ ಹೊರಗೆ ಬಂದೆ ಇತ್ಯಾದಿ ಭಯ ಮತ್ತು ಸ್ಪಷ್ಟ ತಪ್ಪುಗ್ರಹಿಕೆಗಳ ಬಗ್ಗೆ ನಮ್ಮದೇ ಅನುಭವವನ್ನು  ಮಗುವಿನೊಂದಿಗೆ ಹಂಚಿಕೊಳ್ಳುವುದರಿಂದ, ಮಕ್ಕಳಲ್ಲದೆ ದೊಡ್ಡವರೂ ಕೂಡ ತಪ್ಪು ಮಾಡುತ್ತಾರೆ ಎಂಬ ಅರಿವು ಸಿಕ್ಕಿ, ಸೋಲು ಜಗದ ಅಂತ್ಯವಲ್ಲ ಎಂಬ ಭರವಸೆ ಮಗುವಿನಲ್ಲಿ ಮೂಡುತ್ತದೆ.  

ಸೋಲು, ಹಿನ್ನಡೆ ಎಲ್ಲವೂ ಬೆಳವಣಿಗೆಯ ಒಂದು ಭಾಗ -  ಮಗುವಿನ ಕೆಲಸಗಳಲ್ಲಿ ತಪ್ಪಾದಾಗ,  ಯಾವುದೇ ರೀತಿಯ ನಡುವಳಿಕೆಯ ಕುರಿತಾಗಿ ಕಾಮೆಂಟ್ ಮಾಡದೆ, ಸೋಲುಂಡು ನಂತರ ಯಶಸ್ಸನ್ನು ಕಂಡ ನಮ್ಮದೇ ಸುತ್ತಮುತ್ತಲಿನ ಜನರ ಉದಾರಹರಣೆ ನೀಡುತ್ತಾ ಆ ತಪ್ಪಿನ ಸಂದರ್ಭವನ್ನೇ ತಿಳಿಹಾಸ್ಯವಾಗಿಸಿ, ನಂತರಕ್ಕೆ ಮುಂದೇನು ಮಾಡಬಹುದು ಎಂಬುದ ಅವರಿಂದಲೇ ಕೇಳಿ, ತಿಳಿದಿಲ್ಲವಾದರೆ ತಿಳಿಸಿ ಕೊಡಬಹುದು. ಆಗ ಮಗುವಿಗೆ ಸೋಲನ್ನು ಒತ್ತಡವಾಗಿ ತೆಗೆದುಕೊಳ್ಳುವ ಪರಿಪಾಠ ತಪ್ಪುತ್ತದೆ.  

ಸೋಲನ್ನು ಒಪ್ಪಿಕೊಳ್ಳುವುದು - ತಪ್ಪು ಒಪ್ಪಿಕೊಂಡರೆ ಅದು ಕೀಳಲ್ಲ, ನಾವು ಕೆಟ್ಟವರಾಗುವುದಿಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಕಂಡ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಮಕ್ಕಳಿಗೆ ಕಲಿಸದಿದ್ದರೆ, ಸೋಲನ್ನು ಒಪ್ಪಿಕೊಳ್ಳಲಾಗದೆ, ಇತರರ ಮೇಲೆ ಅನ್ಯಥಾ ಆರೋಪ ಹೊರಿಸುವ, ಸುಳ್ಳು ಕಳ್ಳತನ ಮೋಸ ಮಾಡುವ ಹಾದಿಗೆ ಮಕ್ಕಳು ಇಳಿಯುತ್ತಾರೆ.  ತಪ್ಪು ಒಪ್ಪಿಕೊಂಡಾಗ ಗುಡ್ ಎಂದು ಒಂದು ಬೆನ್ನು ತಟ್ಟುವಿಕೆ ಇತ್ಯಾದಿ ಬೆಂಬಲ ನಾವು ನೀಡಬಹುದು. 

ಸಕಾರಾತ್ಮಕ ತಯಾರಿ - ಸಮರ್ಪಕವಾದ ತಯಾರಿ ಇಲ್ಲದಿದ್ದಲ್ಲೇ ಆತ್ಮವಿಶ್ವಾಸದ ಕೊರತೆಯಿಂದ ಮಕ್ಕಳಿಗೆ ಸೋಲಿನ ಆತಂಕ ಮೂಡುತ್ತದೆ. ಅಗತ್ಯ ತರಬೇತಿ, ನಿಯಮಿತ ತಯಾರಿ, ಆಗಾಗ ಪರೀಕ್ಷೆ ಹೂಡಿ ಗುಣಮಟ್ಟ ಪರಿಶೀಲನೆ ಇತ್ಯಾದಿ ಕ್ರಮಗಳ ಮೂಲಕ, ಮಕ್ಕಳನ್ನು ಮಾನಸಿಕವಾಗಿ ತಯಾರು ಮಾಡಿದರೆ, ಸೋಲಿನ ಆತಂಕ ಮಕ್ಕಳಲ್ಲಿ ಹೆಚ್ಚಾಗುವುದಿಲ್ಲ.  

ಅನೇಕ ಸಾರಿ ಮಕ್ಕಳ ಸೋಲಿನ ನೋವಿಗಿಂತಲೂ,  ಅವರ ಆ ಸ್ಪರ್ಧೆಯ ಪರೀಕ್ಷೆಯ ತಯಾರಿಗೆ, ನಾವು ತೆಗೆದುಕೊಂಡ ಶ್ರಮಕ್ಕೆ ಪ್ರತಿಫಲ ಸಿಗದ ಹತಾಶೆಗೆ ನಾವು ಆತಂಕವನ್ನು ನಿರ್ವಹಿಸಿಕೊಳ್ಳಲಾಗದೆ, ನಮ್ಮ ಮರ್ಯಾದೆಯನ್ನು ಮಕ್ಕಳ ಮರ್ಯಾದೆಗೆ ಜೋಡಿಸಿ, ಬೈದು ಅವಮಾನ ಮಾಡುತ್ತೇವೆ . ಮಕ್ಕಳ ಸೋಲಿನ ಸಮಯದಲ್ಲಿ ನಮ್ಮ ಪ್ರತಿಕ್ರಿಯೆಯನ್ನು ಗಮನಿಸಿಕೊಂಡು, ಅವಾಸ್ತವಿಕ ನಿರೀಕ್ಷೆ ಇಟ್ಟುಕೊಂಡು ಮಗುವಿಗೆ ಒತ್ತಡ ನೀಡದೆ, ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಪ್ರಯತ್ನಿಸಿದ್ದಾರೆ ಎಂಬ ಧನಾತ್ಮಕ ಸಮಾಧಾನ ತಂದುಕೊಳ್ಳಬೇಕು. 

ಪ್ರತಿಯೊಂದು ಮಗುವೂ ಅನನ್ಯ. ಎಲ್ಲಾ ವಿಷಯಕ್ಕೂ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ.  ಎಲ್ಲದರಲ್ಲಿ ಸಾಧ್ಯವಾಗದಿದ್ದರೂ , ಮಗುವು ಕೌಶಲ್ಯವನ್ನು ಹೊಂದಿರುವ ವಿಷಯಗಳ ಹುಡುಕಿ, ಪ್ರೋತ್ಸಾಹ ನೀಡಿದರೆ, ಆಗಾಗ್ಗೆ ಅವರ ಐಚ್ಛಿಕ ವಿಷಯಗಳಲ್ಲಿ ಅವರ ವೃದ್ಧಿಯನ್ನು ಕಂಡು ಪ್ರಶಂಸಿದರೆ, ಆಗ ಅವರ ಆತ್ಮವಿಶ್ವಾಸ ಹೆಚ್ಚಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆಸಹಾಯಕವಾಗುತ್ತದೆ . ಮಕ್ಕಳ ಕಲಿಕೆಗೆ  ಶ್ರದ್ಧೆಯಿಂದ ತಯಾರೀ ಮಾಡುವ ಕಡೆಗೆ ನಮ್ಮ ಬೆಂಬಲ ನೀಡಬೇಕೆ ಹೊರತು, ಮಕ್ಕಳಿಂದಾಗದ ಸಾಮರ್ಥ್ಯದ ಕೆಲಸಕ್ಕೆ ದೂಷಿಸುವುದು ಸಲ್ಲ. 

ಮಕ್ಕಳನ್ನು ಹೆಚ್ಚು ರಕ್ಷಣಾತ್ಮಕವಾಗಿ ಬೆಳೆಸದೇ, ನೈಜ ಜಗತ್ತಿನಲ್ಲಿ ಬದುವುದಕ್ಕೆ ಅವಕಾಶ ಮಾಡಿಕೊಡಬೇಕು. ಏಳು ಬೀಳುಗಳು ಗಾಯ ನೋವುಗಳು, ಸಣ್ಣ ಪುಟ್ಟ ಅವಮಾನಗಳು ಎಲ್ಲವನ್ನೂ ಮಕ್ಕಳು ಅನುಭವಿಸಬೇಕು. ಜನರೊಂದಿಗೆ ಬೆರೆತು ಆಡುವ ಕಲಿಯುವ ಒಡನಾಟ ಸಿಕ್ಕರೆ, ಸೋಲುಂಡರೂ ಮಕ್ಕಳು ಇತರರ ಅನುಭವನನ್ನೂ ಗ್ರಹಿಸುವುದರಿಂದ, ಹೆಚ್ಚು ಕೊರಗಿ ಕ್ಷೀಣಿಸುವುದಿಲ್ಲ. 

ಪರೀಕ್ಷೆ ಭಯ ಹೋಗಲಾಡಿಸಲು, ಅಂಕಗಳಿಗಾಗಿ ಓದು ಅಲ್ಲ, ಜ್ಞಾನ ಪಡೆಯಲಾಗಿ ಶಿಕ್ಷಣ, ತಪ್ಪಾದರೆ ಮತ್ತೆ ಕಲಿಯೋಣ ಎಂಬ ಧೈರ್ಯ ನೀಡಬೇಕು.  ಮಕ್ಕಳು ಭಯಪಡುವ ಚಟುವಟಿಕೆಗಳಲ್ಲಿ ಅವರೊಂದಿಗೆ ಸಹಾಯಕ್ಕೆ ನಿಂತು ಅವರನ್ನು ತೊಡಗಿಸಿಕೊಳ್ಳಬೇಕು. ಸೋಲಲಿ ಮಕ್ಕಳು ಮೊದಲಿಗೆ, ಸೋತು ನಂತರ ಗೆಲ್ಲಲಿ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ