ಗುರುವಾರ, ಜೂನ್ 20, 2024

ಸ್ತ್ರೀ 'ಯೋಗ'ಕ್ಷೇಮ

ಯೋಗ ಎನ್ನುವುದು ಭಾರತವು ಪ್ರಪಂಚಕ್ಕೆ ನೀಡಿದ ಒಂದು ದೊಡ್ಡ ಕೊಡುಗೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ೬೦೦೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ, ಆದರೆ ಸರ್ವಕಾಲಕ್ಕೂ ಅನ್ವಯವಾಗುವ ಭೌತಿಕ, ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗದ ಮಹತ್ವವನ್ನು ಪ್ರಪಂಚದಾದ್ಯಂತ ಸಾರುವ ಉದ್ದೇಶದಿಂದ, ಅಂತರಾಷ್ಟೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು ೨೦೧೪ ರಲ್ಲಿ, ವಿಶ್ವ ಸಂಸ್ಥೆಗೆ ಮಂಡಿಸಿದ್ದರು. ೧೯೩ ರಾಷ್ಟ್ರಗಳ ಪೈಕಿ ೧೭೭ ದೇಶಗಳ ಪ್ರತಿನಿಧಿಗಳು  ತಕ್ಷಣಕ್ಕೆ ತಮ್ಮ ಅನುಮೋದನೆ ನೀಡಿದ ಐತಿಹಾಸಿಕ ಕ್ಷಣವದು! ೨೦೧೫ ಜೂನ್ ೨೧ ರಿಂದ ಪ್ರಾರಂಭವವಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಜೂನ್ ೨೧, ಭೂಮಿಯ ಉತ್ತರ ಗೋಳಾರ್ಧದ ದಲ್ಲಿ ಅತ್ಯಂತ ದೀರ್ಘ ಹಗಲು ಹೊಂದಿರುವ ದಿನ. ಈ ದಿನ ಸೂರ್ಯ ಬೇಗನೆ ಉದಯಿಸುತ್ತಾನೆ ಮತ್ತು ತಡವಾಗಿ ಅಸ್ತಮಿಸುತ್ತಾನೆ. ಸೂರ್ಯನಿಂದ ಬರುವ ಶಕ್ತಿಯು ಈ ದಿನಕ್ಕೆ ವೈಜ್ಞಾನಿಕವಾಗಿ ಹೆಚ್ಚು ಪರಿಣಾಮವನ್ನು ಬೀರುವ ದಿನವಾಗಿರುವುದರಿಂದ, ಪ್ರಕೃತಿಯ ಧನಾತ್ಮಕ ಶಕ್ತಿಯೊಂದಿಗೆ, ಯೋಗ ಸಾಧನೆ ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ.  ೨೦೨೪ ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ "ಮಹಿಳಾ ಸಬಲೀಕರಣಕ್ಕಾಗಿ ಯೋಗ". 
ಮಹಿಳೆಯರ ಆರೋಗ್ಯ :

ಮಹಿಳೆಯರು ಕುಟುಂಬ ಮತ್ತು ಸಮಾಜದ ಮೂಲಾಧಾರ. ಪ್ರತೀ ಮಹಿಳೆಗೂ ಮನೆ, ಉದ್ಯೋಗ, ಮಕ್ಕಳು ಎಲ್ಲವನ್ನೂ ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ತಾಳ್ಮೆ, ಏಕಾಗ್ರತೆ ಅತ್ಯಗತ್ಯ.ಅದರ ಜೊತೆಗೆ, ಸುತ್ತಲಿರುವ ಎಲ್ಲವನ್ನೂ ಕಾಳಜಿ ವಹಿಸುವಾಗ, ಅವರು ಆಗಾಗ್ಗೆ ತಮ್ಮ ಆರೋಗ್ಯದ ಕಾಳಜಿ ಮರೆತುಬಿಡುತ್ತಾರೆ.  ಮಹಿಳೆಯರು ತಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸ್ತಿಮಿತದಲ್ಲಿಟ್ಟುಕೊಳ್ಳುವುದು ತಮಗೆ ತಾವೇ ಮತ್ತು ತಮ್ಮ ಮೇಲೆ ಅವಲಂಭಿತ ಎಲ್ಲ ಜನರಿಗೂ ನೀಡುವ ಕೊಡುಗೆಯದು. ಯೋಗ ಕೇವಲ ಮೈಮುರಿಯುವ, ತೂಕ ಇಳಿಸುವ ವಿಧಾನವಲ್ಲ; ಉಸಿರಾಟದ ಏರಿಳಿತದೊಂದಿಗೆ ಆಮ್ಲಜನಕದ ಪೂರೈಕೆ ಮತ್ತು ವಿಷಾಣುಗಳ ಹೊರದಬ್ಬುವಿಕೆ ಸಾಧ್ಯವಾಗುವುದರ ಜೊತೆಗೆ, ನಿಧಾನವಾಗಿ ದೇಹದ ಅಂಗಾಂಗಳನ್ನು ಏಕಾಗ್ರತೆಯಿಂದ ಎಳೆದು ಹಿಗ್ಗಿಸುವುದರಿಂದ, ದೇಹಕ್ಕೆ ಮತ್ತು ಮನಸ್ಸಿಗೆ ಬೇಕಾದ ವಿಶ್ರಾಂತಿಯೂ ದೊರೆತಂತಾಗುತ್ತದೆ, ದೇಹದೊಳಗಿನ ಮಲಿನ ಬೆವರಿನ ಮೂಲಕ ನೀಗಿ ನವಚೈತನ್ಯದ ಶಕ್ತಿ ಪೂರೈಕೆಯಾಗುತ್ತದೆ. 
ಯೋಗ ಹೇಗೆ ಸಹಾಯಕ :

ಯಾವುದೇ ಮಹಿಳೆಯ ದೇಹ ಬೆಳವಣಿಗೆಯ ಪ್ರಮುಖ ಹಂತದಿಂದ ಪ್ರಾರಂಭವಾಗಿ, ಋತುಬಂಧ, ಎಂಡೊಮೆಟ್ರಿಯೊಸಿಸ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಗರ್ಭಾಶಯದ ಫೈಬ್ರಾಯ್ಡ್ಗಳು, ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಮತ್ತು ಗರ್ಭಧಾರಣೆಯಂತಹ ಕೆಲವು ವೈದ್ಯಕೀಯ ಸ್ಥಿತಿಯನ್ನು ಅನುಭವಿಸುತ್ತಿರುವ ಮಹಿಳೆಯರು ಯೋಗದಿಂದ ನಿಜವಾಗಿಯೂ ಪ್ರಯೋಜನ ಪಡೆಯಬಹುದು. ಗರ್ಭಾವಸ್ಥೆಯಲ್ಲಿ ಧ್ಯಾನ, ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಮತ್ತು ಯೋಗವನ್ನು ಅಭ್ಯಾಸ ಮಾಡುವುದರಿಂದ ಮೂಡ್ ಸ್ವಿಂಗ್ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೆಲ್ವಿಕ್‌ ಮಸಲ್ಸ್‌ನ್ನು ಸಡಿಲಗೊಳಿಸಿ ಹೆರಿಗೆ ಸಹಜವಾಗಿ ಆಗಲು ಯೋಗಾಸನಗಳು ಸಹಕಾರಿಯಾಗಿವೆ. ಯೋಗಾಭ್ಯಾಸ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರ ರೀತಿಯಲ್ಲಿ ಇರಿಸಿಕೊಳ್ಳಲು, ನಿಯಮಿತವಾಗಿ ಋತುಚಕ್ರವನ್ನು ಹೊಂದಲು ಮತ್ತು ಮುಟ್ಟಿನ ಸಮಯದಲ್ಲಿ ಕಂಡುಬರುವ ನೋವು ಮತ್ತು ಅಸ್ವಸ್ಥತೆಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನಿಯಮಿತ ಯೋಗಾಭ್ಯಾಸವು ಸ್ತನ ಕ್ಯಾನ್ಸರ್ ರೋಗಲಕ್ಷಣಗಳನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಮೂಳೆಗಳ ಆರೋಗ್ಯ, ಹೃದಯದ ಆರೋಗ್ಯವನ್ನೂ ಕೂಡ ಇದು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹಾರ್ಮೋನ್ ಸಮತೋಲನವನ್ನು ಸುಧಾರಿಸುತ್ತದೆ. ಇದು ಸ್ನಾಯುಗಳು ಮತ್ತು ಕೀಲುಗಳ ಚಲನಶೀಲತೆಯನ್ನು ಬಲಪಡಿಸುತ್ತದೆ, ನಮ್ಯತೆ ಮತ್ತು ಸಹಿಷ್ಣುತೆಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಮಹಿಳೆಯರ ಸೌಂದರ್ಯ ಇಮ್ಮಡಿಸಲು ಯೋಗವು ಸಹಾಯ ಮಾಡುತ್ತದೆ. 

ಯೋಗವೆಂದರೆ ಕೇವಲ ಆಸನಗಳಷ್ಟೇ ಅಲ್ಲ; ಉಸಿರಾಟದ ತರಬೇತಿ ಒಂದೇ ಅಲ್ಲ! ಮೂಢ ಚಿತ್ತವನ್ನು ಶುದ್ಧಗೊಳಿಸಲು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳೆಂಬ 8 ಮಾರ್ಗಗಳುಂಟು. ಅಹಿಂಸೆ, ಸತ್ಯ, ನಡತೆಯಲ್ಲಿ ಶುಚಿತ್ವ, ಕದಿಯದಿರುವುದು, ಅನಗತ್ಯ ವಸ್ತುಗಳಿಗೆ ಮೋಹಗೊಳ್ಳದೆ ಸರಳ ಜೀವನ ನಡೆಸುವುದು, ಶುಚಿಯಾದ ಆಚಾರ ವಿಚಾರ, ತೃಪ್ತಿ, ಕೃತಜ್ಞತೆ, ನಿರಂತರ ಕಲಿಕೆ - ಸ್ವಾಧ್ಯಾಯ, ಗುರುವಿನ ಸೇವೆ ಇತ್ಯಾದಿ ಯಮ ನಿಯಮಗಳ ಸೂತ್ರಗಳೂ ಕೂಡ ಯೋಗವೇ. ಇತರರ ಏಳಿಗೆ ಕಂಡುಈರ್ಷ್ಯೆಗೊಳ್ಳದೇ, ಸಹಕಾರದಿಂದ ಬಾಳುವುದು ಕೂಡ ಒಂದು ಯೋಗಿಯ ಜೀವನಶೈಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ