ಮಂಗಳವಾರ, ಜೂನ್ 4, 2024

ಪರಿಸರ ಪರಿವೃತ್ತ - ವಿಶ್ವ ಪರಿಸರ ದಿನ

ಈ ಸಲದ ಬೇಸಿಗೆಯಲ್ಲಿ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಟ ತಾಪಮಾನ ೪೧ ಡಿಗ್ರಿ! ಮಳೆ ಪ್ರಾರಂಭವಾಗಿ ಎರಡು ದಿನಗಳ ಸತತ ಮಳೆಗೆ, ಮರಗಳು ಧರೆಗುರುಳಿ, ಮನೆಗಳಿಗೆ ನೀರು ನುಗ್ಗಿ ಅದೆಷ್ಟೆಷ್ಟೋ ಆವಾಂತರಗಳಾಗಿವೆ. ವಾತಾವರಣ ಮುಂಚಿನಂತಿಲ್ಲ; ಬದಲಾಗುತ್ತಿದೆ, ನಮ್ಮ ನಿಯಂತ್ರಣಕ್ಕೆ ದಕ್ಕುವುದಲ್ಲ ಇದಿನ್ನು ಎಂದು ಹಿರಿಯರೊಬ್ಬರು ಹೇಳುತ್ತಿರುವುದ ಕಂಡೆ. ನಾವಿರುವ ಊರಿನಲ್ಲೇ ಆಗುತ್ತಿರುವ, ನಮಗೆ ಅಹಿತಕರ ಎನಿಸುವ ಬದಲಾವಣೆಗಳು, ನಮ್ಮ ಗಮನಕ್ಕೆ ಸಿಗುತ್ತಲಿವೆ, ಆದರೆ ಈ ವಿಶ್ವಕ್ಕೆ, ಪರಿಸರಕ್ಕೆ, ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವ ಹಾನಿ ಮಾತ್ರ ಇನ್ನೂ ಕೂಡ ನಮ್ಮ ನಿಲುಕೆಗೆ ಸಿಕ್ಕಿಲ್ಲ. ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಅದರಲ್ಲಿ ಮನುಷ್ಯರೇ ಸರ್ವಸ್ವ ಅಲ್ಲ, ನಾವು ಒಂದು ಭಾಗ ಮಾತ್ರ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಎಲ್ಲರಿಗಾಗಿಯೂ ಉಳಿಯುವುದು ಬಹಳ ಮುಖ್ಯ. ಯಾವುದೇ ಒಂದು ಸಂಪನ್ಮೂಲದ ಸಮತೋಲನ ಕಳೆದರೂ ನಮಗೇ ಉಳಿಗಾಲವಿಲ್ಲ. ಅದೇ ಉದ್ದೇಶದಿಂದ .  ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಪರಿಸರದ ಕಾಳಜಿಯನ್ನು ಜಾಗೃತಿಗೊಳಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ೧೯೭೪ ರಿಂದ ಪ್ರಾರಂಭಿಸಿ, ಪ್ರತಿವರ್ಷ, ಜೂನ್ ೫ ರಂದು 'ವಿಶ್ವ ಪರಿಸರ ದಿನ'ವನ್ನಾಗಿ ಆಚರಿಸಲು ಘೋಷಿಸಿದೆ. ಭಾರತ ಸೇರಿದಂತೆ ಸುಮಾರು ೧೪೩ ದೇಶಗಳು ಈ ದಿನವನ್ನು ಪ್ರತಿ ವರ್ಷ ವಿಶಿಷ್ಟ ಘೋಷಿತ ಥೀಮ್ ನೊಂದಿಗೆ ಆಚರಿಸುತ್ತವೆ. ಇವೆಲ್ಲ ಬಿಬಿಎಂಪಿಯವರು, ಸರ್ಕಾರದವರು, ಕೇಂದ್ರ ಆಡಳಿತಗಾರರು ಮತ್ತಿನ್ಯಾರೋ ಈ ದಿನಕ್ಕೆ ಹಮ್ಮಿಕೊಳ್ಳುವ ಒಂದೆರಡು ಕಾರ್ಯಕ್ರಮ ಅಷ್ಟೇ ಎಂದು ನೀವು ತಿಳಿದಿದ್ದರೆ ಅದು ಖಂಡಿತ ತಪ್ಪು. ವಿಶ್ವ ಪರಿಸರ ದಿನ ಎಂದರೆ, ಸಣ್ಣವರು ದೊಡ್ಡವರೆನ್ನದೆ ಭೂಮಿಯ ಸಂಪನ್ಮೂಲ ಬಳಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರಕ್ಕೆ ಮರಳಿ ಹೇಗೆ ಸಹಾಯ ಮಾಡುತ್ತೇನೆಎಂಬುದ ಸಂಕಲ್ಪ ಮಾಡಿಕೊಳ್ಳುವ ಪ್ರಮುಖ ದಿನವಿದು. ಈ ವರ್ಷದ ಥೀಮ್ - "ನಮ್ಮ ಭೂಮಿ, ನಮ್ಮ ಭವಿಷ್ಯ, ನಾವೇ ಮುಂದಿನ ಪೀಳಿಗೆಯ ಪುನ್ಹಸ್ಥಾಪಕರು" ಅಂದ ಮೇಲೆ, ನಮ್ಮ ಮೇಲೆ ಅದೆಷ್ಟು ಜವಾಬ್ಧಾರಿಗಳಿಗೆ ಎಂಬುದ ಯೋಚಿಸಿ. 

ಸಾಮಾನ್ಯ ಮನುಷ್ಯನ ಆಚರಣೆ ಹೇಗೆ? 

ನಾವು ಮನುಷ್ಯರ ಆರಾಮಕ್ಕಾಗಿ ಸಂಪನ್ಮೂಲಗಳ ಬಳಕೆ ಈಗೆಂತೂ ಮಿತಿಮೀರಿ ಹೋಗಿದೆ. ಅರಣ್ಯ ನಾಶ ಆಗುತ್ತಿರುವುದು, ಭೂಮಿಯ ಸತ್ವದ ಸವೆತಕ್ಕೆ ನಾಂದಿಯಾಗಿದೆ, ಇನ್ನು ಹೆಚ್ಚಿಸುವ ಮಾತೆಂತೂ ದೂರ. ಬೇಸಿಗೆಯಲ್ಲಿ ನೀರಿನ ಬರ ಕಂಡು ಮತ್ತೆ ಮಳೆಗಾಲದ ತುಸು ನೀರಿಗೆ, ತೊಂದರೆಯನ್ನು ಅಲ್ಲಿಗೇ ಮರೆತುಬಿಡುವ ಜಾಯಮಾನ ನಮ್ಮದು. ಸಣ್ಣ ಪುಟ್ಟ ಜಾಗೃತ ಜೀವನಶೈಲಿ ನಮ್ಮದಾಗಿದ್ದರೆ ಸಾಕು, ನಮ್ಮ ಸುಂದರ ಪರಿಸರವನ್ನು, ನಮ್ಮ ಭವಿಷ್ಯವನ್ನು ನಾವೇ ಸ್ಥಾಪಿಸಬಹುದು.ನಾವು ಯಾರೇ ಆದರೂ ಖಂಡಿತ 'ಮಾಡಬಹುದಾದ' ಒಂದಷ್ಟು ಪರಿಸರಸ್ನೇಹಿ ಟಿಪ್ಸ್ ಗಳು. 

 ನಮ್ಮ ಅವಶ್ಯಕತೆಗಾಗಿ ಅತಿಯಾದ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ಭೂಮಿಯಿಂದ ಹೊರತೆಗೆಯುವ ಘಟಕಗಳಿಂದ, ಭೂಮಿಯ ಫಲವತ್ತತೆ ಮತ್ತು ಸ್ಥಿರತೆ ಎರಡೂ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದೆ.   ಪಳೆಯುಳಿಕೆಗಳು, ನವೀಕರಿಸಲಾಗದ ತೈಲ ಅನಿಲಗಳು ಯಾವುವು, ನವೀಕರಣಗೊಳ್ಳುವ ಸಂಪನ್ಮೂಲಗಳ ಬಗ್ಗೆ ಜ್ಞಾನ ಪಡೆಯುವುದು ಮೊದಲು ನಾವು ಮಾಡಬೇಕಾದ ಕೆಲಸ. ಸೌರಶಕ್ತಿ, ವಿದ್ಯುಚ್ಛಕ್ತಿಯಂತಹ, ಹೆಚ್ಛೆಚ್ಚು ಪರಿಸರ ಸ್ನೇಹಿ ಸಂಪನ್ಮೂಲಗಳ ಬಳಕೆಯ  ವಿಧಾನಗಳನ್ನು ನಿತ್ಯಜೀವನಕ್ಕೆ ಅಳವಡಿಸಿಕೊಳ್ಳುವುದು,  ಹತ್ತಿರದ ಸ್ಥಳಗಳಿಗೆ ಗಾಡಿ ತೆಗೆದುಕೊಳ್ಳದೆ, ಕಾಲ್ನಡಿಗೆ ಅಥವಾ ಸೈಕಲ್ ಬಳಸಿ ಹೋಗುವುದು ಇತ್ಯಾದಿ ಪ್ರಯತ್ನ ನಮ್ಮಿಂದ ಸಾಧ್ಯವಿದೆ.  

ಮಣ್ಣನ್ನು ಹಿಡಿದಿಡುವಲ್ಲಿ, ಅಂತರ್ಜಲ ಕಾಪಾಡುವಲ್ಲಿ, ಮಾಲಿನ್ಯದ ಪ್ರಮಾಣ ತಗ್ಗಿಸುವಲ್ಲಿ ಹಸಿರು ಅತ್ಯವಶ್ಯಕ. ಗಿಡಮರಗಳನ್ನು ನೆಟ್ಟು ಬೆಳೆಸುವ ಸ್ಥಳ ಮತ್ತು ಅವಕಾಶವನ್ನು ಹುಡುಕಿ ಸಾರ್ವಜನಿಕ ಅಥವಾ ವೈಯುಕ್ತಿಕ ಅಭಿಯಾನಗಳನ್ನು ನಡೆಸಬಹುದು. ಈ ಸರ್ತಿಯ ಮಳೆಗಾಲದಲ್ಲಿ ಖಂಡಿತ ಒಂದಾದರೂ ಗಿಡ ನೆಟ್ಟು ಬೆಳೆಸುವ ಸಂಕಲ್ಪ ಮಾಡಬಹುದು. ಹುಟ್ಟಿದ ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಬಹುದು. ಕನಿಷ್ಠ ಪಕ್ಷ ಮನೆಯ ಬಾಲ್ಕನಿಯಲ್ಲಿ ಸಣ್ಣ ಪುಟ್ಟ  ೫-೬ ಹಸಿರು ಗಿಡಗಳ ಗಾರ್ಡನ್ ಬೆಳೆಸಿಕೊಂಡರೂ ಸಾಕು.



ಭೂಮಿಯಲ್ಲಿ ಸಿಗುವ ಸಿಹಿನೀರಿನ ಪ್ರಮಾಣ ಕೇವಲ ೩.೫% ಮಾತ್ರ! ಬಾಕಿ ಎಲ್ಲವೂ ಸಮುದ್ರದ ಉಪ್ಪು ನೀರು. ಹಾಗಾಗಿ ಕೇವಲ ಬರಗಾಲಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಅಚ್ಚುಕಟ್ಟಾಗಿ ನೀರಿನ ಬಳಕೆ ರೂಢಿಸಿಕೊಳ್ಳುವುದು ನಾವು ಪರಿಸರಕ್ಕೆ ನೀಡುವ ಕೃತಜ್ಞತೆ.  

ಹಸಿ ಕಸವನ್ನು ಹೆಚ್ಚು ಬಿಸಾಡದೆ, ಮನೆಯಲ್ಲಿಯೇ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಬಹುದು. ಸ್ವಂತಕ್ಕೆ ಬಳಕೆ ಅಥವಾ ಗೊಬ್ಬರ ತಯಾರಿಸಿ ಗಿಡ ಬೆಳೆಯುವವರಿಗೆ ಹಂಚಿದರೂ ಕೂಡ ಪರಿಸರಕ್ಕೆ ಮತ್ತು ಸ್ನೇಹಿತರಿಗೆ ನೀಡಬಹುದಾದ ಒಂದು ಉತ್ತಮ ಉಡುಗೊರೆ.   


 

ಪ್ಲಾಸ್ಟಿಕ್ ಸೇರಿದ ಭೂಮಿಯಲ್ಲಿ ಯಾವ ಪೈರೂ ಬೆಳೆಯಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಉತ್ಪಾದನೆ ಕಮ್ಮಿ ಆಗಬೇಕೆಂದರೆ, ಅದಕ್ಕೆ ಮೊದಲು ನಮ್ಮಿಂದಲೇ ಬೇಡಿಕೆ ಕಮ್ಮಿ ಮಾಡಿಕೊಳ್ಳಬೇಕು. ಸ್ವಲ್ಪವೇ ಸ್ವಲ್ಪ ಗಮನಿಸುವಿಕೆ ಮತ್ತು ಜಾಣತನ ಸಾಕು ಇದಕ್ಕೆ. ಇಡೀ ತಿಂಗಳಿಗೆ ಬೇಕಾಗುವ ಮನೆ ವಸ್ತುಗಳ ದೊಡ್ಡ ಪ್ಯಾಕೇಟುಗಳಲ್ಲೂ ಖರೀದಿಸಿ, ಸಣ್ಣ ಸಣ್ಣ ಅತ್ಯಧಿಕ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ಮನೆಗೆ ತರುವುದ   ಕಡಿಮೆಯಾಗುತ್ತದೆ. ಒಂದು ಉಪಾಯ - ತಿಂಗಳಿಗೊಮ್ಮೆ ಎಷ್ಟು ಪ್ಲಾಸ್ಟಿಕ್ಗಳನ್ನು ನಾವು ಅನಾವಶ್ಯಕ ಬಳಸುತ್ತಿದ್ದೇವೆ ಎಂದು ಹುಡುಕಿ ಪಟ್ಟಿ ಮಾಡಿಕೊಳ್ಳುವುದು. ನಂತರ ಅದಕ್ಕೆ ಪರ್ಯಾಯ ವ್ಯವಸ್ಥೆ ಹುಡುಕುವುದು, ಅದಾಗಲೇ ಮನೆಗೆ ಬಂದಿರುವ ಕವರ್ಗಳನ್ನು ಒಪ್ಪವಾಗಿ ಕತ್ತರಿಸಿಟ್ಟುಕೊಂಡು ಅವಶ್ಯಕತೆ ಇದ್ದಲ್ಲಿ ಪುನರ್ಬಳಕೆ ಮಾಡಬಹುದು.  ಹಲವು ಬಳಕೆಯ ನಂತರ, ಎಲ್ಲೆಲ್ಲೋ ಬಿಸಾಡದೆ, ಒಟ್ಟು ಮಾಡಿ ಪ್ಲಾಸ್ಟಿಕ್ಆಯುವವರಿಗೆ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವಷ್ಟು ಸಣ್ಣ ಸಣ್ಣ ಶ್ರಮ ನಾವು ತೆಗೆದುಕೊಂಡರೆ, ನೆಲದಲ್ಲಿ ಕರಗದ, ವಿಷಪೂರಿತ ಪ್ಲಾಸ್ಟಿಕ್ ಉತ್ಪಾದನೆ ಗಣನೀಯವಾಗಿ ಕಡಿಮೆ ಮಾಡಬಹುದು. 

ಕೊನೆಯದ್ದು ಮತ್ತು ಕಳಪೆಯಲ್ಲದ ಕೊಡುಗೆ ಎಂದರೆ, ನಮಗೆ ಬಿಡುವಿದ್ದಾಗ, ವಾರಕ್ಕೊಮ್ಮೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಸ್ವಯಂಸೇವೆ ಮಾಡುವುದು. ಒಂದು ೨೦ ನಿಮಿಷದ ಶ್ರಮದಾನ ನಮಗೆ ಯಾವ ಹಾನಿಯನ್ನೂ ಮಾಡುವುದಿಲ್ಲ ಆದರೆ ನಮ್ಮದೇ ಭೂಮಿಗೆ ಆಗುವ ಸಹಾಯ ಮಾತ್ರ ಅಪಾರ. ಅದೊಂದು ಧ್ಯಾನ, ಕರ್ಮಯೋಗ! ನಾವೂ ಕಸ ಹರಡದೇ, ಇತರರೂ ಕಸ ಹರಡದಂತೆ ತಡೆದು ಅವರಿಗೆ ಮಾರ್ಗದರ್ಶನ  ನೀಡುವುದು ಪುಣ್ಯದ ಕೆಲಸ. ಉದಾಹರಣೆಗೆ ನಮ್ಮ ಸಂತೋಷಕ್ಕೆಂದು ಚಾರಣಕ್ಕೆ ಪ್ರವಾಸೀ ಸ್ಥಳಗಳಿಗೆ ಹೋದಾಗ, ಅಲ್ಲಿಯ ಪರಿಸರವನ್ನು ಸ್ವಚ್ಛವಾಗಿಸಿ ಬರುತ್ತೇವೆ  ಎಂಬ ಸಂಕಲ್ಪ ತೆಗೆದುಕೊಳ್ಳಬಹುದು. ಹೀಗೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕೈಜೋಡಿಸಿದರೆ, ನಮ್ಮ ಪರಿಸರದಲ್ಲಿ, ಸುಂದರವಾದ ಭೂಮಿ, ಸ್ವಚ್ಛ ಉಸಿರಾಡುವ ಗಾಳಿ, ಶುದ್ಧ ಕುಡಿಯುವ ನೀರು, ಮಾಲಿನ್ಯರಹಿತ, ಆರೋಗ್ಯಕರ ಆಹಾರ, ರೋಗರಹಿತ ಬದುಕನ್ನು ನಾವೇ ಕಟ್ಟಿಕೊಳ್ಳಬಹುದು. 

ನೆನಪಿನಲ್ಲಿರಲಿ,  "ನಮ್ಮ ಭೂಮಿ, ನಮ್ಮ ಭವಿಷ್ಯ, ನಾವೇ ಮುಂದಿನ ಪೀಳಿಗೆಯ ಪುನ್ಹಸ್ಥಾಪಕರು"




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ