ಭಾನುವಾರ, ಜೂನ್ 23, 2024

ಲಂಕಾವಿ - ಸ್ಕೈಕ್ಯಾಬ್ ಮತ್ತು ಸ್ಕೈಬ್ರಿಜ್

ಮಲೇಷಿಯಾದಲ್ಲಿ ಎರಡನೇ ದಿನಕ್ಕೆ ನಮ್ಮ ತಿರುಗಾಟ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ನಲ್ಲಿರುವ ಸ್ಕೈಕ್ಯಾಬ್ ಮತ್ತು ಸ್ಕಾಯ್ಬ್ರಿಡ್ಜ್ ನ ಕಡೆಗಿತ್ತು. ಲಂಕಾವಿಯಿಂದ ಟಾಕ್ಸಿ ಅಥವಾ ಸ್ವಂತ ಗಾಡಿಯಲ್ಲಿ ಹೋಗಬಹುದಾದ ೩೫ ನಿಮಿಷಗಳ ಹಾದಿ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ ಹತ್ತಿರವಾಗುತ್ತಿದ್ದಂತೆಯೂ, ತನ್ನ ಹಸುರಿನ ಹಾದಿಯೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಲಂಕಾವಿಯ ವಾಯುವ್ಯದಲ್ಲಿರುವ ಮಚಿನ್‌ಚಾಂಗ್  ಸುಮಾರು ೧೦,೦೦೦ ಹೆಕ್ಟೇರ್ ವಿಸ್ತೀರ್ಣಕ್ಕೆ ಹಬ್ಬಿರುವ ಖಾಯಂ ಅರಣ್ಯ ಮೀಸಲು ಪ್ರದೇಶವನ್ನು ಒಳಗೊಂಡಿದೆ.  ಯುನೆಸ್ಕೋ ಸಂರಕ್ಷಿತ ಈ ಪಾರ್ಕ್ ಪ್ರದೇಶಗಳಲ್ಲಿ ಒಂದಾದ ಮಚಿನ್‌ಚಾಂಗ್‌ನ ಪರ್ವತ ಶ್ರೇಣಿ ಸಾವಿರಾರು ವರ್ಷಗಳಿಂದ ಮೂಡಿರುವ ಸುಣ್ಣದ ಕಲ್ಲಿನ ರಚನೆಗಳು, ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಸಂಚಿತ ಶಿಲಾ ಪದರಗಳ ರಚನೆಗಳಿಂದ ರೂಪುಗೊಂಡಿವೆ. ೫೦೦-೫೫೦ ಮಿಲಿಯನ್ ವರ್ಷಗಳಷ್ಟೇ ಹಳೆಯವವು ಎಂದು ಊಹಿಸಲಾಗಿದೆ.  ಎತ್ತರೆತ್ತರ ಬೆಟ್ಟ ಗುಡ್ಡಗಳು, ಸಾವಿರಾರು ಬಗೆಯ ಸಸ್ಯಕಾಶಿ, ಜಲಪಾತ, ನೂರಾರು ಬಗೆಯ ಮೃಗ ಪಕ್ಷಿಗಳಗಳ ವೈವಿಧ್ಯತೆಯಿಂದ ಕೂಡಿದ್ದು, ತನ್ನ ಭೂವೈಜ್ಞಾನಿಕ ಅದ್ಭುತಗಳು ಮತ್ತು ಅಗಾಧ ಪರಿಸರ ಸಂಪತ್ತಿಗೆ ಹೆಸರಾಗಿದೆ. ಪ್ರವಾಸೋದ್ಯಮದ ಆಕರ್ಷಣೆಯಾಗಿ, ಮಾರ್ಗದರ್ಶಿತ ಚಾರಣ, ಜಲಪಾತದ ವೀಕ್ಷಣೆ, ಓರಿಯಂಟಲ್ ವಿಲ್ಲೇಜ್ ಎಂಬ ಸ್ಥಳದಲ್ಲಿ ಸ್ಕೈ ಕ್ಯಾಬ್ ಮೂಲಕ, ಎತ್ತರದ ಬೆಟ್ಟಕ್ಕೆ ತಲುಪಿ, ಅಲ್ಲಿ ಕಟ್ಟಿರುವ, ವಿಶ್ವಪ್ರಸಿದ್ಧ ಬಾಗಿರುವ ಸೇತುವೆ ವೀಕ್ಷಣೆ, ಸ್ಕೈಗ್ಲೈಡ್ ಮೂಲಕ ಕೆಳಗಿಳಿಯುವ ವ್ಯವಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಚಾರಣಕ್ಕೆ ಬೇಕಾದಷ್ಟು ಸಮಯ ನಮಗೆ ಇರಲಿಲ್ಲವಾದ್ದರಿಂದ, ನಾವು ವಿಶ್ವದಲ್ಲೇ ಅತೀ ಕಡಿದಾದ ಎತ್ತರದ ಸ್ಥಳಕ್ಕೆ ಹೋಗುವ ಖ್ಯಾತಿ ಇರುವ ಸ್ಕೈಕ್ಯಾಬ್  ಮತ್ತು ಅತ್ಯದ್ಭುತ ವಿನ್ಯಾಸ ಬಳಸಿ, ಎರಡು ಬೆಟ್ಟಗಳ ಸಂಪರ್ಕ ಹೊಂದಿಸುವ ಸೇತುವೆಯ ನೋಡಲು ಹೋದೆವು. 


ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ನ ಪ್ರಮುಖ ಆಕರ್ಷಣೆಯು ಮಚಿನ್‌ಚಾಂಗ್‌ನ ಶಿಖರದಲ್ಲಿರುವ ವ್ಯೂ ಪಾಯಿಂಟ್! ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು, ಓರಿಯೆಂಟಲ್ ವಿಲೇಜ್‌ನಲ್ಲಿರುವ ಕೇಬಲ್ ಕಾರ್ ಕಾಂಪ್ಲೆಕ್ಸ್‌ನಿಂದ 700-ಮೀ-ಎತ್ತರದ ಕೇಬಲ್ ಕಾರ್ ಅನ್ನು ನಿರ್ಮಿಸಲಾಯಿತು. ಸ್ಕೈ ಕ್ಯಾಬ್ ಈ ಮುಂಚೆ ಹತ್ತಿದ್ದೆವಾದರೂ ಇಷ್ಟು ಕಡಿದಾದ ಸ್ಕೈಕ್ಯಾಬ್ಹತ್ತುವ  ಅನುಭವ ಮಾತ್ರ ಮರೆಯಲಾಗದ್ದು! ಹತ್ತುಸಾವಿರ ವರ್ಷ ಹಳೆಯ ಮಳೆಕಾಡನ್ನು, ಸಾವಿರಾರು ಅಡಿಗಳ  ಮೇಲಿಂದ ಒಂದೇ ಒಂದು ಕಬ್ಬಿಣದ ಹಗ್ಗದ ಮೇಲೆ ಡಬ್ಬಿಯೊಂದರಲ್ಲಿ ಕೂತು ನೋಡುತ್ತಾ ಸಾಗುವ ಅನುಭವವೇ ಆಹ್ಲಾದಕರ! ೪ ಜನ ಕೂರಬಹುದಾದ ಸ್ಕೈಕ್ಯಾಬ್ ಹತ್ತಿ ನಿಧಾನಕ್ಕೆ ಮುಂದೆ ಸಾಗುತ್ತಿದ್ದೇವೆನಿಸಿದರೂ, ಅದರ ವೇಗ ಜಾಸ್ತಿಯೇ ಇರುತ್ತದೆ. ತುಸು ಹೊತ್ತಿನಲ್ಲಿಯೇ ನಾವೆಷ್ಟು ಮೇಲೆ ಏರುತ್ತಿದ್ದೇವೆ ಎಂಬುದು ಸುತ್ತಮುತ್ತಲಿನ ಪರಿಸರ ನೋಡುತ್ತಲೇ ಗೊತ್ತಾಗಿಬಿಡುತ್ತದೆ. ಮೈ ಜುಮ್ಮೆನ್ನುತ್ತದೆ, ಹೊಟ್ಟೆಯೊಳಗೆ ಚಿಟ್ಟೆ ಹಾರಿದಂತೆ ಭಾಸ...ತುಸು ಭಯವಾಗುವುದೂ ಸುಳ್ಳಲ್ಲ, ಇಲ್ಲಿಂದ ಕೆಳಗೆ ಬಿದ್ದರೆ ಮೈ ಮೂಳೆ ಕೂಡಾ ಹುಡುಕಲು ಸಿಗುವುದಿಲ್ಲ ಎಂದೆಲ್ಲ ಮಾತಾಡಿಕೊಂಡಿದ್ದಾಯಿತು... ಸಂಪೂರ್ಣ ಗ್ಲಾಸ್ಸಿನ ತಳವಿರುವ, ಗೊಂಡೋಲಾ ಗಳಲ್ಲೆಂತೂ ಕೆಳಗಡೆ ಕಾಲು ಇಡಲೂ ಕೂಡ ಭಯವಾಗುತ್ತದೆ!  ಮೊದಲನೇ ಸ್ಕೈ ಕ್ಯಾಬ್ ಸ್ಟಾಪಿಂಗ್ ನಲ್ಲಿ ಒಂದು ವೀಕ್ಷಣಾ ಸ್ಥಳ. ಸುತ್ತಮುತ್ತ ಕಣ್ಣು ಹಾಯಿಸಿದಷ್ಟೂ ದೂರ ಲಂಕಾವಿ ದ್ವೀಪದ ಸುತ್ತಮುತ್ತಲಿನ ಸಮುದ್ರ ತೀರಗಳು, ಎತ್ತರೆತ್ತರ ಬೆಟ್ಟಗಳು, ದಟ್ಟ ಕಾಡಿನ ವಿಹಂಗಮ ದೃಶ್ಯಗಳು ಕಾಣುತ್ತ ಹೋಗುತ್ತದೆ. ಪಕ್ಕದಲ್ಲಿ ಲಂಕಾವಿ ದ್ವೀಪವನ್ನು ಪ್ರತಿಬಿಂಬಿಸುವ ಕೆಂಪು ಹದ್ದಿನ ಮೂತಿಯ ಮಾದರಿಯಲ್ಲಿ ವೀಕ್ಷಣಾ ಸ್ಥಳವಿದೆ. ಪೈಡ್ಟೆಲಿಸ್ಕೋಪ್ ಬಳಸಿ ಬಲು ದೂರದ ಸಮುದ್ರದಲ್ಲಿನ ದ್ವೀಪಗಳ ಕಾಣಬಹುದು. ಅಂಡಮಾನ್ ದ್ವೀಪಗಳ ವರೆಗೆ ಸಾಕಷ್ಟು ದ್ವೀಪಗಳ ವೀಕ್ಷಣೆಯ ಅನಾವರಣ ಇಲ್ಲಿಂದ ಸಿಗುತ್ತದೆ.   










ಎರಡನೇ ಹಂತದ ಸ್ಕೈ ಕ್ಯಾಬ್ ನಮ್ಮನ್ನು ಇನ್ನಷ್ಟು  ಮೇಲಕ್ಕೆ ಕರೆದುಕೊಂಡು ಹೋಗುತ್ತದೆ. ಒಟ್ಟು ೯೧೯ ಮೀಟರ್ ಉದ್ದವಿರುವ ಈ ಕೇಬಲ್ ಕಾರ್ ಸವಾರಿ, ಪ್ರಪಂಚದ ಅತೀ ಕಡಿದಾದ ಮತ್ತು ಉದ್ದದ ತಡೆರಹಿತ ಮೊನೊ ಕೇಬಲ್ ಕಾರ್ ಎಂಬ ರೆಕಾರ್ಡ್ ಹೊಂದಿದೆ.  ಎತ್ತರೆತ್ತರ ಆ ಒಂದು ಕಬ್ಬಿಣದ ಹಗ್ಗದ ಸಹಾಯದಿಂದ ಮೇಲೇರುವ ಕ್ಯಾಬ್ ಅನುಭವ ಮಾತ್ರ ಕೊಟ್ಟ ದುಡ್ಡಿಗೆ ಖಂಡಿತ ಮೋಸವಿಲ್ಲ. ಸ್ಕೈ ಬ್ರಿಜ್ ಗೆ ಹೋಗುವ ದಾರಿಯ ಪ್ರಾರಂಭಿಕ ಸ್ಥಳಕ್ಕೆ ನಾವು ಇಳಿಯುತ್ತೇವೆ. ಅಲ್ಲಿಂದ ಸುಮಾರು ೩೦೦ ಮೀಟರ್ ದೂರ ಕಡಿದಾದ ಮೆಟ್ಟಿಲುಗಳ ಹಾದಿಯಲ್ಲಿ ಕಾಡಿನ ಒಳಗೆ ನಡೆದುಕೊಂಡು ಹೋಗುವ ಅನುಭವವೂ ಅನನ್ಯ. ಮಲೆನಾಡಿನವರಾದ ನಮಗೆ ಅಲ್ಲಿ ಸಾಕಷ್ಟು ಪರಿಚಯದ ಮರಗಿಡಗಳು ಕಂಡವು. ರಕ್ತಚಂದನ ಮರಗಳೂ ಕೂಡ ಹಾದಿಬದಿಯಲಿ ನೋಡಲುಕಂಡಿತು . 










ಮಚಿನ್‌ಚಾಂಗ್‌ನ ಶಿಖರಕ್ಕೆ ಕೇಬಲ್ ಕಾರ್ ಅನ್ನು ಸವಾರಿ ಮಾಡುವಾಗ ಪ್ರವಾಸಿಗರು ಲಂಕಾವಿಯ ನೈಸರ್ಗಿಕ ಸೌಂದರ್ಯವನ್ನು ಆನಂದಿಸಬಹುದು. ಲಂಕಾವಿ ಸ್ಕೈ ಸೇತುವೆಯು ಮಲೇಷ್ಯಾದಲ್ಲಿ ಅತೀ ದೊಡ್ಡ, 410 ಅಡಿ ಉದ್ದದ, 5.9 ಅಡಿ ಅಗಲದ  ಬಾಗಿದ ಪಾದಚಾರಿ ಕೇಬಲ್ ತಂಗುವ ಸೇತುವೆಯದು. ಸೇತುವೆಯ ಡೆಕ್ ಸಮುದ್ರ ಮಟ್ಟದಿಂದ 2,170 ಅಡಿ  ಎತ್ತರದಲ್ಲಿದ್ದು, ಪುಲಾವ್‌ನಲ್ಲಿರುವ ಗುನುಂಗ್ ಮ್ಯಾಟ್ ಸಿನ್‌ಕಾಂಗ್‌ನ ಶಿಖರದಲ್ಲಿದೆ . ಸೇತುವೆಯ ಎರಡೂ ಬದಿಗಳಲ್ಲಿ ಉಕ್ಕಿನ ಬೇಲಿಗಳು ಮತ್ತು ಉಕ್ಕಿನ ತಂತಿ ಜಾಲರಿಗಳಿಂದ ರಕ್ಷಿತಗೊಳಿಸಿದ್ದಾರೆ. ಈ ಎತ್ತರದ ಶಿಖರದಿಂದ, ವೀಕ್ಷಣಾ ಅನುಭವವನ್ನು ಮತ್ತಷ್ಟು ಅನಾವರಣಗೊಳಿಸುವ ಉದ್ದೇಶದಿಂದ ಈ ಬಾಗಿದ ಸೇತುವೆ ಮಾಡಲಾಗಿದೆ. ತಲೆಕೆಳಗಾದ ತ್ರಿಕೋನಾಕಾರದ ಟ್ರಸ್‌ನ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಉಕ್ಕು ಮತ್ತು ಕಾಂಕ್ರೀಟ್ ಫಲಕಗಳಿಂದ ರೂಪುಗೊಂಡ ವಾಕ್‌ವೇ, ಗುನುಂಗ್ ಮ್ಯಾಟ್ ಚಿಂಚಾಂಗ್‌ನಲ್ಲಿ ಎರಡು ಬೆಟ್ಟದ ತುದಿಗಳನ್ನು ಸಂಪರ್ಕಿಸುತ್ತದೆ. ಸೇತುವೆಯ ಮೊದಲ 25 ಮೀ (82 ಅಡಿ) ನೇರವಾಗಿರುತ್ತದೆ, ನಂತರ ಮೂರು ಬಾಗಿದ 25 ಮೀ (82 ಅಡಿ) ವಿಭಾಗಗಳು, ನಂತರ ಅಂತಿಮ ನೇರ 25 ಮೀ (82 ಅಡಿ) ವಿಭಾಗ. ನಮ್ಮಲ್ಲಿ ಸೇತುವೆ ಕಟ್ಟಲು ಬಳಸುವ ದೊಡ್ಡದೊಡ್ಡ ಅಡಿಪಾಯದ ಕಂಬಗಳಂತೆ ಅಷ್ಟು ಎತ್ತರದ ಶಿಖರದ ಮೇಲೆ ಅಲ್ಲಿ ಕಟ್ಟುವುದಾದರೂ ಹೇಗೆ??  ಬ್ರಿಡ್ಜ್ ಡೆಕ್ ಅನ್ನು ನಾಲ್ಕು ಜೋಡಿ ಫ್ರಂಟ್-ಸ್ಟೇ ಕೇಬಲ್‌ಗಳಿಂದ ಒಂದು ಬಲಿಷ್ಟ 267 ಅಡಿ ಎತ್ತರದ ಪೈಲಾನ್ ಗೆ ಜೋಡಣೆ ಮಾಡಿ ಸಂಪೂರ್ಣ ಬಾಗು ಸೇತುವೆಯ ತೂಕವನ್ನು ತಡೆಯುವಂತೆ ವಿನ್ಯಾಸಗೊಳಿಸಿ ಈ ಸೇತುವೆಯ ಕಟ್ಟಿರುವ ಪರಿಯೇ ಅದ್ಭುತ! ಸೇತುವೆಯ ಮೇಲೆ ಜನರು ನಿಲ್ಲಬಹುದಾದ ಗರಿಷ್ಠ ಸಾಮರ್ಥ್ಯ: 250 ಜನರು.. ಬಾಗಿದ ಸೇತುವೆಯ ಡೆಕ್ ಅದರ ಗುರುತ್ವಾಕರ್ಷಣೆಯ ಕೇಂದ್ರದೊಂದಿಗೆ ನೇರವಾಗಿ ಪೈಲಾನ್ ಹೆಡ್‌ನಲ್ಲಿ ಅಮಾನತುಗೊಳಿಸುವ ಬಿಂದುವಿನ ಕೆಳಗೆ ಮತ್ತು ಡೆಕ್‌ನ ಮೇಲ್ಭಾಗದಲ್ಲಿ ಸಮುದ್ರ ಮಟ್ಟದಿಂದ 660 ಮೀ (2,170 ಅಡಿ) ಎತ್ತರದಲ್ಲಿ ನೇತಾಡುತ್ತದೆ. ಪೈಲಾನ್ ಅನ್ನು 1,983 ಅಡಿ ಎತ್ತರದಲ್ಲಿ ಕಾಂಕ್ರೀಟ್ ಮಾಡಿದ ಪ್ಯಾಡ್‌ನಲ್ಲಿ ಜೋಡಿಸಲಾಗಿದೆ ಮತ್ತು ಅದರ ತುದಿ ಸಮುದ್ರ ಮಟ್ಟದಿಂದ 2,251 ಅಡಿ ಎತ್ತರ ತಲುಪಿದೆ. ಇಷ್ಟು ವೈಜ್ಞಾನಿಕ ವಿನ್ಯಾಸದೊಂದಿಗೆ ಅಕ್ಷರಶಃ, ಎರಡು ಶಿಖರಗಳ ಮಧ್ಯೆ ನೇತಾಡುತ್ತಿದೆ ಆ ಸೇತುವೆ! ಸೇತುವೆಯ ಮಧ್ಯೆ ಅಲ್ಲಲ್ಲಿ ಗ್ಲಾಸ್ ನ ಟೈಲ್ಸ್ ಹಾಕಿರುವುದು, ಪ್ರವಾಸಿಗರಿಗೆ ಅದರ ಮೇಲೆ ನಿಂತು ಸೇತುವೆಯ ಕೆಳಗಡೆ ನೋಡುವ ರೋಚಕತೆ ನೀಡುವಲ್ಲಿ ಯಶಸ್ವಿಯಾಗುತ್ತದೆ. ಸುತ್ತಮುತ್ತಲಿನ ಪ್ರಕೃತಿಯ ವಿಹಂಗಮ ನೋಟ ಪ್ರವಾಸಿಗರನ್ನು ಇನ್ನಷ್ಟು ಮುದಗೊಳಿಸುತ್ತದೆ. 






ಜೊತೆಗೆ ಅಲ್ಲಿರುವ ಇನ್ನೊಂದು ಆಕರ್ಷಣೆ ಸ್ಕೈಗ್ಲೈಡ್. ಟಾಪ್ ಸ್ಟೇಶನ್ ನಿಂದ ಸೇತುವೆಯ ವರೆಗೆ ನಡೆಯುವುದು ಬೇಡ ಎಂದಾದರೆ ಸ್ಕೈಗ್ಲೈಡ್ ಬಳಸಬಹುದು. ಇದು  ಪ್ರಯಾಣಿಕರನ್ನು ಸುಮಾರು ಎರಡು ನಿಮಿಷಗಳ ಹಾದಿಯಲ್ಲಿ ಟಾಪ್ ಸ್ಟೇಷನ್‌ನಿಂದ ಸೇತುವೆಗೆ ಕರೆದೊಯ್ಯುತ್ತದೆ. ರೈಲ್ವೆ ಹಳಿಗಳ ಮೇಲೆ ಹೋಗುವ ಮಾದರಿಯಲ್ಲಿ ನಿಧಾನವಾಗಿ ಸ್ಕೈಗ್ಲೈಡ್ ಓಡಾಟ ಮಾಡುತ್ತದೆ. ಸ್ಕೈಗ್ಲೈಡ್‌ನ ಟಿಕೆಟ್ ಅನ್ನು ಟಾಪ್ ಸ್ಟೇಷನ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ