ಸೋಮವಾರ, ಸೆಪ್ಟೆಂಬರ್ 2, 2024

ಮಲ್ನಾಡ್ ಅನ್ನಪೂರ್ಣ ಮೆಸ್ಸ್!

 ಒಂದೊಳ್ಳೆ ಊಟದ ಜಾಗದ ಸಲಹೆ 

ಕಾರಾಣಾಂತರದಿಂದ ೮-೯ ದಿನಗಳ ಕಾಲ ನನಗೆ ಶಿವಮೊಗ್ಗದಲ್ಲಿ ದುರ್ಗಿಗುಡಿ ಸರ್ಕಲ್ ಹತ್ತಿರದ ಜಾಗದಲ್ಲಿ ಇರಬೇಕಾದ ಅನಿವಾರ್ಯತೆ ಇತ್ತು. ಊಟ ತಿಂಡಿಗೆ ಹೋಟೆಲ್ಲೇ ಗತಿ. ಆ ಸಮಯಕ್ಕೆ ನನಗೆ ಅಪಾಧ್ಬಂಧವಂತೆ ಸಿಕ್ಕಿದ್ದು, ಮಲ್ನಾಡ್ ಅನ್ನಪೂರ್ಣ ಮೆಸ್ಸ್. ರೊಟ್ಟಿ ಊಟ, ಅಬ್ಬಬ್ಬಬ್ಬಬ್ಬಾ.. ಎಂತ ರುಚಿ ಅಂತೀರಾ? ರಾಗಿ ರೊಟ್ಟಿ, ಜೋಳದ ರೊಟ್ಟಿ, ಅಕ್ಕಿ ರೊಟ್ಟಿಗಳು ಇಲ್ಲಿ ಲಭ್ಯ. ಎರಡು ರೊಟ್ಟಿ ಜೊತೆಗೆ ಸೈಡಲ್ಲಿ ಕೂಟು, ತರಕಾರಿ ಪಲ್ಯ, ಟೊಮ್ಯಾಟೋ ಮೆಣಸಿನ ಚಟ್ನಿ ನೆಂಚಿಕೊಳ್ಳಲು. ಖಾರ ಸಖತ್ತಾಗಿರುತ್ತದೆ, ಆದ್ರೆ ರುಚಿ ಮಾತ್ರ ಸೂಪರ್..ಕೇವಲ ೪೦ ರೂಪಾಯಿ. ಊಟ ತೆಗೆದುಕೊಂಡರೆ, ಒಳ್ಳೆ ಬಾಳೆ ಎಲೆ ಹಾಕಿ ಸಾಂಪ್ರದಾಯಿಕವಾಗಿ ಬಡಿಸುತ್ತಾರೆ. ಉಪ್ಪಿನಕಾಯಿ, ಚಟ್ನೆಪುಡಿ, ನಮಗೆ ಬೇಕಾದ ಎರಡು ರೊಟ್ಟಿ, ಕೂಟು, ತರಕಾರಿ ಪಲ್ಯ, ಮೆಣಸಿನ ಚಟ್ನಿ, ಅನ್ನ ತಿಳಿಸಾರು, ಸಾಂಬಾರು, ಸಂಡಿಗೆ, ಕುಡಿಯಲು ಒಂದು ಲೋಟ ಮಜ್ಜಿಗೆ (ನಾನು ತೆಗೆದುಕೊಳ್ಳುವುದಿಲ್ಲ). ಕೇವಲ ೮೦ ರುಪಾಯಿಗೆ ಹೊಟ್ಟೆ ತುಂಬಾ ಊಟ ಬಡಿಸುತ್ತಾರೆ. ಖುಷಿ ಆಗುವುದು - ಅಲ್ಲಿ ರೊಟ್ಟಿ ಮಾಡುವವರು ಒಂದೆರಡು ಅಕ್ಕೋರು, ೧೨ ಗಂಟೆ ಇಂದ ಪ್ರಾರಂಭವಾಗಿ ನಮ್ಮ ಎದುರೇ ರೊಟ್ಟಿ ತಟ್ಟಿ ಕಾವಲಿ ಮೇಲೆ ಬೇಯಿಸಿ ಸುಟ್ಟು ಬಿಸಿ ಬಿಸಿಯಾಗಿ ಬಡಿಸಲು ನೀಡುತ್ತಾರೆ. ಮಾತನಾಡಿಸಿದರೆ ಖುಷಿಯಿಂದ ಮಾತನಾಡುತ್ತಾರೆ.. ಹೊರಗಡೆ ಮಲೆನಾಡ ಮಳೆಗೂ, ಒಳಗಡೆ ಬಿಸಿ ಬಿಸಿ ರೊಟ್ಟಿ ತಿನ್ನುವುದಕ್ಕೂ ಆಹಾಹಾ.. ! ಸುಖ!

 

ನಾನು ಅಲ್ಲಿದ ೮ ದಿನವೂ ಪ್ರತಿನಿತ್ಯ ಆ ಮೆಸ್ಸಿಗೆ ಊಟಕ್ಕೆ ಹೋಗುತ್ತಿದ್ದೆ. ಅಲ್ಲಿನ ಹೆಂಗಸರೊಡನೆ ಕಥೆ ಹೊಡೆದುಕೊಂಡು, ಹೊಟ್ಟೆ ತುಂಬಾ ಊಟ ಮಾಡಿ ಮತ್ತೆ ನನ್ನ ಕೆಲಸಕ್ಕೆ ಮರಳುತ್ತಿದ್ದೆ. ಎಂಟು ದಿನದಲ್ಲಿ ಒಂದು ದಿನವೂ ನನ್ನ ಹೊಟ್ಟೆ ಕೆಡಲಿಲ್ಲ.. ಒಂದೊಂದು ದಿನ ಒಂದೊಂದು ತರಕಾರಿ ಪಲ್ಯ, ಅದೇ ನನ್ನ ಒತ್ತಡದ ಸಮಯದಲ್ಲೂ ನನ್ನನ್ನು ಆರೋಗ್ಯವಾಗಿಟ್ಟಿದ್ದು.. ಅವರುಗಳ ಅತಿಥಿ ಸತ್ಕಾರ ಖಂಡಿತವಾಗಿಯೂ ಮೆಚ್ಚುವಂತದ್ದು. ಸುಮಾರು ೩. ೩೦ ತನಕವೂ ಊಟ ಮುಂದುವರೆಯುತ್ತದೆ. ಹಾಂ! ಬೆಳಗಿನ ತಿಂಡಿ ಇಡ್ಲಿ, ಪಡ್ಡು ಕೂಡ ಇಲ್ಲಿ ಲಭ್ಯವಂತೆ! ಶಿವಮೊಗ್ಗದಲ್ಲಿದ್ದು, ಒಂದೊಳ್ಳೆ ರೊಟ್ಟಿ ಊಟ ಮಾಡಲು, ಇದು ನನ್ನ ಕಡೆ ಇಂದ ಸಜ್ಜೆಸ್ಟೆಡ್ ಜಾಗ. 






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ