ಶನಿವಾರ, ಸೆಪ್ಟೆಂಬರ್ 14, 2024

ಒಂದೊಳ್ಳೆ ಉಡುಗೊರೆ, ಸ್ವಂತಕ್ಕೂ ಸಮಾಜಕ್ಕೂ..

ಒಂದೊಳ್ಳೆ ಉಡುಗೊರೆ, ಸ್ವಂತಕ್ಕೂ ಸಮಾಜಕ್ಕೂ..

ಒಂದು ಇಪ್ಪತ್ತು ದಿನ ಮನೆಯ ಸದಸ್ಯರ ಅನಾರೋಗ್ಯದ ಕಾರಣ ಆಸ್ಪತ್ರೆ ಡ್ಯೂಟಿಯಲ್ಲಿದ್ದೆ. ಆಸ್ಪತ್ರೆ ಎಂದ ಕೂಡಲೇ, ಪೇಶೆಂಟ್ ಆಗಿರುವವರಿಗೂ ಮತ್ತು ನಮಗೂ, ಊಟ ತಿಂಡಿ ಕಾಫೀ ಟೀ ಗಳ ವ್ಯವಸ್ಥೆಗೆ, ಮನೆ ಹತ್ತಿರವಿಲ್ಲದಿದ್ದರೆ ಕ್ಯಾಂಟೀನ್, ಹೋಟೆಲ್ಗಳೇ ಗತಿ. ಅದರಲ್ಲೂ ಆಸ್ಪತ್ರೆಯಲ್ಲಿ ಕಾಯ್ವಿಕೆ ಎನ್ನುವುದು ಇನ್ನೊಂದು ಎರಡು ಸಲ ಜಾಸ್ತಿಯೇ ಕಾಫೀ ಟೀ ಅನ್ನು ಕುಡಿಸಿ ಬಿಡುತ್ತೆ ನಮಗೆ.. ನಾವು ಊಟ ತಿಂಡಿ ಮಾಡಿಕೊಂಡು ಪೇಶೆಂಟ್ ಆದವರಿಗೆ ಆಹಾರವನ್ನು ಕಟ್ಟಿಸಿಕೊಂಡು ಹೋಗುವುದು ಅನಿವಾರ್ಯ. ಸಹಜವಾಗಿಯೇ ಗಮನಿಸಿ, ಆಸ್ಪತ್ರೆಯ  ಸರ್ವೀಸಿನಲ್ಲಿದ್ದಾಗ ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳು ಲೆಕ್ಕವಿಲ್ಲದಷ್ಟು! ಅದರ ಜೊತೆಗೆ ಊಟ ತಿಂಡಿಗೆಂದು ನಾವಾಗಿಯೇ ಹೋಗಿ ಕೊಳ್ಳುವ ಪ್ಲಾಸ್ಟಿಕ್ ನೂರಾರು. ಪ್ರತಿಯೊಂದು ಪಾರ್ಸೆಲ್ ಆಹಾರಕ್ಕೂ ಬಿಳಿ ಬಣ್ಣದ ಒನ್ ಟೈಮ್ ಯುಸೇಜ್ ಬಾಕ್ಸ್ಗಳು, ಅವುಗಳನ್ನು ಹೊತ್ತು ತರಲು ಪ್ಲಾಸ್ಟಿಕ್ ಕವರ್ರುಗಳು, ಕಾಫೀ ಟೀ ಗೆ, ಜ್ಯುಸಿಗೆ, ಪೇಪರ್ ಕಪ್ ಎಂಬ ಪ್ಲಾಸ್ಟಿಕ್ ಹಾಳೆ ಕೋಟೆಡ್ ಬಿಳಿ ಲೋಟಗಳು, ಪೇಪರ್ ಪ್ಲೇಟುಗಳು, ಒಂದೆರಡು ಕಡೆ ನೋಡಿದಂತೆ ಕಾಫೀ ಟೀ ಸಾರು ಸಾಂಬಾರುಗಳನ್ನು ಕೂಡಾ ಪ್ಲಾಸ್ಟಿಕ್ ಕವರುಗಳಲ್ಲಿ ಕಟ್ಟಿಕೊಡುತ್ತಾರೆ.  

ನಾನು ಹೇಳ ಬಂದಿರುವ ವಿಷಯವೆಂದರೆ, ನಾನು  ಮತ್ತು ನನ್ನ  ಜೊತೆಗಿದ್ದವರು ಸೇರಿದಂತೆ, ಆಸ್ಪತ್ರೆ ಡ್ಯೂಟಿಯಲ್ಲಿದ್ದ ಅಷ್ಟೂ ದಿನಕ್ಕೂ ಆಹಾರ ಮತ್ತು ಇತರ ವಸ್ತುಗಳ ಕೊಳ್ಳುವಿಕೆಯ ವಿಷಯದಲ್ಲಿ, 20 ದಿನಗಳಲ್ಲಿ ಸುಮಾರು 100ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಕಪ್ಸ್ ಗಳ ಬಳಕೆಯನ್ನೂ, ಕನಿಷ್ಠ 25-30 ಪ್ಲಾಸ್ಟಿಕ್ ಡಬ್ಬಿಗಳನ್ನು ತರುವುದನ್ನೂ, ಅದೆಷ್ಟೋ ಪೇಪರು ಪ್ಲೇಟು, ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ಸ್ಪೂನ್ಗಳನ್ನೂ ಬಳಸುವುದರಿಂದ ತಪ್ಪಿಸಿಕೊಂಡೆವು!! 

ಇದು ಹೇಗೆ ಸಾಧ್ಯವಾಯಿತು? 

ನನ್ನ ಕೈಜೋಳಿಗೆ ಚೀಲದಲ್ಲಿ, ಒಂದು ಸಣ್ಣ ಸ್ಟೀಲ್ ಲೋಟ, ಒಂದು ೩೦೦ ml ಪ್ರಮಾಣದ ಸ್ಟೀಲ್ ಡಬ್ಬ, ಒಂದು ಸ್ಪೂನ್, ನೀರಿನ ಬಾಟಲ್ಲು ಸದಾ ಇಟ್ಟುಕೊಂಡೇ ಓಡಾಡುವುದ ಅಭ್ಯಾಸವಾಗಿ ಹೋಗಿದೆ. ಈ ಸರ್ತಿ ಆಸ್ಪತ್ರೆಯಲ್ಲಿಯೇ ಉಳಿಯಬೇಕು ಎಂದ ಕೂಡಲೇ, ಎರಡು ಲೋಟ ಕಾಫೀ ಹಿಡಿಯುವಷ್ಟು ಸಣ್ಣ ನನ್ನ ಥರ್ಮಾಸ್ ಫ್ಲಾಸ್ಕ್ ಅನ್ನು, ಮತ್ತೊಂದು ಸ್ಟೀಲ್ ಡಬ್ಬಿಯನ್ನೂ ನನ್ನ ಜೋಳಿಗೆಯಲ್ಲಿ ಇಟ್ಟುಕೊಂಡು ಹೋದೆ. ಆ ಥರ್ಮಾಸ್ ಫ್ಲಾಸ್ಕ್ ನ ಮುಚ್ಚಳ ಒಬ್ಬರು ಕೈಯಲ್ಲಿ ಹಿಡಿದುಕೊಂಡು ಒಂದು ಕಾಫೀ ಕುಡಿಯಲು ಸಾಲುವಷ್ಟು ಇರುತ್ತದೆ. ಪಾರ್ಸೆಲ್ ಕೊಂಡೊಯ್ದ ಕಾಫೀ ಟೀ ಅನ್ನು ಆ ಲೋಟದಲ್ಲಿ ಕುಡಿಯಲು ಸಾಧ್ಯವಾಯಿತು. ಸಾಂಬಾರು ಡಿಪ್ ಇಡ್ಲಿಯಾಗಲಿ, ಗಂಜಿಯಾಗಲಿ ಸ್ಟೀಲ್ ಡಬ್ಬಿಯನ್ನು ಕೊಟ್ಟು ಅದರಲ್ಲಿ ಕೇಳಿ ಹಾಕಿಸಿಕೊಳ್ಳಬಹುದು. ಎರಡು ಸ್ಟೀಲ್ ಡಬ್ಬಿಯಲ್ಲಿ ಎಲ್ಲಾ ದಿನದ ಎಲ್ಲಾ ಬಗೆಯ ಆಹಾರವನ್ನೂ ನಾವು ಎರಡು ಜನ ಆರಾಮದಲ್ಲಿ ಕೊಂಡು ಉಣ್ಣುವುದನ್ನು ಮ್ಯಾನೇಜ್ ಮಾಡಿದೆವು. ಯಾವುದೇ ಆಸ್ಪತ್ರೆಯಲ್ಲಿ ನಮ್ಮ ಲೋಟ ಪಾತ್ರೆಗಳನ್ನು ತೊಳೆದುಕೊಳ್ಳುವಷ್ಟರ ಮಟ್ಟಿಗಂತೂ ನೀರು ಖಂಡಿತಾ ದೊರೆಯುತ್ತದೆ. ಬೇಕಾಗಿರುವುದು -  ಮರುಬಳಕೆಯ ಮನಸ್ಸಷ್ಟೇ. 

ಇದನ್ನ ಇಲ್ಯಾಕೆ ಬರೆಯುತ್ತಿದ್ದೇನೆ? 

ಆಸ್ಪತ್ರೆಯ ಪರಿಕರಗಳು, ಮಾತ್ರೆ ಔಷಧಿ ಸಿರಿಂಜುಗಳು ಇತ್ಯಾದಿ ವಸ್ತುಗಳಲ್ಲಿನ ಪ್ಲಾಸ್ಟಿಕ್ ನಿಯಂತ್ರಣ ನಮ್ಮ ಕೈಯಲ್ಲಿಲ್ಲವಾದರೂ, ನಮ್ಮ ನಿತ್ಯದ ಸ್ವಂತದ ವಸ್ತುಗಳ ಮೇಲಾದರೂ ನಮಗೆ ಹಕ್ಕಿದೆ ಅಲ್ಲವೇ? ನಾನು  ಕಂಡಂತೆ ೯೬% ಜನರು ಊಟ ತಿಂಡಿ ಕಾಫಿಯನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿಯೇ ಮೂರು ಹೊತ್ತೂ ಹಿಡಿದುಕೊಂಡು ಹೋಗುತ್ತಿದ್ದರು. ಸಾಕಷ್ಟು ಬಡವರೂ ಕೂಡ ೫-೧೦ ರೂಪಾಯಿಯಷ್ಟು ಹೆಚ್ಚಿನ ಮೌಲ್ಯ ನೀಡಿ, ಪಾರ್ಸೆಲ್ ತೆಗೆದುಕೊಳ್ಳುವುದು ಅನಿವಾರ್ಯ ಎಂಬಂತೆ ಓಡಾಡುತ್ತಿದ್ದುದು ಕಂಡ ಮೇಲೆ ನನಗೆ ಅನ್ನಿಸ್ಸಿದ್ದು - ನಾವು  ಪ್ಲಾಸ್ಟಿಕ್ ಬಳಕೆಯನ್ನು ಮನಸ್ಸಿನಿಂದ ಕಿತ್ತು ಹಾಕಲು ಸಾಧ್ಯವಾಗದೇ ಇರುವುದು, ಅದರ ಪರ್ಯಾಯ ವ್ಯವಸ್ಥೆಯ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳದೆ ಇರುವುದೇ ಮುಖ್ಯ ಕಾರಣ! ಹಿಂದೆಲ್ಲ ರೋಗಿಯ ಜೊತೆ ಹೋಗುವವರು ಎಂದ ಕೂಡಲೇ ಒಂದು ಚೀಲದಲ್ಲಿ ತಟ್ಟೆ ಲೋಟ ಸ್ಟೀಲ್ ನ ಉಗ್ಗ ( ಕೈ ಹಿಡಿಕೆಯ ಡಬ್ಬಿ) ಮತ್ತು  ಟವೆಲ್ ಹಿಡಿದುಕೊಂಡು ಹೋಗುವುದು ಸಹಜ ಆಗಿತ್ತು. ಈಗ ಕೈ ಬೀಸಿ ನಡೆದು ಬಿಡುತ್ತೇವೆ. ಆಹಾರ ಹೇಗೆಂದರೂ ಅಲ್ಲೇ ಎಲ್ಲೋ ವ್ಯವಸ್ಥೆ ಆಗುತ್ತದೆ ಎಂಬ ನಂಬಿಕೆ ಇಂದ. ನಾವು ನಮ್ಮ ಆಪ್ತರಿಗೆ ಯಾವುದೇ ಶುಭ ಸಂದರ್ಭಕ್ಕೆ ಉಡುಗೊರೆಯನ್ನು ನೀಡುತ್ತೇವೆ. ನಾವು ನೀಡುವ ಉಡುಗೊರೆ ವಸ್ತು ಪಡೆದುಕೊಂಡವರಿಗೆ ಎಷ್ಟರ ಮಟ್ಟಿಗೆ ಸಹಾಯವಾಗುತ್ತದೆ ಎಂಬುದು ನಮಗೂ  ತಿಳಿದಿರುವುದಿಲ್ಲ, ನಮಗದು ಬೇಕಾಗಿಯೂ ಇಲ್ಲ. ಆದರೆ ನನಗನ್ನಿಸಿದಂತೆ ಎರಡು ಕಪ್ ಕಾಫೀ ಹಿಡಿಯುವಷ್ಟು ಮಿನಿ ಥರ್ಮಾಸ್ ಫ್ಲಾಸ್ಕ್ ಯಾರಿಗಾದರೂ ಕೊಡಲು ಒಳ್ಳೆಯ ಗಿಫ್ಟ್!! ಅಪರೂಪದ ಸಮಯವೊಂದೇ ಅಲ್ಲ; ನಿತ್ಯ ಓಡಾಟದಲ್ಲೂ ಸಣ್ಣ ಪರ್ಸಿನಲ್ಲಿ ಹಿಡಿಸುವಂತದ್ದು, ಬಿಸಿ ಪೇಯಗಳ ಶೇಖರಿಸಿ ಕುಡಿಯಲು ಅತ್ಯಂತ ಅನುಕೂಲಕರ. ಮತ್ತೊಂದು ಅತ್ಯಂತ ಉಪಯುಕ್ತ ಉಡುಗೊರೆ ನೀಡಬಹುದಾದ ವಸ್ತು ಎಂದರೆ, ಒಳ್ಳೆಯ ಕ್ವಾಲಿಟಿಯ, ಲಾಕಿಂಗ್ ಇರುವ ಎರಡು ಬೇರೆ ಬೇರೆ ಸೈಝಿನ ಊಟದ ಸ್ಟೀಲ್ ಬಾಕ್ಸ್ಗಳು. ಸಣ್ಣ ಸೈಜಿನದ್ದು ಸುಲಭವಾಗಿ ಹ್ಯಾಂಡ್ಪರ್ಸಿನಲ್ಲಿ, ವಾಹನದ ಸೀಟ್ಬಾಕ್ಸ್ ನಲ್ಲಿಯೂ ಇಡಬಹುದಾಗಿದ್ದು, ಎಲ್ಲಿ ಬೇಕಾದರೂ ಪ್ಲಾಸ್ಟಿಕ್ ವಸ್ತುವಿಗೆ ಪರ್ಯಾಯವಾಗಿ ಆಹಾರವನ್ನು ಪಡೆಯಲು ಬಳಸಿಕೊಳ್ಳಬಹುದು. ಇವೆರಡೂ ವಸ್ತುಗಳು ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ಒಂದು ಅಧ್ಬುತ ಉಡುಗೊರೆ. ಅಂತೆಯೇ, ಪ್ರೀತಿ ಪಾತ್ರರಿಗೆ ಕೊಟ್ಟು ಎಲ್ಲಿ ಹೇಗೆ ಬಳಸಬಹುದು ಎಂಬ ಒಂದು ಪುಟ್ಟ ಆಲೋಚನೆ ಹಂಚಿದರೆ ಸಾಕು.. 

ಎಂತೆಂತದೋ ವೈರಲ್ಗಳು (ಬೇಡದ ನ್ಯೂಸ್ಗಳನ್ನೂ ಒಳಗೊಂಡು) ಅದೆಷ್ಟು ವೇಗವಾಗಿ ಹಬ್ಬುತ್ತದೆ, ಒಳ್ಳೆತನ ಯಾಕೆ ಆಗಬಾರದು ಅಲ್ವ?

#reducingsingleusecontainerwaste #packagefree #sustainableliving #takeawayfood

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ