ತುಪ್ಪರಹಿತ ಡ್ರೈಫ್ರೂಟ್ ಲಡ್ಡು!

 ಸಸ್ಯಜನ್ಯ ಡ್ರೈಫ್ರೂಟ್ಸ್ ಲಡ್ಡು!

ತುಪ್ಪ-ಒಪ್ಪು-ತಪ್ಪುಗಳ ಸಮಯಕ್ಕೇನೇ ಈ ಪೋಸ್ಟಾ ಅಂತ ಕೇಳಬೇಡಿ. ನಾನು ಮನೇಲಿ ಮಾಡಿಕೊಂಡೆ. ಪರಿಚಯದವರು ರೆಸಿಪಿ ಕೇಳಿ ಸಾಕಷ್ಟು ದಿನ ಆಗಿತ್ತು. ಮಾಡಿದ ಮೇಲೆ ತಕ್ಷಣ ನೆನಪಾಗಿ ಬರೆಯುತ್ತಿದ್ದೇನೆ. ಅವರ ಜೊತೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ. 


ರುಚಿಕರ, ಆರೋಗ್ಯಕರ, ಸಕ್ಕರೆ ಇಲ್ಲದ ಡ್ರೈ ಫ್ರೂಟ್ಸ್ಉಂಡೆ ಇದು. ನನ್ನ ಟ್ರೆಕಿಂಗ್ಗಳಿಗೆ ಇದೇ ನನ್ನ ಎನರ್ಜಿ ಬಾರ್. ಪ್ರವಾಸ ಹೋದಾಗ, ಹೋದಲ್ಲೆಲ್ಲ ಸಸ್ಯಜನ್ಯ ಆಹಾರ ಹುಡುಕುತ್ತ ಹೋಗುವ ಜಾಯಮಾನವಿಲ್ಲ. ಈ ಉಂಡೆ ನನ್ನ ಬ್ಯಾಗಿನಲ್ಲಿರುತ್ತದೆ. ಕಷ್ಟಕಾಲಕ್ಕೆ ನನ್ನ ಕೈ ಹಿಡಿಯುವ ಅಲ್ಲಲ್ಲ ಬಾಯಿಗೆ ಹಿಡಿಯುವ ಉಂಡೆ :) 

ಬೇಕಾಗುವ ಸಾಮಗ್ರಿಗಳ ಪೈಕಿ ನಿಮಗೆ ಒಪ್ಪುವ ಇನ್ನಿತರ ಡ್ರೈ ಫ್ರೂಟ್ಸ್ ಗಳನ್ನೂ ಹಾಕಬಹುದು. ನಾನು ಬಳಸುವ ಒಣಹಣ್ಣುಗಳ ಇಲ್ಲಿ ತಿಳಿಸಿದ್ದೇನೆ ಒಂದು ಅಂದಾಜಿನ ಪ್ರಮಾಣದೊಂದಿಗೆ. ಪ್ರಯೋಗ ಮಾಡುತ್ತಾ ಮಾಡುತ್ತಾ ನಿಮಗೇ ಬೇಕಾದ ರುಚಿ ಮತ್ತು ಹದ ತಿಳಿಯುತ್ತಾ ಹೋಗುತ್ತದೆ. ತುಪ್ಪ, ಹಾಲು ಇಲ್ಲದ, ಒಣ ಹಣ್ಣುಗಳು, ಒಣದ್ರಾಕ್ಷಿ, ಬೀಜಗಳು ಮತ್ತು ಒಣ ತೆಂಗಿನಕಾಯಿ ತುರಿಯ ಸುಲಭ ಸಂಯೋಜನೆಯು ರೆಸಿಪಿಯಿದು.

ಮಾಡಲು ಬೇಕಾಗುವ ಸಮಯ :  ೩೦ ರಿಂದ ೪೦ ನಿಮಿಷಗಳು 

ಬೇಕಾಗುವ ಸಾಮಗ್ರಿಗಳು : 

೧ ಕಪ್ ಬಾದಾಮಿ

೧/೨ ಕಪ್ ಶೇಂಗಾಬೀಜ

೧/೨ ಕಪ್ ಗೋಡಂಬಿ (ನಾನು ನನ್ನ ಕಫ ಪ್ರಕೃತಿಗೆ ಅರ್ಧಕ್ಕಿಂತಲೂ ತುಸು ಕಡಿಮೆ ಹಾಕುತ್ತೇನೆ) 

೧/೪ ಕಪ್ ಪಿಸ್ತಾ

೧/೨ ಕಪ್ ಒಣದ್ರಾಕ್ಷಿ

6-೬ ಒಣ ಅಂಜೂರ

೨ ಚಮಚ ಕುಂಬಳಕಾಯಿ ಬೀಜ

೨ ಚಮಚ  ಸೂರ್ಯಕಾಂತಿಬೀಜ

೨ ಚಮಚ ಎಳ್ಳು

೧ ಚಮಚ ಗಸಗಸೆ

೧/೨ ಕಪ್ ಒಣ ತೆಂಗಿನಕಾಯಿ ತುರಿ

೩೦೦ ಗ್ರಾಂ ಒಣ ಖರ್ಜೂರ

ಮಾಡುವ ವಿಧಾನ :

ಒಂದು ಬಾಣಲೆಯಲ್ಲಿ, ಬಾದಾಮಿ, ಶೇಂಗಾ, ಗೋಡಂಬಿ, ಪಿಸ್ತಾ, ಬೀಜಗಳು, ಗಸಗಸೆ, ಎಳ್ಳು, ಕೊಬ್ಬರಿ ಎಲ್ಲವನ್ನೂ ಒಂದರ ನಂತರ ಒಂದರಂತೆ ಅತ್ಯಂತ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಇದೇ ಈ ರೆಸಿಪಿಯ ಅತ್ಯಂತ ಪ್ರಮುಖವಾದ ಮತ್ತು ತಾಳ್ಮೆಯ ಕೆಲಸ. ದೊಡ್ಡ ಉರಿಯಲ್ಲಿ ಹೊರಗಿನ ಸಿಪ್ಪೆ ಕಪ್ಪಾಗಿಸದೆ, ಒಳಗಡೆ ಬೇಯುವಂತೆ ಸಣ್ಣ ಉರಿಯಲ್ಲಿ ಹುರಿದಿಟ್ಟು ಎಲ್ಲವನ್ನೂ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಿ.  

ಎಲ್ಲವೂ ತಣಿದ ನಂತರ, ಮಿಕ್ಸರ್ ಗ್ರಯಂಡರ್ ಗೆ ಮೊದಲು ಬಾದಾಮಿಯನ್ನು ಹಾಕಿ ಸಂಪೂರ್ಣ ನುಣ್ಣಗಾಗದಂತೆ, ಕಡಿ ಕಡಿಯಾಗಿ ಪುಡಿ ಮಾಡಿಕೊಂಡು ದೊಡ್ಡ ಬಟ್ಟಲೊಂದಕ್ಕೆ ಎತ್ತಿಟ್ಟುಕೊಳ್ಳಬೇಕು. ನಂತರಕ್ಕೆ, ಮಿಕ್ಕೆಲ್ಲಾ ಪಿಸ್ತಾ, ಶೇಂಗಾಬೀಜ, ಕೊಬ್ಬರಿ, ಸೂರ್ಯಕಾಂತಿ ಬೀಜ ಮತ್ತು ಕುಂಬಳಬೀಜವನ್ನೂ ಅದೇ ರೀತಿ, ನುಣ್ಣನೆ ಪುಡಿಯಾಗುವ ಮುನ್ನವೇ ತುಸು ಕಡಿಕಡಿಯಾಗಿ ಪುಡಿ ಮಾಡಿ ಎತ್ತಿಟ್ಟುಕೊಳ್ಳಬೇಕು. ಗೋಡಂಬಿ ಬಲುಬೇಗ ನುಣ್ಣಗೆ ಪುಡಿಯಾಗಿ ಮಿಕ್ಸರ್ ಜಾಡಿಗೆ ಹಿಡಿದುಕೊಳ್ಳುವುದರಿಂದ, ನಾನು ಅದನ್ನು ಕೊನೆಯಲ್ಲಿ ಪುಡಿ ಮಾಡಿ ಸೇರಿಸುತ್ತೇನೆ. 

ಈಗ, ಸಣ್ಣ ಉರಿಯಲ್ಲಿ ಬಾಣಲೆಗೆ, ಸಣ್ಣಗೆ ಹೆಚ್ಚಿಕೊಂಡ ಅಂಜೂರವನ್ನು ಮತ್ತು ಒಣದ್ರಾಕ್ಷಿಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಸಣ್ಣ ಒಲೆ ಉರಿ ಇಲ್ಲಿಯೂ ಮುಖ್ಯವಾದ ಅಂಶ. ಬಿಸಿಯಾಗುತ್ತಿದ್ದಂತೆಯೂ, ಕತ್ತರಿಸಿದ ಹೋಳುಗಳೆಲ್ಲವೂ ಮೆತ್ತಗಾಗುತ್ತದೆ. ಇದೇ ನಮ್ಮ ಬೈಂಡಿಂಗ್ಏಜೇಂಟ್. ಉಂಡೆ ಎಂದರೆ ಬೆಲ್ಲದ ಕಂಪು ಬರಬೇಕು ಎನ್ನುವವರು ಬೇಕಿದ್ದಲ್ಲಿ ಈ ಹಂತಕ್ಕೆ ಸ್ವಲ್ಪ ಜೋನಿ ಬೆಲ್ಲವನ್ನು ಸೇರಿಸಬಹುದು (ಬೆಲ್ಲದ ಪುಡಿಯಿದ್ದರೆ , ತುಸುವೇ ನೀರು ಚುಮುಕಿಸಿ ಬೆಲ್ಲದ ಅಂಟು ಪಾಕ ಮಾಡಿ ಹಾಕಿಕೊಳ್ಳಬಹುದು). ನನಗೆ ವೈಯುಕ್ತಿಕವಾಗಿ ಅತೀ ಸಿಹಿಯಾದ ಉಂಡೆಗಿಂತಲೂ, ಹದವಾದ ಕಡಿಮೆ ಸಿಹಿ ಪ್ರಿಯವಾಗುತ್ತದೆ. ಮಿಶ್ರಣವನ್ನು ಹಾಗೇ ಸ್ವಲ್ಪ ಕೈಯಾಡಿಸಿದಂತೆಯೂ, ಹದವಾದ ಪಾಕ ಸಿದ್ಧವಾಗುತ್ತಲೇ, ಪುಡಿಮಾಡಿಟ್ಟುಕೊಂಡ ಎಲ್ಲ ಮಿಶ್ರಣವನ್ನು ಹಾಕಿ ಕೈಯಾಡಬೇಕು. ಈಗ ನಮ್ಮ ಉಂಡೆಯ ಹೂರಣ ತಯಾರಾಯಿತು! ನಮ್ಮ ಕೈಗೆ ಬಿಸಿ ತಡೆಯುವಷ್ಟು ಹದವಾಗಿ ಬಿಸಿ ಇರುವಾಗಲೇ, ಉಂಡೆ ಕಟ್ಟಲು ಪ್ರಾರಂಭಿಸಿದರೆ ಸರಿ. ಉಂಡೆ ಕಟ್ಟುವ ಸಮಯಕ್ಕೆ ಕೈಗೆ ಗ್ರೀಸ್ನ ಬೇಕಾದಲ್ಲಿ ಕೊಬ್ಬರಿ ಎಣ್ಣೆಯನ್ನು ತುಸುವೇ ಸವರಿಕೊಳ್ಳಬಹುದು. ಆದರೆ ಶೇಂಗಾ, ಎಳ್ಳು, ಗಸಗಸೆ, ಕೊಬ್ಬರಿಗಳು ಬಿಸಿಮಾಡಿದ ಕಾರಣ,  ಅದುವೇ ಉಂಡೆ ಕಟ್ಟಲು ಎಣ್ಣೆಯಂಶಹೊರಸೂಸುತ್ತದೆ. ನಮಗೆ ಬೇಕಾದ ಸೈಜಿಗೆ ಉಂಡೆ ಕಟ್ಟಿದರೆ ಮುಗಿಯಿತು, ಸವಿಯಲು ರುಚಿ ರುಚಿಯಾದ, ಪ್ರೊಟೀನ್ಯುಕ್ತ ಶಕ್ತಿ ಉಂಡೆ ಸಿದ್ಧ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್