ಪುಸ್ತಕ ಗ್ರಂಥಾಲಯ - ಓದಿ ನೋಡಿ!
ಅದೊಂದು ಪುಟ್ಟ ಗ್ರಂಥಾಲಯ. ಹೆಸರು - " ಕನ್ನಡ ಗಂಧ ಉಚಿತ ವಾಚನಾಲಯ". ಜಾಗ ಇರುವುದು ಕೇವಲ ಒಂದು ಗೂಡು ಅಂಗಡಿಯಷ್ಟು ಮಾತ್ರ - ಅಲ್ಲೇ ಸುಮಾರು ೧೨೦೦ ಪುಸ್ತಕಗಳ ಸಂಗ್ರಹವಿದೆ! ಭಾಷಾಶಾಸ್ತ್ರ, ಜೀವನಚರಿತ್ರೆ, ಇತಿಹಾಸ, ಹಿಂದೂ ಧರ್ಮ, ಧರ್ಮಶಾಸ್ತ್ರ, ಸಮಾಜ ವಿಜ್ಞಾನ, ವೈಜ್ಞಾನಿಕ ಲೇಖನಗಳ ಮಾಲೆ, ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯ, ರಾಮಾಯಣ, ಮಹಾಭಾರತ, ಕರ್ನಾಟಕದ ಹಿರಿಯ ಪ್ರಸಿದ್ಧ ಸಾಹಿತಿಗಳ ಅನೇಕ ಪುಸ್ತಕಗಳು, ಅಧ್ಯಾತ್ಮಕ್ಕೆ ಕುರಿತಾದ ಪುಸ್ತಕಗಳು, ತಂತ್ರಜ್ಞಾನ, ಕಲೆ, ಅನೇಕ ಗ್ರಂಥಸೂಚಿ ವಿಷಯಗಳ ಪುಸ್ತಕಗಳು ಹೀಗೆ ಸಾಕಷ್ಟು ವಿಭಾಗಗಳಲ್ಲಿ ಒಪ್ಪ ಓರಣವಾಗಿ ಪುಸ್ತಕಗಳ ಜೋಡಿಸಿಟ್ಟಿದೆ. ಸುಮಾರಾಗಿ ಹಿರಿಯರೊಬ್ಬರು ಕುಳಿತಿರುತ್ತಾರೆ ಅಲ್ಲಿ. ಹೊರಗಡೆ ಮೆಟ್ಟಿಲ ಕೆಳಗೆ ಇರುವ ಅಂಗಳದ ಜಾಗದಲ್ಲಿಯೇ ಒಂದು ಟೇಬಲ್ಲು ಎರಡು ಕುರ್ಚಿಗಳು, ಪಕ್ಕಕೊಂದು ರ್ಯಾಕ್. ಅದರಲ್ಲಿ ಆಯಾ ದಿನದ ೩-೪ ಬಗೆಯ ದಿನಪತ್ರಿಕೆಗಳು, ಆ ವಾರದ ವಾರಪತ್ರಿಕೆಗಳು, ಮಾಸ ಪತ್ರಿಕೆಗಳು ಲಭ್ಯ. ಯಾರು ಬೇಕಿದ್ದರೂ ಬಂದು ಕುಳಿತು ಪೇಪರ್-ಪುಸ್ತಕಗಳನ್ನು ಓದಿಕೊಂಡು ಹೋಗಬಹುದು ಯಾವುದೇ ಶುಲ್ಕವಿಲ್ಲ. ಪುಸ್ತಕಗಳನ್ನು ಆಯ್ದುಕೊಂಡು ಅಲ್ಲಿಯೇ ಕುಳಿತು ಓದಬಹುದು ಅಥವಾ ನಿರ್ಧಿಷ್ಟ ಸಮಯಕ್ಕೆ ಬೇರೆ ಗ್ರಂಥಾಲಯಗಳಂತೆಯೇ ಚಂದಾದಾರರಾಗಿ ಕಡ ತೆಗೆದುಕೊಂಡು ಹೋಗಿ ಓದಿ ಮರಳಿ ಕೊಡಬಹುದು. ಹೀಗೊಂದು ಜ್ಞಾನ ಬಂಡಾರ ಸ್ಥಾಪಿತವಾಗಿರುವುದು ಯಾವುದೋ ದೊಡ್ಡ ಸಂಸ್ಥೆ ಅಥವಾ ಸರ್ಕಾರದ ವತಿಯಿಂದ ಅಲ್ಲ. ಬೆಂಗಳೂರಿನ ವಸಂತಪುರ ಏರಿಯಾದ ಮಾರುತಿ ಲೇಔಟ್ ಬಡಾವಣೆಯಲ್ಲಿ, ತಮ್ಮದೇ ಮನೆಯ ಬಿಲ್ಡಿಂಗ್ ನ ಒಂದು ಭಾಗವನ್ನು ಗ್ರಂಥಾಲಯವಾಗಿ ಪರಿವರ್ತಿಸಿ, ಓದುಗರಿಗಾಗಿ ಅವಕಾಶ ನೀಡುವ ಪುಣ್ಯದ ಕೆಲಸ ಮಾಡುತ್ತಿರುವವರು ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತ ಆಗಿರುವ ಏ.ಈ.ಓಬಸಪ್ಪ. ಇವರ ಪುಸ್ತಕ ಆಸಕ್ತಿ ಮತ್ತು ಭಾಷಾಭಿಮಾನದ ಪ್ರತಿಫಲದಿಂದ ಎರಡೂವರೆ ವರ್ಷಗಳಿಂದ ಈ ಪುಟ್ಟದೊಂದು ಗ್ರಂಥಾಲಯ ತಲೆ ಎತ್ತಿ ನಿಂತು ಮುಂದುವರೆಯುತ್ತ ಬರುತ್ತಿದೆ. ಸಮಾನ ಮನಸ್ಕ ಗೆಳೆಯರ ಸಹಾಯದಿಂದ ಪ್ರಾಯೋಜಕರನ್ನು ಪಡೆದು, ಸಾಧ್ಯ ಆದಷ್ಟರ ಮಟ್ಟಿಗೆ ಅನೇಕ ಬಗೆಯ ದಿನಪತ್ರಿಕೆಗಳ ಸಂಗ್ರಹಿಸಿ, ಓದುಗರಿಗೆ ಪೂರೈಕೆ ಮಾಡುವ, ಪುಸ್ತಕಗಳ ಸಂಗ್ರಹಿಸಿ, ಅವುಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿರುವ ಇವರ ಸೇವೆ ಆದರ್ಶನೀಯ.
ಕೊರೋನಾ ನಂತರದ ಕಾಲದಿಂದ ನನ್ನ ಸ್ವಂತ ಆಸಕ್ತಿಯಿಂದ, ನಮ್ಮ ಸುತ್ತಮುತ್ತಲಿನ ಮಕ್ಕಳಿಗೆ ನನ್ನ ಮಗಳ ಕಥೆಪುಸ್ತಕಗಳು ಮತ್ತು ಇತರ ಪುಸ್ತಕಗಳನ್ನು ಕೇಳಿ ಪಡೆದು ಓದುವ ಅವಕಾಶವನ್ನು ರೂಪಿಸಿಟ್ಟಿದ್ದೆ. ಟೀವಿ ಮೊಬೈಲುಗಳ ಹಾವಳಿಯಲ್ಲಿ ಕಥೆ ಪುಸ್ತಕಗಳ ಓದಲು ಬಂದವರು ಕೇವಲ ಬೆರಳಣಿಕೆಯಷ್ಟು. ಮಗಳ ಪುಸ್ತಕ ಓದುವ ಹವ್ಯಾಸ ಹಾಗೆಯೇ ಮುಂದುವರೆಯುತ್ತಿರುವುದರಿಂದ ಅವಳಿಗಾಗಿ ಹೊಸ ಪುಸ್ತಕಗಳು ನಮ್ಮ ಮನೆಗೆ ಬರುತ್ತಲೇ ಇರುತ್ತವೆ. ಜಾಗದ ಅಭಾವವೂ, ಒಳ್ಳೆಯ ರೀತಿಯಲ್ಲಿ ಪುಸ್ತಕಗಳು ಬಳಕೆಯಾಗಲಿ ಎಂಬ ಉದ್ದೇಶವೂ ಸೇರಿಕೊಂಡು, ಈ ಒಂದು ಸಂಗ್ರಹಾಲಯಕ್ಕೆ ಸುಮಾರು ೬೫-೭೦ ಚಿಣ್ಣರ, ಸಾಹಿತ್ಯ, ಪೌರಾಣಿಕ, ವಿಜ್ಞಾನ, ಕಾಲ್ಪನಿಕ ಕಥೆಗಳು, ದೊಡ್ಡವರು ಓದಬಹುದಾದ ಕಾದಂಬರಿ, ಸಾಹಿತ್ಯ ಪುಸ್ತಕಗಳು ಹೀಗೆ ಅನೇಕ ಬಗೆಯ ಪುಸ್ತಕಗಳನ್ನು ಬಸಪ್ಪನವರ ಗ್ರಂಥಾಲಯಕ್ಕೆ ದಾನವಾಗಿ ನೀಡಿ ಸುರಕ್ಷಿತವಾಗಿ ಸೇರಿಸಿಟ್ಟಿದ್ದೇನೆ. ಹೆಚ್ಚಿನವು ಮನೆಯಲ್ಲಿ ೩-೪ ವರ್ಷಗಳ ಮಕ್ಕಳಿದ್ದರೆ ಅವರಿಗೆ ಕಥೆ ಹೇಳಲು, ೧೦ ವರ್ಷದವರೆಗಿನ ಮಕ್ಕಳು ಖುಷಿಯಿಂದ ಓದಬಹುದಾದ ಕನ್ನಡ ಮತ್ತು ಇಂಗ್ಲೀಷ್ಚಿತ್ರಕಥೆಗಳಿರುವ ಪುಸ್ತಕಗಳು. ಯಾರಿಗಾದರೂ ಪುಸ್ತಕಗಳನ್ನು ಓದುವ ಆಸಕ್ತಿಯಿದ್ದರೆ, ಬೆಂಗಳೂರು ದಕ್ಷಿಣ ಭಾಗದಲ್ಲಿ ಇರುವವರು ಈ ಪುಟ್ಟ ಗ್ರಂಥಾಲಯಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಬಳಸಿಕೊಳ್ಳಿ. ವಿಳಾಸ ವಿವರಣೆಗೆ ನನ್ನ ಸಂಪರ್ಕಿಸಿ.
#bookslibrary #readinghabit
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ