ನೇಪಾಳಿಗರ ದಶೈನ್ ಹಬ್ಬ
One India one festival many celebrations..
ಕನ್ನಡಿಗರ ದಸರಾ ನೇಪಾಳಿಗರ ದಶೈನ್ ಹಬ್ಬ. ಒಂಭತ್ತು ದಿನಗಳ ನವರಾತ್ರಿಯ ಜೊತೆಗೆ, ಹತ್ತನೇ ದಿನದ ವಿಜಯದಶಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಗಳೆಲ್ಲ ಒಂದೇ ಆದರೂ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅದೆಷ್ಟು ವಿಭಿನ್ನ ಮತ್ತು ವೈವಿಧ್ಯಮಯ. ನವರಾತ್ರಿ ಕೊನೆಯಲ್ಲಿ ದಾರ್ಜೀಲಿಂಗ್ನಲ್ಲಿದ್ದೆವು. ಬಾಗ್ದೋಗ್ರಾ ಏರ್ಪೋರ್ಟ್ ನಿಂದ ಹೊರಟ ಲಾಗಾಯ್ತು ಒಂದು ವಿಶೇಷತೆ ಗಮನಿಸಿದ್ದೆವು.ಅನೇಕ ಜನರ ಹಣೆಯ ಮೇಲೆ ಕೆಂಪು ಬಣ್ಣದ ಅಕ್ಕಿಯನ್ನು 'ಬಳಿದು'ಕೊಂಡಿದ್ದರು. ಸಣ್ಣಕೆ ಹಚ್ಚಿಕೊಂಡ ಕುಂಕಿ ಅಲ್ಲ ಅದು, ಕೆಲವರ ಹಣೆಯ ಮೇಲೆ ದೊಡ್ಡ ರೌಂಡ್ ಇದ್ದರೆ, ಇನ್ನು ಕೆಲವರು ಇಡೀ ಹಣೆಯ ತುಂಬಾ ಈ ಕೆಂಪು ಅಕ್ಕಿಯನ್ನು ಬಳಿದುಕೊಂಡಿದ್ದರು. "ಅದು ದಶೈನ್ ಹಬ್ಬ ನಡೆಯುತ್ತಿದೆಯಲ್ಲ ಅದಕ್ಕಾಗಿ ನಾವು ಟೀಕಾ ಹಾಕಿಕೊಳ್ಳುತ್ತೇವೆ" ಎಂದ ಡ್ರೈವರಣ್ಣ. ವಿಜಯದಶಮಿಯ ದಿನವಂತೂ ಬೆಳಿಗ್ಗೆ ವಾಕ್ ಹೋದಾಗ ಸಾಕಷ್ಟು ಜನರ ಹಣೆಯಲ್ಲಿ ಈ ಸುಂದರ ದೊಡ್ಡ 'ಟೀಕಾ' ರಾರಾಜಿಸುತ್ತಿತ್ತು. ದೇವಸ್ಥಾನದಿಂದ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿದಾಗ ಅಲ್ಲಿನ ಆಚರಣೆಯ ಕುರಿತು ಅವರು ವಿವರವಾಗಿ ತಿಳಿಸಿದರು.
ವಿಜಯದಶಮಿ ಇಲ್ಲಿನವರ ಅದರಲ್ಲೂ ನೇಪಾಳಿಗರಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು. ಅಂದು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ, ಈ 'ಟೀಕಾ' ಎಂದು ಏನು ತಿಳಿಸಿದೆನೋ, ಇದನ್ನು ತಯಾರಿಸುತ್ತಾರೆ. ಇದನ್ನು 'ಅಕ್ಕಿ, ಮೊಸರು ಮತ್ತು ಸಿಂಧೂರ' ಸೇರಿಸಿ ಕಲಸಿ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪು ಬಣ್ಣದ ಹೊರತಾಗಿ, ಗುಲಾಬ್ ಪಕಳೆಯಿಂದ ತಯಾರಿಸಿದ ಗುಲಾಬಿ ಬಣ್ಣವನ್ನು ಮಾರುಕಟ್ಟೆಯಿಂದ ತಂದು ಕೂಡ ಮಾಡುತ್ತಾರೆ ಎಂದು ಮತ್ತೊಂದು ಮಹಿಳೆ ಧ್ವನಿಗೂಡಿಸಿದರು. ಇಂದಿನ ದಿನ ಮನೆ ಮಂದಿಯೆಲ್ಲ ಸೇರಿಕೊಂಡು, ಪೂಜೆ ಇತ್ಯಾದಿ ಪೂರೈಸಿ, ಮನೆಯ ಹಿರಿಯರು, ತಮಗಿಂತ ಕಿರಿಯರಿಗೆ ಈ 'ಟೀಕಾ' ಹಣೆಗೆ ಹಚ್ಚಿ, ಅವರಿಗೆ ಒಳ್ಳೆಯದಾಗುವಂತೆ ಮನಸಾರೆ ಆಶೀರ್ವದಿಸುತ್ತಾರಂತೆ. ಈ 'ಟೀಕಾ' ದ ಜೊತೆಗೆ, 'ಜಮರ' ಎಂಬ ಹುಲ್ಲನ್ನು ಪ್ರಸಾದವಾಗಿ ನೀಡುತ್ತಾರೆ. ನವರಾತ್ರಿಯ ಪ್ರಾರಂಭದ ದಿನದಿಂದಲೇ ಮನೆಯಲ್ಲಿ ಬಾರ್ಲಿ, ಗೋಧಿ, ಅಕ್ಕಿ, ಜೋಳ ಇತ್ಯಾದಿ ಧಾನ್ಯಗಳ ಮಣ್ಣಿಗೆ ಹಾಕಿ, ಈ ಹುಲ್ಲನ್ನು ಬೆಳೆಸುತ್ತಾರಂತೆ. ವೈಜ್ಞಾನಿಕ ಕಾರಣ ಏನಿದೆಯೋ ತಿಳಿಯದು ಆದರೆ ಮನೆ ಮಂದಿಯೆಲ್ಲ ಒಟ್ಟು ಸೇರಿ ಈ 'ಟೀಕಾ' ಹಚ್ಚುವ ಕಾರ್ಯಕ್ರಮ ಮಾತ್ರ ಅತ್ಯಂತ ಅತೀಯತೆಯಿಂದ ಕೂಡಿರುತ್ತದೆಯಂತೆ. ಅನೇಕ ದೇವಸ್ಥಾನಗಳಲ್ಲಿ ಈ ದಶೈನ್ ಹಬ್ಬದ ಸಮಯದಲ್ಲಿ, ದೇವಸ್ಥಾನದ ಪ್ರಾಂಗಣದಲ್ಲೇ 'ಜಮರ' ಹುಲ್ಲನ್ನು ಬೆಳೆಸಿ, ಬಂದವರಿಗೆಲ್ಲ ಟೀಕಾ ಹಚ್ಚಿ ಪ್ರಸಾದ ನೀಡಿ ಕಳಿಸುತ್ತಾರೆ. ಎಂತೆಂತ ಆಧುನಿಕ ವೆಸ್ಟೆರ್ನ್ ಡ್ರೆಸ್ ಹಾಕಿದವರೂ, ಫಾರ್ಮಲ್ ಡ್ರೆಸ್ಸಿನಲ್ಲಿರುವವರೂ ಕೂಡ ಅಂದು ಹಣೆ ತುಂಬಾ ದೊಡ್ಡ ಟೀಕಾ ಹಾಕಿಕೊಂಡು ಓಡಾಡುತ್ತಿರುವುದನ್ನು ನೋಡಲೇ ಒಂದು ರೀತಿಯ ಖುಷಿಯಾಗುತ್ತಿತ್ತು. ಒಂದು ಸಮಯದಲ್ಲಿ, ಯಾವುದೋ ಮಾತಿನ ಮಧ್ಯೆ, ನಮ್ಮನ್ನು ಅಂದು ಸೈಟ್ಸೈ ಸೀಯಿಂಗ್ಗೆ ಕರೆದೊಯ್ಯುತ್ತಿದ್ದ ಸೈಯಮ್, "ನಾವು ಈ ಟೂರಿಸ್ಟ್ ಸೀಸನ್ನಿನಲ್ಲಿ, ಮನೆಯಲ್ಲಿ ಹಬ್ಬ ಬಿಟ್ಟು ಬರುತ್ತೇವೆ, ಇಂದು ಯಾರೂ ಇಲ್ಲ ಎಂದು ನಾನು ಬಂದದ್ದು ಇಲ್ಲವಾದರೆ ನಮ್ಮ ಕುಟುಂಬದ ಜೊತೆ ಹಬ್ಬ ಮಾಡುತ್ತಿರುತ್ತಿದ್ದೆ.." ಎಂದುಹೇಳಿದ್ದನ್ನು ಕೇಳುವಾಗ, ಈ ಹಬ್ಬಗಳು ಅದೆಷ್ಟು ಆತ್ಮೀಯತೆ ಮತ್ತು ಒಗ್ಗಟ್ಟನ್ನು ತರುತ್ತದೆ ಎಂದು ಖುಷಿಯಾಯಿತು. ವಿಜಯದಶಮಿಯ ದಿನ ಸಂಜೆ, 'ಮಹಾಕಾಲ' ದೇವಸ್ಥಾನಕ್ಕೆ ಭೇಟಿಯಿತ್ತಾಗ, ಅಲ್ಲಿ ನಮಗೂ ಆ ಕೆಂಪನೆಯ ಅಕ್ಕಿಯ 'ಟೀಕಾ' ಸಿಕ್ಕಿದ್ದು ಮತ್ತಷ್ಟು ಖುಷಿ :) :)
#nepal #dushain #celebration #teeka #westbengal #culture #festivals
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ