ಒಡಿಶಾ ವಾಸ್ತುಶಿಲ್ಪದ ರತ್ನ - ಮುಕ್ತೇಶ್ವರ ದೇವಾಲಯ

೧. ಮುಕ್ತೇಶ್ವರ ದೇವಾಲಯದ ಕುರಿತಾಗಿ : 

ಭಾರತದಲ್ಲಿ ಶಿವನಿಗಾಗಿ ಕಟ್ಟಿದ ಆಕರ್ಷಕ ಹಿಂದೂ ದೇವಾಲಯಗಳಲ್ಲಿ ಮುಕ್ತೇಶ್ವರ ದೇವಸ್ಥಾನವವೂ ಒಂದು. ಈ ದೇವಾಲಯದ ವಾಸ್ತುಶಿಲ್ಪವೇ ಇದರ ಮುಖ್ಯ ಆಕರ್ಷಣೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳು ಪೂರ್ವಾಭಿಮುಖವಾಗಿದ್ದರೆ, ಇಲ್ಲಿನ ದೇವಸ್ಥಾನ ಪಾಶ್ಚಿಮಾಭಿಮುಖವಾಗಿದೆ. ಮುಕ್ತೇಶ್ವರ ಎಂದರೆ ಮುಕ್ತಿ ಅಥವಾ ಸ್ವಂತಂತ್ರ್ಯವನ್ನು ನೀಡುವ ದೇವರೆಂದರ್ಥ. ಕೋನಾರ್ಕ್ ಸೂರ್ಯದೇವಾಲಯಕ್ಕೆ ಹೋಲಿಸಿದರೆ ಹೆಚ್ಚು ಎತ್ತರದ ದೇವಾಲಯ ಇದಲ್ಲದಿದ್ದರೂ, ಇಲ್ಲಿನ ದೇವಾಲಯದ ಕೆತ್ತನೆ ಅತ್ಯದ್ಭುತವಾಗಿದೆ. ದೇವಾಲಯದ ಹೊರಾಂಗಣ ಕೆತ್ತನೆ ಕೆಂಪು ಕಲ್ಲಿನ ಮೇಲಿದ್ದರೆ, ಒಳಾಂಗಣ ಕೆತ್ತನೆ ಕಪ್ಪು ಕಲ್ಲುಗಳ ಮೇಲೆ ಮಾಡಲಾಗಿದೆ. 'ಕಳಿಂಗ' ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಇದಕ್ಕಿಂತ ಉತ್ತಮವಾದ ದೇವಾಲಯ ಸಿಗಲಿಕ್ಕಿಲ್ಲ. ದೇವಾಲಯದಲ್ಲಿನ ವಾಸ್ತುಶಿಲ್ಪದ ಹೊಸ ಮಾದರಿಯ ಪ್ರಯೋಗವು ಅದರ ಪೂರ್ವವರ್ತಿಗಳಿಗೆ ತೋರಿಸಿರುವ ಪ್ರಬುದ್ಧ ಹಂತವನ್ನು ಮುಕ್ತೇಶ್ವರ ದೇವಾಲಯದಲ್ಲಿನ ಕೆತ್ತನೆಗಳಲ್ಲಿ ನಾವು ಕಾಣಬಹುದು. "ಒಡಿಶಾ ವಾಸ್ತುಶಿಲ್ಪದ ರತ್ನ" ಎಂಬ ಪ್ರಸಿದ್ಧತೆ ಈ ದೇವಾಲಯಕ್ಕಿದೆ. ಈ ದೇವಾಲಯವು 950–975 CE ಸಮಯದಲ್ಲಿ ಸೋಮವಂಶಿ ಕಾಲದಲ್ಲಿ ರಾಜ ಪ್ರಥಮ ಯಯಾತಿ ನಿರ್ಮಾಣ ಮಾಡಿದನು ಎಂಬ ಉಲ್ಲೇಖವಿದೆ. ಈ ದೇವಸ್ಥಾನಕ್ಕೆ ಪ್ರವೇಶ ಶುಲ್ಕವಿಲ್ಲ. ದೇವಸ್ಥಾನದ ಆವರಣದಲ್ಲಿ ಎರಡು ಮುಖ್ಯ ದೇವಾಲಯಗಳಿವೆ. ಒಂದು ಮುಕ್ತೇಶ್ವರ ದೇವಾಲಯ ಮತ್ತೊಂದು ಪರಶುರಾಮೇಶ್ವರ ದೇವಾಲಯ. ಮುಕ್ತೇಶ್ವರ ದೇವಾಲಯದ ಹಿಂಬದಿಯಲ್ಲಿ ಸ್ವಚ್ಛ ಸುಂದರ ನೀರಿನ ಪುಷ್ಕರಣಿ ಇದೆ. ಇಲ್ಲಿನ ಕೆಲವು ಸ್ಥಳೀಯರು ದೇವಾಲಯಕ್ಕೆ ಭೇಟಿ ನೀಡಿ, ಪುಷ್ಕರಣಿಯಲ್ಲಿನ ಮೀನುಗಳಿಗೆ ಧಾನ್ಯಗಳ ಉಣಬಡಿಸುವ ರೂಢಿ ಇಟ್ಟುಕೊಂಡಿದ್ದಾರೆ. ಈ ದೇವಾಲಯವನ್ನು. ಪಕ್ಕದ ಪರಶುರಾಮೇಶ್ವರ ಮಂದಿರದ ಉತ್ತರಾಧಿಕಾರಿ ಇದು ಎಂದು ಕರೆಯಲಾಗುತ್ತದೆ. ಈ ದೇವಾಲಯಗಳ ವಾಸ್ತುಶಿಲ್ಪಕಲೆಗೆ ಸಾಕಷ್ಟು ಬಗೆಯ ಪ್ರಶಸ್ತಿಗಳು ಸಂದಿವೆ. ಸಾವಿರಾರು ಸಣ್ಣ ದೊಡ್ಡ ಕುಸುರಿ ಕೆಲಸದ ಕಲ್ಲಿನ ಕೆತ್ತನೆಯನ್ನು ನಿಧಾನವಾಗಿ ನೋಡುತ್ತಾ ಹೋದರೆ, ಅರ್ಧ ದಿನ ಇಲ್ಲಿಯೇ ಕಳೆಯಬಹುದು. ಪ್ರತಿವರ್ಷವೂ ಇಲ್ಲಿ ಮೂರು ದಿನಗಳ ಕಾಲ ಒಡಿಶಿ ಸಂಸ್ಕೃತಿಯ ಸಾರುವಂತಹ ಒಡಿಶಿ ನೃತ್ಯ ಕಾರ್ಯಕ್ರಮವನ್ನು ಅತ್ಯಂತ ಆಸ್ಥೆ, ಶ್ರದ್ಧೆ ಮತ್ತು ವೈಭವದಿಂದ ಹಮ್ಮಿಕೊಂಡು ನಡೆಸಲಾಗುತ್ತದೆ. 



Uploading: 13753344 of 68706577 bytes uploaded.




ದೇವಾಲಯಗಳು ಅಷ್ಟಭುಜಾಕೃತಿಯ ಕಾಂಪೌಂಡ್ ಗೋಡೆಯೊಳಗೆ ಸುತ್ತುವರಿದಿದ್ದು ಅದರ ಮೇಲೆ ವಿಸ್ತಾರವಾದ ಕೆತ್ತನೆಗಳಿವೆ. ದೇವಾಲಯವು ತೋರಣ ಎಂದು ಕರೆಯಲ್ಪಡುವ ಮುಖಮಂಟಪವನ್ನು ಹೊಂದಿದೆ. ಮುಕ್ತೇಶ್ವರ ದೇವಸ್ಥಾನದ ಅಲಂಕೃತ ತೋರಣ ಕಮಾನು ಒಂದು ಅನನ್ಯ ಕೃತಿಯಾಗಿದೆ. ಇದು ಸುಮಾರು 900 CE ಹಿಂದಿನದು ಮತ್ತುಬೌದ್ಧ ವಾಸ್ತುಶಿಲ್ಪದಪ್ರಭಾವವನ್ನು ತೋರಿಸುತ್ತದೆ. ಕಮಾನಿನ ದ್ವಾರವು ದಟ್ಟವಾದ ಕಂಬಗಳನ್ನು ಹೊಂದಿದ್ದು, ಮಣಿಗಳು ಮತ್ತು ಇತರ ಆಭರಣಗಳ ತಂತಿಗಳನ್ನು ಹೊಂದಿರುವ ನಗುತ್ತಿರುವ ಮಹಿಳೆಯರ ಪ್ರತಿಮೆಗಳ ಮೇಲೆ ಕೆತ್ತಲಾಗಿದೆ.ಇನ್ನು, ಮುಖಮಂಟಪವು ಕಡಿಮೆ, ಬೃಹತ್ ಗಾತ್ರ ಮತ್ತು ಆಂತರಿಕ ಕಂಬಗಳನ್ನು ಹೊಂದಿರುವ ಗೋಡೆಯ ಕೋಣೆಯಾಗಿದೆ. ಮಧ್ಯಮ ಎತ್ತರದ ಕಟ್ಟಡಗಳ ಘನತೆಯನ್ನು ಲಂಬ ಮತ್ತು ಅಡ್ಡ ರೇಖೆಗಳ ಸಂಯೋಜನೆಯನ್ನು ಕೌಶಲ್ಯದಿಂದ ಜೋಡಿಸಲಾಗಿದೆ. ಪ್ರತಿ ಕಂಬಗಳಕೆತ್ತನೆಯೂ, ನೆಲದಿಂದ ಕಮಲದ ಹೂಗಳ ಕೆತ್ತನೆಯೊಂದಿಗೆ ಪ್ರಾರಂಭಿಸಿ, ಒಡಿಶಾ ನೃತ್ಯ ಮಾಡುತ್ತಿರುವ ನರ್ತಕಿಯರು, ಕಮಲವನ್ನು ಹಿಡಿದುಕೊಂಡಿರುವ ಸ್ತ್ರೀಯರು, ಸುಂದರವಾದ ಆನೆಗಳು, ಅದರ ಮೇಲೆ ಸಿಂಹ, ನವಿಲುಗಳಂತಹ ವಿವಿಧ ಪ್ರಾಣಿ ಪಕ್ಷಿಗಳ ಶಿಲ್ಪಗಳು, ಸಣ್ಣ ಕುಸುರಿ ಕೆಲಸಗಳಿರುವ ಆಕರ್ಷಕ ಮೊತಿಫ್ ಡಿಸೈನ್ ಕೆತ್ತನೆಯೊಂದಿಗೆ ಮೂಡಿಸಲಾಗಿದೆ. ಆನೆಗಳ ಕಾಲಿನ ಉಗುರುಗಳ ಕೆತ್ತನೆಯಷ್ಟು ವಿವರವಾದ ಕುಸುರಿ ಕೆಲಸ ನಮ್ಮನ್ನು ಅತ್ಯಾಶ್ಚರ್ಯಗೊಳಿಸುತ್ತದೆ. ನಮ್ಮ ಪೂರ್ವಜರಿಗೆ ಪರಿಸರದ ಜೊತೆ ಇದ್ದ ನಂಟಿನ ಮೌಲ್ಯವನ್ನು ಎತ್ತಿ ಸಾರುತ್ತವೆ. ಈಗಿನ ಕಾಲಕ್ಕೆ ಮರದ ಬಾಗಿಲುಗಳು ಮತ್ತು ಕಲ್ಲಿನ ಕೆತ್ತನೆಗೆ ಕಂಪ್ಯೂಟರೈಸ್ಡ್ ಕಟಿಂಗ್ ವರ್ಕ್ ಗಳು ಲಭ್ಯವಾಗಿದೆ. ಆದರೆ ೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆ, ಕರಾರುವಕ್ಕಾಗಿ ಒಂದು ಹನಿಯೂ ತಪ್ಪಿಲ್ಲದಂತೆ ಸಮ್ಮಿತೀಯವಾಗಿ ಕಲ್ಲಿನ ಕೆತ್ತನೆ ಈ ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಮಾಡಿರುವುದು ಮಾತ್ರ ಅತಿವಾಸ್ತವಿಕವೆನಿಸುತ್ತದೆ.   ಮಳೆ ಗಾಳಿ ವಾತಾವರಣಗಳ ವೈಪರೀತ್ಯವನ್ನು ತಡೆದುಕೊಂಡು, ಸಾವಿರ ವರ್ಷಗಳ ನಂತರವೂ ಅಷ್ಟೇ ಸೌಂದರ್ಯದ ಗಣಿಯಾಗಿ ನಿಂತಿರುವ ಈ ಕಾಳಿಂಗ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಪ್ರಪಂಚದ ನಾನಾ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಹಿತಕರವಾದ ಸ್ತ್ರೀ ರೂಪಗಳು ಮತ್ತು ಕೋಟಿಗಳು ಮತ್ತು ನವಿಲುಗಳ ಆಕೃತಿಗಳನ್ನು ಹೊಂದಿರುವ ಶಿಲ್ಪಗಳನ್ನು ಹೊಂದಿದೆ. ಶಸ್ತ್ರಧಾರಿಯಾಗಿ ಕುದುರೆಯನ್ನು ಓಡಿಸುತ್ತಿರುವ ಯುದ್ಧ ಮಹಿಳೆಯ ಶಿಲ್ಪ ಕಲಾಕೃತಿಗಳು ಆಗಿನ ಕಾಲದ ಅನೇಕ ಸಾಹಸ ಸಾಧನೆಯ ಹಾದಿಯ ಕಥೆಗಳನ್ನು, ಪ್ರಾಚೀನ ಭಾರತದ ನಾಗರೀಕತೆಯನ್ನು ನಮಗೆ ಉಣಬಡಿಸುತ್ತವೆ. ಪ್ರತಿಯೊಂದು ಕಲಾಕೃತಿಗಳ ವಸ್ತುವಿಷಯಗಳಲ್ಲಿ ಕಾಣಸಿಗುವ ಆಭರಣಗಳ ಕುಸುರಿ ಕೆತ್ತನೆಯ ವಿವರಣೆ, ಕಳಿಂಗ ರಾಜವಂಶ ಮತ್ತು ಆಡಳಿತ ಸಮಯದಲ್ಲಿ ಇದ್ದ ಸಮೃದ್ಧಿಯ ತೋರ್ಪಡಿಸುತ್ತದೆ.
















ವಿಮಾನ :

ದೇವಾಲಯದ ಮುಖ್ಯ ವಿಮಾನ ಕಟ್ಟಡದ ಹೊರಭಾಗದಲ್ಲಿ(ವಿಮಾನ), ನಾಲ್ಕು ನಟರಾಜ ಮತ್ತು ನಾಲ್ಕು ಮುಖಗಳಲ್ಲಿ ನಾಲ್ಕುಕೀರ್ತಿಮುಖಗಳಿವೆ. ಮಧ್ಯದ ಶಿಕಾರಾ 10.5 ಮೀಟರ್ (34 ಅಡಿ) ಎತ್ತರವಿದೆ, ಪ್ರತಿ ಇಂಚು ಅಲಂಕಾರಿಕಗಳು, ವಾಸ್ತುಶಿಲ್ಪದ ಮಾದರಿಗಳು ಮತ್ತು ಕೆತ್ತನೆಯ ಆಕೃತಿಗಳನ್ನು ಕೆತ್ತಲಾಗಿದೆ. ಇದು ಅತ್ಯಂತ ಅಲಂಕೃತವಾದ ಚೈತ್ಯ ಕಿಟಕಿ, ಮುಖವಾಡದ ರಾಕ್ಷಸ ತಲೆ ಮತ್ತು ಕುಬ್ಜ ವ್ಯಕ್ತಿಗಳಿಂದ ಕಿರೀಟವನ್ನು ಹೊಂದಿದೆ. ಮೊಸಳೆ ಮತ್ತು ಮಂಗಗಳ ಪಂಚತಂತ್ರ ಕಥೆಗಳ ಕೆತ್ತನೆಯನ್ನೂ ಇಲ್ಲಿ ಕಾಣಬಹುದಾಗಿದೆ.  

ಗರ್ಭಗುಡಿ

ಈ ದೇವಾಲಯ ಶಿವನಿಗಾಗಿ ನಿರ್ಮಾಣ ಮಾಡಿದ್ದಾದರೂ, ರೂಫ್ ಟಾಪಿನಲ್ಲಿ ಶೇಷನಾಗನನ್ನೊಳಗೊಂಡ ವಿಷ್ಣುವಿನ ಕಲ್ಲಿನ ಕೆತ್ತನೆಯನ್ನು ಕಾಣಬಹುದು. ಈ ದೇವಾಲಯದ ವಿಶೇಷತೆ ಎಂದರೆ, ಪಾಶ್ಚಿಮಾಭಿಮುಖ ದೇವಸ್ಥಾನವಾದ್ದರಿಂದ, ಸೂರ್ಯಾಸ್ತದ ಕೊನೆಯ ಕಿರಣ ಗರ್ಭಗುಡಿಯ ದೇವರ ತಲುಪಿ ಮಾಯವಾಗುತ್ತದೆಯಂತೆ! ನಾಗ ಮತ್ತು ನಾಗಿಣಿಯರು ಹೆಣೆದುಕೊಂಡಿರುವ ಮೋಡಿಗಳನ್ನು ಪ್ರದರ್ಶಿಸುವ ಸುಂದರವಾದ ಕೃತಿಗಳನ್ನು ಕೆತ್ತಲಾಗಿದೆ . ಗರ್ಭಗೃಹವು ಒಳಗಿನ ಘನಾಕಾರವಾಗಿದ್ದು, ಹೊರಭಾಗದಲ್ಲಿ ಆಫ್‌ಸೆಟ್ ಗೋಡೆಗಳನ್ನು ಹೊಂದಿದೆ.

ಜಗಮೋಹನ

ದೇವಾಲಯದ ಜಗಮೋಹನ 35 ಮೀ (115 ಅಡಿ) ಎತ್ತರವಿದೆ. ಇದು ವಿಶ್ವಕರ್ಮ ಮೊಹರಣ ಶಿಲ್ಪಿಗಳಿಂದ ಸಂಕೀರ್ಣವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ವಕ್ರರೇಖೆಯ ಶಿಖರವನ್ನು ಹೊಂದಿರುವ ವಿಮಾನ ಮತ್ತು ಮೆಟ್ಟಿಲುಗಳಿರುವ ಪಿರಮಿಡ್ ಮಾದರಿಯ ಜಗನ್ಮೋಹನ ಆಕೃತಿಯದು. ಇದು, ಸಾಧುಗಳು ಅಥವಾ ಪವಿತ್ರ ಪುರುಷರು ಮತ್ತು ಆಭರಣಗಳಿಂದ ಅಲಂಕೃತ ಶ್ರೀಮಂತ ಮಹಿಳೆಯರ ಸೊಗಸಾದ ಕೆತ್ತನೆಗಳಿಂದ ಕೂಡಿದೆ. ಚಂಡ, ಪ್ರಚಂಡ, ಗಂಗಾ ಮತ್ತು ಯಮುನೆಯ ರ ಚಿತ್ರಗಳನ್ನು ಇಲ್ಲಿ ಕೆತ್ತಲಾಗಿದೆ . ಜಗಮೋಹನನ ಮುಂದೆ ತೋರಣ ಇರುತ್ತದೆ . ಗಜಲಕ್ಷ್ಮಿ , ರಾಹು ಮತ್ತು ಕೇತುಗಳ ಆಕೃತಿಗಳನ್ನೂ ಸಹ ಇಲ್ಲಿ ಕಾಣಬಹುದು. ಜಗಮೋಹನದ ಪಕ್ಕದ ಮೇಲ್ಛಾವಣಿಯ ಒಂದು ಸಣ್ಣ ವಿಸ್ತರಣೆಯು ಅದರ ಹಿಂಗಾಲುಗಳ ಮೇಲೆ ಕುಳಿತಿರುವ ಸಿಂಹದ ಚಿತ್ರ, ಬಾಹ್ಯ ಗೋಡೆಗಳ ಮೇಲೆ ಪಂಚಶೇಷ ನಾಗ ಮತ್ತು ಸುಂದರವಾದ ವಸ್ತ್ರ ಆಭರಣಭೂಷಿತ ನಾಗಿಣಿಗಳ ಕೆತ್ತನೆಗಳುಳ್ಳ  ಅಲಂಕಾರಗಳು ಕಂಬಗಳ ಮೇಲೆ ಕಾಣಸಿಗುತ್ತವೆ. 











೨. ಪರಶುರಾಮ ದೇವಾಲಯದ ಕುರಿತಾಗಿ :

ಮುಕ್ತೇಶ್ವರ ದೇವಸ್ಥಾನದ ಕಾಂಪೌಂಡಿನಲ್ಲಿಯೇ ಅಣತಿ ದೂರದಲ್ಲಿದೆ ಪರಶುರಾಮೇಶ್ವರ ಎಂದು ಪೂಜಿಸಲ್ಪಡುವ ಶಿವನಿಗೆ ಸಮರ್ಪಿತವಾಗಿದ ದೇವಾಲಯ. ಈ ಪ್ರಾಚೀನ ಹಿಂದೂ ದೇವಾಲಯವು ಅದರ ಭವ್ಯವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ೬೫೦ CE ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ  ಕೂಡಾ 'ನಾಗಾರಾ" ಅಥವಾ 'ಕಳಿಂಗ' ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾಗಿದೆ. ತಜ್ಞರ ಪ್ರಕಾರ, ಜಗಮೋಹನ ಎಂಬ ಪ್ರವೇಶ ಮಂಟಪವನ್ನು ಮುಖ್ಯ ಗರ್ಭಗುಡಿಗೆ ಜೋಡಿಸಿದ ಮೊದಲ ದೇವಾಲಯ ಇದಾಗಿದೆ. ದೇವಾಲಯದ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ಸಾವಿರ ಶಿವಲಿಂಗಗಳು ಅದರ ವಾಯುವ್ಯ ಮೂಲೆಯಲ್ಲಿ ನೆಲೆಗೊಂಡಿವೆ. ಇತಿಹಾಸಕಾರರ ಪ್ರಕಾರ, ಈ ದೇವಾಲಯವನ್ನು ಶೈಲೋದ್ಭವ ರಾಜವಂಶದ ಮಾಧವರಾಜ II AD 7 ನೇ ಶತಮಾನದಲ್ಲಿ ನಿರ್ಮಿಸಿದನು. ಪರಶುರಾಮೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವೆಂದರೆ ಪರಸುಮಾಷ್ಟಮಿ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವು ಆಷಾಢ ಮಾಸದಲ್ಲಿ (ಜೂನ್ ಅಥವಾ ಜುಲೈ) ಬರುತ್ತದೆ. ಈ ಉತ್ಸವದಲ್ಲಿ ಮೆರವಣಿಗೆ ಮತ್ತು ಹಬ್ಬವನ್ನು ಆಯೋಜಿಸಲಾಗುತ್ತದೆ. 













ದೇವಾಲಯದ ಶಿಖರವನ್ನು (ಶಿಖರ) ಪಂಚರಥ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೇವಾಲಯವನ್ನು ಗರ್ಭಗುಡಿ (ವಿಮಾನ) ಮತ್ತು ಪ್ರಾರ್ಥನಾ ಮಂದಿರ (ಜಗ್ಮೋಹನ) ಸೇರಿದಂತೆ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಾರ್ಥನಾ ಮಂದಿರದ ಮುಖ್ಯ ದ್ವಾರವು ಆನೆಗಳ ಸೊಗಸಾದ ಕೆತ್ತನೆಗಳನ್ನು ಒಳಗೊಂಡಿದೆ. ಸಭಾಂಗಣವು ನಾಲ್ಕು ಕಿಟಕಿಗಳನ್ನು ಹೊಂದಿದೆ, ಅದರ ಪಶ್ಚಿಮ ಭಾಗದಲ್ಲಿ ಎರಡು ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ತಲಾ ಒಂದು. ಈ ಕಿಟಕಿಗಳು ಇಂಟರ್ಲೇಸ್ಡ್ ವಿನ್ಯಾಸವನ್ನು ಹೊಂದಿದ್ದು, ಸಂಗೀತಗಾರರು ಮತ್ತು ನೃತ್ಯಗಾರರ ಶಿಲ್ಪಗಳನ್ನು ಒಳಗೊಂಡಿದೆ. ಇದು ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ದ್ವಾರವನ್ನು ಹೊಂದಿದೆ.

ಭುವನೇಶ್ವರದಲ್ಲಿರುವ ಎಲ್ಲ ದೇವಾಲಯಗಳ ಪೈಕಿ, ಚಾಮುಂಡ, ವರಾಹಿ, ಇಂದ್ರಾಣಿ, ವೈಷ್ಣವಿ,ಕೌಮಾರಿ, ಶಿವಾನಿ, ಬ್ರಾಹ್ಮಿ ಮತ್ತು ದೇವಿಕಾ ಎಂಬ ಏಳು ದೇವಿಯರ ಮೂರ್ತಿಗಳನ್ನು ಆಕರ್ಷಣೀಯವಾಗಿ ಕೆತ್ತಲಾಗಿರುವ ಆಕರ್ಷಕ ದೇವಾಲಯವಿದು. ಮಹಿಷಾಸುರ ಮರ್ಧಿನಿಯ ಪ್ರತಿಕೃತಿ ಇರುವ ಮೊದಲ ದೇವಾಲಯವಿದು! ಹೊರಾಂಗಣ ಗೋಡೆಗಳ ಕೆತ್ತನೆಯಲ್ಲಿ ಕೇವಲ ಶಿವನ ಮೂರ್ತಿಯೊಂದೇ ಅಲ್ಲದೆ, ಗಣಪತಿ, ಕಾರ್ತಿಕ, ವೀರಭದ್ರ, ವಿಷ್ಣು, ಸೂರ್ಯ, ಗಂಗಾ, ಯಮುನಾ ಇತ್ಯಾದಿ ದೇವ-ದೇವತೆಗಳ ಮೂರ್ತಿಗಳನ್ನು ಕಾಣಬಹುದಾಗಿದೆ. ದೇವಾಲಯದ ಮುಖಮಂಟಪ ಮತ್ತು ಹೊರಗಿನ ಗೋಡೆಗಳು ಪ್ರಾಣಿಗಳು, ಹೂವುಗಳು, ದಂಪತಿಗಳು, ಪೌರಾಣಿಕ ಕಥೆಗಳು ಮತ್ತು ಹಿಂದೂ ದೇವತೆಗಳ ಆಕೃತಿಗಳ ಕೆತ್ತನೆಗಳನ್ನು ಒಳಗೊಂಡಿವೆ. ಅರ್ಧನಾರೇಶ್ವರ, ಗಂಗಾ, ಯಮುನಾ, ಶಿವ ಮತ್ತು ಪಾರ್ವತಿ ದೇವಿಯ ಚಿತ್ರಗಳನ್ನು ಸಹ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದೆ. ಭಗವಾನ್ ಶಿವನು ನಟರಾಜನ ರೂಪದಲ್ಲಿ ವಿವಿಧ ನೃತ್ಯ ಭಂಗಿಗಳನ್ನು ಪ್ರದರ್ಶಿಸುತ್ತಾನೆ.

ಹೆಚ್ಚಿನ ಮಾಹಿತಿ 

ಎರಡೂ ದೇವಾಲಯಗಳೂ ಬೆಳಿಗ್ಗೆ ೫ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ತೆರೆದಿರುತ್ತದೆ. ಕೊಳ ಸೇರಿದಂತೆ ಆವರಣವನ್ನು ಅತ್ಯಂತ ಸ್ವಚ್ಛವಾಗಿಟ್ಟಿರುವುದರಿಂದ ಓಡಾಡಲು ಸಂತೋಷವಾಗುತ್ತದೆ. ದೇವಾಲಯದ ಪ್ರತಿಬಿಂಬ ಅತ್ಯಂತ ಸುಂದರವಾಗಿ ಕೊಳದ ನೀರಿನಲ್ಲಿ ಮೂಡಿ ಅಲ್ಲಿನ ಪರಿಸರ ಎಂಥವರಿಗಾದರೂ ಮನಸೂರೆಗೊಳ್ಳುವಂತೆ ಮಾಡುತ್ತದೆ. ದೇವಾಲಯಗಳಿಗೆ ಭೇಟಿ ನೀಡುವವರು ಆವರಣದಲ್ಲಿ, ಕೊಳದ ಬಳಿ ಮತ್ತು ಹಚ್ಚ ಹಸಿರಿನ ಉದ್ಯಾನದಲ್ಲಿ ವಿಶ್ರಾಂತಿ ಸಮಯವನ್ನು ಕಳೆಯಬಹುದು. ದೇವಾಲಯದ ಎದುರಿಗೆ  ಕಲ್ಲಿನ ಒಂದು ಗಡಿಯಾರದ ಪ್ರತಿಕೃತಿ ಇದೆ. ಇದರ ವಿಶೇಷವೆಂದರೆ ಇದರಲ್ಲಿ ಅಂಕಿಗಳು ಇರುವುದಿಲ್ಲ ಬದಲಾಗಿ ಸೂರ್ಯನ ಬೆಳಕಿಗೆ ಬೀಳುವ ನೇರಳೆ ಸರಿಯಾದ ಸಮಯವನ್ನು ಅಲ್ಲಿ ತೋರಿಸುತ್ತದೆ! ಈ ವೈಜ್ಞಾನಿಕ ಪರಿಕಲ್ಪನೆ ಆಗಿನ ಕಾಲಕ್ಕೇ ಇದ್ದದ್ದು ನಮ್ಮ ಹಿಂದಿನವರ ಜ್ಞಾನಮಟ್ಟವನ್ನು ತೋರಿಸುತ್ತದೆ. 









ಭುವನೇಶ್ವರ ರೈಲ್ವೇ ಸ್ಟೇಷನ್ ನಿಂದ ೪ ಕಿಮೀ ದೂರದಲ್ಲಿದೆ ಈ ಮುಕ್ತೇಶ್ವರ ದೇವಸ್ಥಾನದ ಆವರಣ. ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 3.6 ಕಿಮೀ ದೂರದಲ್ಲಿದೆ ಮತ್ತು ಅಂದಾಜು 7.3 ಕಿಮೀ ದೂರದಲ್ಲಿದೆ ಬಾರಾಮುಂಡಾ ISBT ಬಸ್ ನಿಲ್ದಾಣ. ಖಾಸಗಿ ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಮತ್ತು ಸ್ಥಳೀಯ ಬಸ್ಸುಗಳು ಯಾವಾಗಲೂ ಲಭ್ಯವಿರುವುದರಿಂದ ನಗರದ ಯಾವುದೇ ಭಾಗದಿಂದ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣದಿಂದ ಇಲ್ಲಿಗೆ ತಲುಪುವುದು ತುಂಬಾ ಸುಲಭ. ಪಾದರಕ್ಷೆಗಳನ್ನು ದೇಗುಲದ ಹೊರಗೆ ಇಡಬೇಕು. ಆವರಣದ ಹೊರಗೆ ಪಾರ್ಕಿಂಗ್ ಸೌಲಭ್ಯವಿದೆ. ದೇವಾಲಯದ ಒಳಗೆ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗಿದೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್

ಚಾರಣ ಕಥೆ - ಕುಮಾರ ಪರ್ವತ!