1800 ವರ್ಷಗಳಿಂದ - ಪ್ರತಿದಿನ ಬದಲಾಯಿಸಲಾಗುತ್ತಿರುವ ಧ್ವಜ!

ನಮ್ಮಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ, ಗಣರಾಜ್ಯೋತ್ಸವ ಹೀಗೆ ವಿಶೇಷ ದಿನಗಳಲ್ಲಿ ದೇಶದಾದ್ಯಂತ ಧ್ವಜ ಹಾರಿಸುವ ಪ್ರತೀತಿ ಇದೆ. ಆದರೆ ದಿನನಿತ್ಯ ಧ್ವಜ ಹಾರಿಸುವಂತಿದ್ದರೆ? ಹೀಗೊಂದು ಚಟುವಟಿಕೆ ಬಗ್ಗೆ ನೀವು ಈ ಮುಂಚೆ ಕೇಳಿದ್ದೀರಾ? ನಮ್ಮ ದೇಶದಲ್ಲಿಯೇ ಇರುವ ಅತ್ಯಂತ ಪುರಾತನ ಇತಿಹಾಸವಿರುವ, ತನ್ನ ವಾಸ್ತುಶಿಲ್ಪದಿಂದ ಹೆಸರು ಮಾಡಿರುವ - ಪುರಿ ಜಗನ್ನಾಥ ದೇವಾಲಯದಲ್ಲಿ ನೂರಾರೂ ಅಲ್ಲ, ಬರೋಬ್ಬರಿ  ೧೮೦೦ ವರ್ಷಗಳಿಂದ ಈ ಒಂದು ಆಚರಣೆನ ಡೆಸುತ್ತಾ ಬರುತ್ತಿದ್ದಾರೆ! ದೇವಾಲಯದ ೧೦೦ ಅಡಿ ಎತ್ತರದ ಗೋಪುರದ ಮೇಲಿರುವ, ಭಗವಾನ್ ವಿಷ್ಣುವಿನ ಸುದರ್ಶನ ಚಕ್ರವನ್ನು ಪ್ರತಿನಿಧಿಸುವ ನೀಲ ಚಕ್ರ ಅಥವಾ ಶ್ರೀ ಚಕ್ರದ ಮೇಲಿನ ಧ್ವಜವನ್ನುಒಂದೂ ದಿನವೂ ಬಿಡದೆ, ದಿನಂಪ್ರತಿ ಬದಲಾವಣೆ ಮಾಡಿ ಹೊಸ ಧ್ವಜವನ್ನು ಹಾರಿಸುವ ಪ್ರಾಚೀನ ಸಂಪ್ರದಾಯವನ್ನು ಇಲ್ಲಿಯ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ನಡೆಯುವ ಪ್ರತಿನಿತ್ಯದ ಧ್ವಜಾರೋಹಣಕ್ಕೆ ನಿಗದಿತ ಸಮಯವಿದೆ. ಪ್ರಪಂಚದಲ್ಲಿ ಏನೇ ನಡೆಯುತ್ತಿರಲಿ, ಪುರಿ ಜಗನ್ನಾಥ ದೇವಾಲಯದಲ್ಲಿ ಮಾತ್ರ ಸಂಜೆ ೫ ಗಂಟೆಗೆ ಪ್ರಾರಂಭವಾಗಿ ಧ್ವಜ ಹಾರಿಸುವ ಸಂಪ್ರದಾಯ ನಡೆಯುತ್ತಿರುತ್ತದೆ. ಬೇಸಿಗೆಗಾಲದಲ್ಲಿ ತುಸು ತಡವಾಗಿ ಅಂದರೆ ಸಂಜೆ ೬ ಕ್ಕೆ ಹಾರಿಸುತ್ತಾರೆ.  ಧ್ವಜ ಬದಲಿಸಲು ದೇವಾಲಯದ ವಿಮಾನ ಅಥವಾ ಗೋಪುರದ ಮೇಲೆ ತರೆಬೇತಿ ಪಡೆದ ಅರ್ಚಕರು (ಚುನ ಗರುಡ ಸೇವಕರು ಎಂತಲೂ ಕರೆಯುತ್ತಾರೆ) ಸುಮಾರು ೪೫ ಮಹಡಿಯಷ್ಟು ಮೇಲಕ್ಕೆ  ಏರಿರುತ್ತಾರೆ.  ಆರೋಹಣವು 214-ಅಡಿ ಲಂಬವಾದ ಆರೋಹಣವಾಗಿದ್ದು, ಯಾವುದೇ ಸುರಕ್ಷತಾ ಸರಂಜಾಮುಗಳಿಲ್ಲದೆ ಹತ್ತುವುದ ನೋಡುವುದೇ ಒಂದು ರೋಚಕ ಅನುಭವ. ಕೆಂಪು ಹಳದಿ ಬಣ್ಣದ ವಸ್ತ್ರದಿಂದ ತಯಾರುಗೊಂಡ, ಚಂದ್ರ ಬಿಂದುವಿನಿಂದ ಅಲಂಕಾರಗೊಂಡ ಸುಮಾರು ೨೦ ಅಡಿ ಉದ್ದದ ಆ ಧ್ವಜಕ್ಕೆ -ಪತೀತ-ಪಾವನ-ಬನ' ಎಂದು ಕರೆಯುತ್ತಾರೆ.  ಪುರಿ ನಗರಿಯನ್ನು ಸಮೀಪಿಸುತ್ತಿದ್ದಂತೆಯೇ, ದೂರಗಣ್ಣಿನಿಂದಲೂ ಕಾಣಬಹುದಾದ ಸುಂದರ ಶ್ರೀಚಕ್ರ ಮತ್ತು ಧ್ವಜ ಅಲ್ಲಿಗೆ ಬರುವವರ ಭಕ್ತಿಭಾವವನ್ನು ಮತ್ತಷ್ಟು ಉದೀಪನಗೊಳಿಸುತ್ತದೆ.    ಎಲ್ಲಿಯಾದರೂ ಒಂದು ದಿನ ಈ ಒಂದು ಆಚರಣೆ ತಪ್ಪಿದರೂ ಕೂಡಾ, ೧೮ ವರ್ಷಗಳ ವರೆಗೆ  ದೇವಾಲಯವನ್ನು ಮುಚ್ಚಬೇಕಾಗುತ್ತದೆ ಎಂಬ ಮಾತಿದೆ. 


ಧ್ವಜ ಹಾರುವ ದಿಕ್ಕು!

ಪುರಿ ಜಗನ್ನಾಥ ದೇವಾಲಯ ಅನೇಕ ರಹಸ್ಯಗಳ ಆಗರ ಎನ್ನುತ್ತಾರೆ. ಇಲ್ಲಿನ ವಿಶೇಷ ಎಂದರೆ, ಮುಖ್ಯ ದೇವಾಲಯದ ಮೇಲಿರುವ ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ. ಹಿಂದೆಲ್ಲ ಇದೊಂದು ಪವಾಡ ಎಂದು ಜನನಂಬುತ್ತಿದ್ದರೂ, ದೇವಾಲಯದ ಅಭೂತ ವಾಸ್ತುಶಿಲ್ಪಕತೆ ಇದನ್ನು ನಿಜವಾಗಿಸಿದೆ. ಭೌತಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ದೇವಾಲಯದ ಆವರಣದೊಳಗಿನ ಗಾಳಿಯು ಹೊರಗೆ ಹರಿಯುವ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹರಿಯುವ ರೀತಿಯಲ್ಲಿ ದೇವಾಲಯದ ರಚನೆಯನ್ನು ಮಾಡಲಾಗಿರುವುದರಿಂದ, ಹೊರಬದಿಯಿಂದ ಧ್ವಜವು ಗಾಳಿಗೆ ವಿರುದ್ಧವಾಗಿ ಹಾರಾಡುವುದು ಅನುಭವಕ್ಕೆ ಬರುತ್ತದೆ. ಈ ಆಶ್ಚರ್ಯವನ್ನು, ದೇವಾಲಯದ ಸಂಕೀರ್ಣವನ್ನು ಪ್ರವೇಶಿಸಿದ ನಂತರ  ಧ್ವಜವನ್ನು ಮತ್ತು ಗಾಳಿಯ ಅನುಭವವನ್ನು ಪಡೆದು ನಾವು ಬೇಕಿದ್ದರೆ ಕಂಡುಕೊಳ್ಳಬಹುದು. ಅದೇನೇ ಆಗಲಿ, ಈ ಅದ್ಭುತವಾದ ವಿದ್ಯಮಾನವನ್ನು ರಚಿಸುವ ವಿಷಯದಲ್ಲಿ ಈ ದೇವಾಲಯವನ್ನು ಕಟ್ಟಿದವರು ಭವ್ಯವಾದ ಕೆಲಸವನ್ನು ಮಾಡಿದ್ದಾರೆ. 

ಒಟ್ಟಾರೆಯಾಗಿ ಪುರಿ ಜಗನ್ನಾಥ ಭಕ್ತಿಪೀಠವಾಗಿ, ಈ ಬಗೆಯ ರೋಚಕ ರಹಸ್ಯಗಳನ್ನು ತನ್ನೊಡಲೊಳಗೆ ಇಟ್ಟುಕೊಂಡು ಪೊರೆಯುತ್ತಿರುವ ಒಡಿಶಾ ಪುರಿ ಜಗನ್ನಾಥ ಒಮ್ಮೆ ನೋಡುವಂತಿದೆ. 



ಇನ್ನಷ್ಟು ಪುರಿ ಜಗನ್ನಾಥನ ಕುರಿತು, ಇನ್ಯಾವಾಗಲಾದರೂ.. :) 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್

ಚಾರಣ ಕಥೆ - ಕುಮಾರ ಪರ್ವತ!