ಮಂಗಳವಾರ, ಆಗಸ್ಟ್ 29, 2023

ಬಾಲ್ಕನಿ ಗಾರ್ಡನಿಂಗ್

ನಗರ ಪಟ್ಟಣಗಳಲ್ಲಿ ವಾಸಿಸುವವರಿಗೆ ಹೂದೋಟ ಅಥವಾ ಅಗತ್ಯ ಗಿಡಗಳ ಆಸೆ ಇದ್ದರೂ ಅವಕಾಶವಿರುವುದಿಲ್ಲ. ಗಿಡದ ಬಗ್ಗೆ ಆಸಕ್ತಿ ಇರುವವರು, ಮನಸ್ಸಿದ್ದರೆ ಬಾಲ್ಕನಿಯನ್ನೇ ಸುಂದರ ಹೂದೊಟವಾಗಿಸಬಹುದು. ಕೈತೋಟ ಮಾಡುವುದು ಮನೆಗೆ ಅಂದ, ಮನಸ್ಸಿಗೆ ಚೆಂದ ಎನ್ನಿಸುವಂತಹ ಒಂದು ಹವ್ಯಾಸ. ಯಾವ್ಯಾವ ಗಿಡಗಳಿಂದ ಯಾವೆಲ್ಲ ಪ್ರಯೋಜನವಿದೆ ಎಂದು ತಿಳಿದುಕೊಂಡು ಸಣ್ಣ ಪ್ರಮಾಣದಲ್ಲಿಯಾದರೂ ಸ್ವತಃ ತರಕಾರಿ ಸೊಪ್ಪು ಬೆಳೆಯುವುದು ಆರೋಗ್ಯಕ್ಕೂ ಅನುಕೂಲ. ಬಾಲ್ಕನಿ ಗಾರ್ಡನಿಂಗ್ ಬಗ್ಗೆ ಹೀಗೊಂದಷ್ಟು ಟಿಪ್ಸ್. 




ಮೊದಲಿಗೆ, ಬಾಲ್ಕನಿಯ ನೆಲದ ಜಾಗ, ನೇತು ಹಾಕಬಹುದಾದ ಗಿಡಗಳಿಗೆ ವ್ಯವಸ್ಥೆ, ಗೋಡೆಗಳಿಗೆ ಸ್ಟಾಂಡ್ ಮಾಡಿಸಬಹುದಾದ ಸಾಧ್ಯತೆ ಇತ್ಯಾದಿಯಾಗಿ ಒಂದು ಗಾರ್ಡನ್ ಲೇಔಟ್ ಪ್ಲಾನ್ ಮಾಡಿಕೊಳ್ಳಿ. ಹೆಚ್ಚಿನ ಜಾಗವಿದ್ದರೂ ಸಹ, ಸಣ್ಣದಾಗಿ ಪ್ರಾರಂಭ ಮಾಡಿ ಆರು ತಿಂಗಳುಗಳ ಕಾಲ ಸಾಧ್ಯತೆ ಅಸಾಧ್ಯತೆಗಳ ಪರಿಶೀಲಿಸಿಕೊಂಡು ಮುಂದುವರೆಯಿರಿ. ಪ್ರಾರಂಭದಲ್ಲಿ, ವಿಶೇಷ ಬಗೆಯ ಪಾಟ್ಗಳಿಗಿಂತ, ಉತ್ತಮ ಸತ್ವವಿರುವ ಮಣ್ಣಿಗೆ ಬಂಡವಾಳ ಹೂಡುವುದು ಜಾಣ್ಮೆಯ ನಿರ್ಧಾರ. ಭಾರದ ಸಿಮೆಂಟ್ ಅಥವಾ ಕಲ್ಲಿನ ಪಾಟ್ಗಳಿಗಿಂತ, ಮಣ್ಣಿನ, ಸೆಣಬಿನ ಚೀಲಗಳು ಒಳ್ಳೆಯದು. ಹೆಚ್ಚಿನ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಬಾಲ್ಕನಿಗಿದ್ದರೆ, ಲಂಬವಾದ ಕಬ್ಬಿಣದ ಅಥವಾ ಮರದ ಸ್ಟ್ಯಾಂಡ್ ಕಪಾಟುಗಳನ್ನು ಮಾಡಿಸಿಕೊಂಡರೆ, ಸರಳುಗಳಿಗೆ ನೇತು ಹಾಕುವ ಪಾಟ್ಗಳನ್ನು ಕೊಂಡರೆ ಬಾಲ್ಕನಿಯಲ್ಲಿ ಓಡಾಡುವ ಅವಕಾಶದ ಜೊತೆಗೆ ಹೆಚ್ಚಿನ ಗಿಡಗಳಿಗೆ ಸ್ಥಳಾವಕಾಶ ಸಿಗುತ್ತದೆ. 

ಸಿಗಬಹುದಾದ ಬಿಸಿಲು ಮತ್ತು ಶಾಖದ ಲಭ್ಯತೆಯನ್ನು ಪರಿಶೀಲಿಸಿ ಗಿಡಗಳ ಆಯ್ಕೆ ಮಾಡಿ. ಪೂರ್ವಕ್ಕಿರುವ ಬಾಲ್ಕನಿಯಲ್ಲಿ ೮-೧೦ ತಾಸುಗಳ ಕಾಲ ಬಿಸಿಲು ಸಿಗುತ್ತದೆ. ಅಲ್ಲಿ ತರಕಾರಿಗಳು, ಬಳ್ಳಿ ಬಸಳೆಗಳು  ಚೆನ್ನಾಗಿ ಬೆಳೆಯುತ್ತವೆ. ನೆರಳಿರುವ ಜಾಗವಾದರೆ ಸಣ್ಣ ಪುಟ್ಟ ಗಿಡಮೂಲಿಕೆ ಗಿಡಗಳು, ಕಡಿಮೆ ಬೆಳಕಿನ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಗೆಡ್ಡೆಗೆಣಸು, ಒಳಾಂಗಣ ಶೋ ಗಿಡಗಳು, ಆಸ್ಟಿಲ್ಬ್, ಜೆರೇನಿಯಂ, ಲೋಬಿಲಿಯ ಗಳಂತಹ ಬಣ್ಣದ ಹೂವಿನ ಗಿಡಗಳನ್ನೂ ಬೆಳೆಸಿಕೊಳ್ಳಬಹುದು. 

ನಿಮ್ಮ ಸಮಯಾವಕಾಶವನ್ನು ಗಮನಿಸಿಕೊಳ್ಳಿ. ಚಿಕ್ಕದೇ ಗಾರ್ಡನ್ ಆದರೂ, ಅದರ ನಿರ್ವಹಣೆ ಅತೀ ಮುಖ್ಯ. ಹೆಚ್ಚಿನ ಸಮಯವಿಲ್ಲದಿದ್ದಲ್ಲಿ, ಕಡಿಮೆ ನಿರ್ವಹಣೆಯ ಗಿಡಗಳಾದ, ಟೊಮೇಟೊ, ಬಣ್ಣದ ಎಲೆಗಳಿರುವ ಶೋ ಗಿಡಗಳು, ಗಿಡಮೂಲಿಕೆ ಗಿಡಗಳು, ಗೆಡ್ಡೆ ಸಸ್ಯಗಳು, ಇತ್ಯಾದಿ ಬೆಳೆಯಬಹುದು. ನೀರಿನ ಲಭ್ಯತೆ ಕಡಿಮೆ ಇದ್ದಲ್ಲಿ, ಪಾಟ್ಗಳಿಗೆ ಹನಿ ನೀರಾವರಿಯ ಅನೇಕ ಬಗೆಯ ಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಣ್ಣಿನ ಪಾಟ್ಗಳ ಕೆಳಗಡೆ ನೀರಿನ ತಟ್ಟೆ ಇಡುವುದರಿಂದ ತೇವಾಂಶ ಉಳಿಯಲು ಸಹಾಯಕ.  

 ಬೇಸಿಗೆಯ ಬಿರು ಶಾಖಕ್ಕೆ ಗಿಡಗಳು ಸಾಯದಂತೆ, ಪಾಟುಗಳಿಗೆ ಒಣಹುಲ್ಲಿನ ಅಥವಾ ತರಗೆಲೆಗಳ ಹೊದಿಕೆಯಿಟ್ಟು ನೀರು ಹಾಕಬಹುದು. ತೀವ್ರ ಗಾಳಿ ಬೀಸುವೆಡೆ ಗಾರ್ಡನ್ ಇದ್ದರೆ, ಗಾಳಿ ತಡೆಹಿಡಿಯಬಹುದಾದಂತಹ ದೊಡ್ಡ ಗಿಡಗಳ ಕೆಳಗೆ-ನಡುವಿನಲ್ಲಿ ಸಪೂರ ಗಿಡಗಳಿಗೆ ಅವಕಾಶ ಮಾಡಿದರೆ, ರಕ್ಷಣೆ ಸಿಗುತ್ತದೆ. ಶೀತ ಶುಷ್ಕ ಗಾಳಿಗೆ ಗಿಡಗಳು ಒಣಗದಂತೆ, ಪ್ರಯೋಜನಕ್ಕಿಲ್ಲದ ದಪ್ಪ ಬಟ್ಟೆಯನ್ನು ನೆನೆಸಿ ಗಿಡದ ಬುಡಕ್ಕೆ ಹಾಕಿ ತಂಪನ್ನು ಕಾಯ್ದಿರಿಸಬಹುದು. 

ಬಾಲ್ಕನಿ ಗಾರ್ಡನ್ ನ ಸ್ವಚ್ಛತೆಕ್ರಮವಾಗಿ. ಸೊಳ್ಳೆಗಳಿಗೆ ಅನುಕೂಲವಾಗುವಂತೆ ನೀರು ನಿಲ್ಲಿಸಬಾರದು. ನೈಸರ್ಗಿಕ ಕೀಟನಾಶಕಗಳಾಗಿ, ಬೆಳ್ಳುಳ್ಳಿ ಕಾಳುಮೆಣಸಿನ ಸ್ಪ್ರೇ, ನೀಲಗಿರಿ ಎಣ್ಣೆ, ಬೇವಿನ ಎಣ್ಣೆ ಇತ್ಯಾದಿ ಬಳಸಿ ಗಿಡಗಳಿಗೆ ಬಾಧೆ ನೀಡುವಂತಹ ಶಿಲೀಂಧ್ರನಾಶಕಗಳು, ಸಸ್ಯನಾಶಕ ಹುಳುಗಳು, ಮೃದ್ವಂಗಿಗಳಿಂದ ರಕ್ಷಿಸಬಹುದು. 

ಟ್ರೇನಲ್ಲಿ,  ಗಿಡಗಳಿಗೆ ಭೂಮಿಯ ನೈಸರ್ಗಿಕ ವಾತಾವರಣದ ಅನುಭವ ನೀಡಲು, ಪಾಟ್ಗಳಲ್ಲಿ ಸಣ್ಣಪುಟ್ಟ ಸ್ಥಳೀಯ ಹುಲ್ಲುಗಳ ಗರಿಕೆಗಳ  ಬೇರುಗಳನ್ನು ನೆಡಬಹುದು. ಪಾಲಕ್, ಕೊತ್ತಂಬರಿ ಬೀಜಗಳನ್ನು  ಬಿತ್ತಿ, ವಿಟಮಿನ್ಸ್, ಮಿನರಲ್ಸ್ ಮತ್ತು ಆಂಟಿಓಕ್ಸಿಡೆಂಟ್ಸ್ ನಿಂದ ಹೇರಳವಾಗಿರುವ ಮೈಕ್ರೊಗ್ರೀನ್ಸ್ ಗಳನ್ನು ಬೆಳೆಸಿದರೆ, ಮಣ್ಣನ್ನು ಹಿಡಿದಿಡುವಲ್ಲಿ ಇವು ಸಹಾಯವೂ ಮಾಡುತ್ತವೆ.  

ಅದೃಷ್ಟದ ನಂಬಿಕೆಯ ಗಿಡಗಳ ಹೊರತಾಗಿ, ಆದಷ್ಟು ರೆಡಿ ಗಿಡಗಳನ್ನು ತೆಗೆದುಕೊಳ್ಳುವುದಕ್ಕಿಂತ, ಸ್ನೇಹಿತರಿಂದ, ಬೆಳೆಗಾರರಿಂದ, ಗಿಡಗಳ ಬೀಜ ಮತ್ತು ಹೆಣಿಕೆ ಪಡೆದು, ಹೊಸತಾಗಿ ನೆಟ್ಟು ಬೆಳೆಸುವುದು ಉತ್ತಮ. ಬಾಲ್ಕನಿ ಗಾರ್ಡನಿಂಗ್ ಕುರಿತಾಗಿ ಸಮಾನ ಮನಸ್ಕರರ ಗ್ರೂಪ್ ಗಳಿಗೆಸೇರಿಕೊಂಡರೆ, ಬೀಜಗಳನ್ನು ಮೊಳಕೆಯೊಡೆಸಿ ಗಿಡ ಮಾಡುವುದು, ಹುಳಗಳಿಂದ ಸಂರಕ್ಷಣೆಯ ಬಗೆ, ಪಾಲಿನೇಶನ್  ಇತ್ಯಾದಿಯಾಗಿ ಇತರರ ಅನುಭವ ಮತ್ತು ಸಲಹೆ ಸೂಚನೆಗಳು ದೊರೆಯುತ್ತವೆ. 

ಆರೋಗ್ಯಕರ ಮಣ್ಣು, ಒಳ್ಳೆಯ ಗಾರ್ಡನ್ಗೆ ಮೂಲಮಂತ್ರ. ಸಣ್ಣ ಕಲ್ಲುಗಳ ಸಹಿತವಾಗಿ, ಮರಳ ಮಿಶ್ರಣ, ಗಾಳಿ ಮತ್ತು ಸೂಕ್ಷಾಣುಜೀವಿಗಳಿರುವ ಮಣ್ಣು, ಗಿಡಗಳಿಗೆ ಸಂಪೂರ್ಣ ಆಹಾರ. ಹಾಗಾಗಿ ಇವೆಲ್ಲದರ ಸಮತ್ವತೆ ಅತ್ಯವಶ್ಯಕ. ಕೃತಕ ರಾಸಾಯನಿಕ ಗೊಬ್ಬರಗಳಿಂದ ಮಲಿನಗೊಳಿಸದೇ, ಸಹಜ ಮನೆಯಲ್ಲಿಯೇ ತಯಾರಿಸಿದ ಹಸಿಕಸದ ಗೊಬ್ಬರ, ಸಗಣಿ ಇತ್ಯಾದಿ ಪೂರಕಗಳನ್ನುಕಾಲ ಕಾಲಕ್ಕೆ ಮಣ್ಣಿನೊಂದಿಗೆ ಸೇರಿಸುತ್ತಿರಬೇಕು. ಗಿಡಗಳನ್ನು ಬದಲಾಯಿಸುವಾಗ ಹಳೆಯ ಗಿಡಗಳ ಬೇರನ್ನು ಬಿಡಿಸಿ ತೆಗೆಯುವುದು, ವಾರಕ್ಕೊಮ್ಮೆ ಮಣ್ಣನ್ನು ಕೆತ್ತಿ ಗಿಡಗಳಿಗೆ ಉಸಿರಾಟಕ್ಕೆ ಸಹಾಯ ಮಾಡುವುದು ಇನ್ನಿತರ ಕ್ರಮಗಳು ಗಿಡಗಳು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ. 

ಗಿಡಗಳು ಪರಸ್ಪರ ಬೆಳವಣಿಗೆಗೆ ಸಹಾಯ ಮಾಡುತ್ತವೆಯಾದ್ದರಿಂದ, ಒಂದೇ ಕುಟುಂಬದ ಗಿಡಗಳ ಹೊರತಾಗಿ, ಒಂದೇ ಪಾಟಿನಲ್ಲಿ ಮಿಶ್ರ ಬೆಳೆಗಳ ಪ್ರಯತ್ನ ಕೂಡಾ ಮಾಡಬಹುದು. ಮುಖ್ಯ ತರಕಾರಿ ಗಿಡಗಳು ಬೆಳೆಯುವಷ್ಟರಲ್ಲಿ, ಚುರುಕು ಬೆಳವಣಿಗೆಯ ಕೆಲವು ಸೊಪ್ಪುಗಳನ್ನು ಬೆಳೆಸಿ, ಬಳಸಿ ತೆಗೆಯಬಹುದು. ಪ್ಲಾಂಟ್ ರೊಟೇಷನ್ ಅಂದರೆ ಗಿಡಗಳನ್ನು ಎರಡ್ಮೂರು ವರ್ಷಕ್ಕೊಮ್ಮೆ ಅವುಗಳ ಸ್ಥಳ ಬದಲಾವಣೆ ಮಾಡುವುದರಿಂದ ಪಾಟಿನಲ್ಲಿರುವ ಮಣ್ಣಿನ ಫಲವತ್ತತೆ ಕಾಯ್ದಿರಿಸಲು ಸಹಾಯಕ.  

ಮನೆಯ ಸಣ್ಣ ಪುಟ್ಟ ಹಸಿಕಸಗಳನ್ನು ಸಮರ್ಪಕವಾಗಿ ಗೊಬ್ಬರ ಮಾಡಲು ಪ್ರಯತ್ನಿಸಿ. ಪಾಟ್ಗಳಿಗೆ ನೇರವಾಗಿ ಹಾಕಿದರೆ, ಅದು ಮಣ್ಣಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಲ್ಲಿಯವರೆಗೆ ಗಿಡಗಳಿಗೆ ರೋಗ ಮತ್ತು ಕೀಟಗಳಿಗೆ ಆಶ್ರಯತಾಣವಾಗುತ್ತದೆ. 

ಮನೆ ಎಷ್ಟೇ ಚೆನ್ನಾಗಿದ್ದರೂ, ಅದಕ್ಕೊಂದು ಹಸಿರಿನ ಟಚ್ ಇದ್ದರೆ,  ಆ ಮನೆಗೆ ಜೀವಂತಿಕೆ ಬರುತ್ತದೆ. ಉಸಿರಾಡಲು ಸ್ವಚ್ಛ ಗಾಳಿ, ರಾಸಾಯನಿಕ ರಹಿತ, ತರಕಾರಿ ಸೊಪ್ಪುಗಳನ್ನು ಬೆಳೆದುಕೊಳ್ಳುವುದು. ಆರೋಗ್ಯ ಕೆಟ್ಟಾಗ ಮಾಡಬಹುದಾದ ಮನೆಮದ್ದಿಗೆಔಷಧೀಯ ಮೂಲಿಕೆಗಳು, ದೇವರ ಮುಡಿಗೊಂದು ಮನೆಯದ್ದೇ ಹೂವು ಇವೇ ಅಲ್ಲವೇ ಆತ್ಮನಿರ್ಭರತೆ ಎಂದರೆ?  ಹಾಗೆಯೇ ಬಾಲ್ಕನಿ ಕೈತೋಟ ಮಾಡಿಕೊಂಡು ಮಕ್ಕಳೊಂದಿಗೆ ಗಿಡಗಳ ಪೋಷಣೆಯತ್ತ ಸ್ವಲ್ಪ ಸಮಯ ಕೊಟ್ಟರೂ, ಪರಿಸರ ಕಾಳಜಿ ಮತ್ತು ಬಾಂಧವ್ಯದ ಕುರಿತಾದ ಜ್ಞಾನ, ಮಕ್ಕಳಿಗೆ ಪಾಠ ಮಾಡದೆಯೇ ದೊರೆತಂತಾಗುತ್ತದೆ. 



 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ