ಮಂಗಳವಾರ, ಆಗಸ್ಟ್ 29, 2023

ರಾಖಿಯಾಗಲಿ ಪರಿಸರಮುಖಿ

ಶ್ರಾವಣ ಪೂರ್ಣಿಮೆಯ ದಿನದಂದು, ಸಹೋದರಿಕೆಯ ಪ್ರಾಮುಖ್ಯತೆಯನ್ನು ಸಾರಲು ರಕ್ಷಾಬಂಧನ ಹಬ್ಬವನ್ನುಆಚರಿಸಲಾಗುತ್ತದೆ. ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ಈ ದಿನ ರಾಖಿ ಕಟ್ಟಿ ಅವರ ದೀರ್ಘಾಯುಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವರು ಸಹೋದರನ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಆತನ ಯೋಗಕ್ಷೇಮಕ್ಕಾಗಿ ದೇವರಲ್ಲಿ ಬೇಡುತ್ತಾರೆ. ಸಹೋದರರು ಸಹೋದರಿಯರನ್ನು ಇಂದಿನ ದಿನ ಹರಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಪಣ ತೊಟ್ಟು, ಹಣ ಅಥವಾ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಾರೆ. 




ರಾಖಿ ಹಬ್ಬದ ಇತಿಹಾಸವೇನು?

ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಸಾಕಷ್ಟು ಮಹತ್ವವಿದೆ. ಪುರಾಣದ ದಂತಕಥೆಗಳಲ್ಲಿ ಒಂದಾದ ಮಹಾಭಾರತದ ಪ್ರಕಾರ, ಒಮ್ಮೆ ಶ್ರೀಕೃಷ್ಣನ ಬೆರಳು ಆಕಸ್ಮಿಕವಾಗಿ ಸುದರ್ಶನ  ಸಿಲುಕಿ ಕತ್ತರಿಸಿ ಹೋಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದ್ರೌಪದಿ ಹಿಂದೆ ಮುಂದೆ ನೋಡದೆ, ಓಡಿ ಹೋಗಿ, ತನ್ನ ಸೀರೆಯ ತುಂಡನ್ನು ಹರಿದು, ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾಳೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಆ ಪೋಷಿಸುವ ಗುಣವನ್ನು ಕಂಡು ಕೃಷ್ಣ ದ್ರೌಪದಿಯನ್ನು ತನ್ನ ತಂಗಿಯಾಗಿ ಮನಸ್ಸಿನಲ್ಲೇ ಸ್ವೀಕರಿಸುತ್ತಾನೆ. ಅದೇ ಕಾರಣಕ್ಕಾಗಿ, ಮುಂದೆ ಕೌರವರು ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹಾರಣ ಮಾಡುವ ಪ್ರಯತ್ನ ಪಟ್ಟಾಗ, ತಂಗಿಯ ಮಾನ ಕಾಪಾಡಲು ಕೃಷ್ಣ ದ್ರೌಪದಿಗೆ ಎಳೆದಷ್ಟೂ ಮುಗಿಯದ ಸೀರೆಯ ದೊರಕಿಸಿ ಅವಳ ಮಾನ ಕಾಪಾಡುತ್ತಾನೆ. ಹೀಗೆ ಕಷ್ಟಕ್ಕೂ ಸುಖಕ್ಕೂ ಜೊತೆಯಲ್ಲಿ ನಿಲ್ಲುವ ಸಹೋದರ ಸಹೋದರಿಯರ ಸಂಬಂಧವನ್ನು ಸಂಭ್ರಮಿಸಲೆಂದೇ ರಾಖಿ ಹಬ್ಬ ಹುಟ್ಟಿಕೊಂಡಿತು ಎನ್ನುತ್ತದೆ ಪುರಾಣ. 

ರಾಖಿಯಿಂದಲೂ ತ್ಯಾಜ್ಯ!

ರಾಖಿ ಹಬ್ಬ ಹತ್ತಿರವಾದಂತೆಯೂ ಇದೀಗ ಅಂಗಡಿ ಮಳಿಗೆಗಳಲ್ಲಿ, ರಾಖಿ ಹಬ್ಬದ ಸಲಕರಣೆಗಳ, ರಾಖಿ ದಾರಗಳ, ಉಡುಗೊರೆಗಳ ಅಬ್ಬರ. ಪ್ರತಿ ವರ್ಷ ಸರಿಸುಮಾರು ೫೦೦೦ ಲಕ್ಷ ಜನ ಪ್ರಪಂಚದಾದ್ಯಂತ ರಾಖಿ ಹಬ್ಬವನ್ನು ಆಚರಿಸುತ್ತಾರೆ. ಎಲ್ಲಿ ನೋಡಿದರಲ್ಲಿ ಚಿಣಿಮಿಣಿ ಮಿನುಗುವ ಪ್ಲಾಸ್ಟಿಕ್ ಜರಿಗಳಿಂದ, ಪ್ಲಾಸ್ಟಿಕ್ ವಸ್ತುಗಳಿಂದ ಮಾಡಿದ ರಾಖಿ. ಕೇಳುವವರು ನಾವಿರುವಾಗ ತಯಾರಕರೂ ಅಷ್ಟೇ ಇರುತ್ತಾರೆ. ಅನೇಕ ರಾಖಿ ತಯಾರಿಕಾ ಕಂಪೆನಿಗಳು ಜನರ ಆಕರ್ಷಣೆ ಮತ್ತು ಕೊಳ್ಳುವಿಕೆಯ ದರವನ್ನಷ್ಟೇ  ಗುರಿಯಾಗಿಸಿಕೊಂಡು, ಪ್ಲಾಸ್ಟಿಕ್ ಮತ್ತು ಇನ್ನಿತರ ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ಬಳಸಿ ಬಣ್ಣಬಣ್ಣದ ರಾಖಿಗಳನ್ನು ತಯಾರಿಸುತ್ತಾರೆ. ಚಿಕ್ಕ ಮಕ್ಕಳಿಗೆ ಹಬ್ಬದ ಸಂಸ್ಕಾರ ತಿಳಿಸಲು ರಾಖಿ ಕಟ್ಟಿಸಿ ಸಂಭ್ರಮ ಪಡುತ್ತೇವೆ.  ಅರ್ಧ ಗಂಟೆಯಲ್ಲಿ ಆ ರಾಖಿ ಆಟದ ಭರದಲ್ಲಿ ನೆಲಕ್ಕೆ ಬಿದ್ದು ಹೊರಳಾಡುತ್ತಿರುತ್ತದೆ. ಇಂತಹ ಸಣ್ಣ ಪ್ಲಾಸ್ಟಿಕ್ ಚೂರುಗಳು, ಪ್ಲಾಸ್ಟಿಕ್ ಬೇರ್ಪಡಣೆಗೆ ದೊರಕುವುದು ಕಷ್ಟ. ಕಸವಿಂಗಡನೆ  ಘಟಕವನ್ನೂ ತಲುಪದ ಇಂತಹ ಅದೆಷ್ಟೋ ಲಕ್ಷ ಸಣ್ಣ ಸಣ್ಣ ಪ್ಲಾಸ್ಟಿಕ್ ವಸ್ತುಗಳು ಮಣ್ಣಿಗೆ ಮತ್ತು ನದಿಗಳ ನೀರಿಗೆ ಸೇರುತ್ತವೆ. ಪಕ್ಷಿಗಳು ಮತ್ತು ಮೀನುಗಳು ಇಂತವೇ ಸಣ್ಣ ಸಣ್ಣ ಪ್ಲಾಸ್ಟಿಕ್ ಕಸಗಳನ್ನು ತಿಂದು ಸಾವನ್ನಪ್ಪುತ್ತ್ತವೆ! ಸುಟ್ಟರೂ ಕೂಡ ಪ್ಲಾಸ್ಟಿಕ್ ಶಾಶ್ವತವಾಗಿ ಕರಗದು!  ನಮಗೇ ಅರಿವಿಲ್ಲದಂತೆ ಈ ಭೂಮಿಯನ್ನು ಸಣ್ಣ ಪುಟ್ಟ ಇಂತಹ ತ್ಯಾಜ್ಯಗಳಿಂದ ನಾವೇ ಕಲುಷಿತ ಗೊಳಿಸುವುದು ನಮ್ಮ ಗಮನಕ್ಕೆ ಬರುವುದಿಲ್ಲ!

ರಾಖಿ ದಾರದ ಆಯ್ಕೆ ಹೇಗಿರಲಿ? 

ರಾಖಿ ಮಾಡಲು ನಿಯಮಗಳೇನು ಇಲ್ಲ. ಆಡಂಬರಕ್ಕಿಂತ ರಾಖಿ ಎನ್ನುವುದು ಬಾಂಧವ್ಯದ, ಒಗ್ಗಟ್ಟಿನ ಪ್ರತೀಕವಷ್ಟೇ. ರಕ್ಷಣೆಯ ಕಂಕಣವಷ್ಟೇ.  ಕೆಲವರು ಸರಳವಾದ ರಾಖಿಯನ್ನು ಬಯಸುತ್ತಾರೆ, ಕೆಲವರಿಗೆ ವಿಶಿಷ್ಟವಾದ ರಾಖಿ ಕಟ್ಟುವ ಆಸೆಯಿರುತ್ತದೆ. ಯಾವುದೇ ಭಾವನೆಯಾಗಲಿ, ಭ್ರಾತೃತ್ವಕ್ಕೆ ಬಳಸುವ ರಕ್ಷಣೆಯ ದಾರ ನಮ್ಮ ಪರಿಸರವನ್ನೂ ರಕ್ಷಣೆ ಮಾಡುವಂತಿರಲಿ.  ಸಾಧ್ಯವಾದ ಕಡೆಗೆಲ್ಲ, ಅಳಿಲು ಸೇವೆಯಂತೆಯೇ ಆದರೂ,  ಮೂಲಭೂತ ಅವಶ್ಯಕತೆ ಅಲ್ಲದಿರುವೆಡೆ ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಬೇಕು ಅಥವಾ ಮರುಬಳಕೆಯಾದರೂ ಮಾಡಬೇಕು.  

ಚಿಕ್ಕಂದಿನಲ್ಲಿ ಶಾಲೆಗಳಲ್ಲಿ ರಾಖಿ ಮಾಡುವುದನ್ನು ಕಲಿಸುತ್ತಿದ್ದರು. ನಿರುಪಯುಕ್ತ ಸೀರೆ ಅಥವಾ ಬ್ಲೌಸ್ ಪೀಸ್ ಗಳನ್ನು ತರಲು ಹೇಳಿ, ಅದನ್ನು ಕತ್ತರಿಯಿದ ಕತ್ತರಿಸಿ, ಅದರಿಂದ ಸಿಗುವ ಸಣ್ಣ ರೇಷ್ಮೆಯ ನೂಲು ಅಥವಾ ಹತ್ತಿಯ ನೂಲನ್ನು ಒಂದೊಂದೇ ಬಿಡಿಸಿ, ಜೋಡಿಸಿ, ರಾಖಿಯ ನೇಯ್ಗೆ ಮಾಡುತ್ತಿದ್ದೆವು. ಆ ಹಿನ್ನಲೆಯಲ್ಲಿಯೋ ಏನೋ ನನಗೆ ಪ್ರತಿವರ್ಷ ರಾಖಿಗಳನ್ನು ಕೈಯಾರೆ ತಯಾರು ಮಾಡುವುದು ಅಭ್ಯಾಸ ಆಗಿದೆ. ಕಲಾವಿದೆಯಾಗಿ ನನ್ನ ಕಲಾತ್ಮಕತೆಯನ್ನು ಬಳಸಿ ಪರಿಸರ ಸ್ನೇಹಿ ರಾಖಿಯನ್ನು ಮಾಡುತ್ತಿರುವ ಕುರಿತು ನನಗೆ ವೈಯುಕ್ತಿಕವಾಗಿ ಹೆಮ್ಮೆಯಿದೆ. ಯಾವುದೇ ಕಾರಣಕ್ಕೂ ಮನೆಯಲ್ಲೇ ಪರಿಸರ ಸ್ನೇಹಿ ರಾಖಿ ಕಟ್ಟಲು ಸಾಧ್ಯವಾಗದಿದ್ದರೆ, ಈಗಿನ ಇಂಟರ್ನೆಟ್ ಯುಗದಲ್ಲಿ ಒಡಹುಟ್ಟಿದವರಿಗಾಗಿ ಆನಲೈನ್ ನಲ್ಲಿ ಮಾಡಿ ಪರಿಸರ ಸ್ನೇಹಿ ರಾಖಿಯನ್ನು ಆರ್ಡರ್ ಮಾಡಬಹುದು. 

ಪರಿಸರ ಸ್ನೇಹಿ ರಾಖಿಗಳ ಬಳಕೆ ಮತ್ತು ತಯಾರಿಕೆ 

ರಾಖಿ ದಾರಕ್ಕಾಗಿ ಆದ್ಯತೆಯ ನೈಸರ್ಗಿಕ ಫೈಬರ್ ಅನ್ನು ಆರಿಸಿಕೊಳ್ಳಬಹುದು. ಸರಳವಾದ ಕಾಟನ್ ದಾರ ಕೂಡ ಸಾಕು. ಕ್ರೋಶ ವಿಧಾನದ ಅರಿವಿದ್ದರೆ, ವಿವಿಧ ವಿನ್ಯಾಸದ ಗಂಟುಗಳಿಂದ ಡಿಸೈನ್  ದಾರಗಳನ್ನು ತಯಾರಿಸಬಹುದು. ರಾಖಿಯನ್ನು ಐಚ್ಛಿಕ ವಿಷಯಗಳಿಗೆ ಹೊಂದಿಸುವ ಉದ್ದೇಶವಿದ್ದರೆ,  ಕಾಟನ್, ಸೆಣಬು, ಬಣ್ಣದ ಪೇಪರ್, ನ್ಯೂಸ್ ಪೇಪರ್, ಮಣ್ಣು, ಇತ್ಯಾದಿ ವಸ್ತುಗಳ ಬಳಸಿ ಬೇಸ್ ತಯಾರಿಸಬಹುದು. ವೃತ್ತಪತ್ರಿಕೆಗಳು, ಮ್ಯಾಗಜೀನುಗಳು. ಡೆನಿಮ್ ಇನ್ನಿತರ ಹಳೆಯ ಬಟ್ಟೆಯ ಸ್ಕ್ರ್ಯಾಪ್ಮ ಗಳಂತಹ ಮರುಬಳಕೆಯ ವಸ್ತುಗಳನ್ನೇ ಕಲಾತ್ಮಕವಾಗಿ ಬಳಸಿ ರಾಖಿ ತಯಾರಿಸಬಹುದು. ಮಣ್ಣಿನ ಉಂಡೆಯಲ್ಲಿ ತುಳಸಿ  ಬೀಜ, ಹೂವಿನ ಬೀಜಗಳ ತುಂಬಿಸಿ ಸೀಡ್ ಬಾಲ್ ರಾಖಿ ಮಾಡಬಹುದು. ರಾಖಿಯ ದಾರವು ಸಹೋದರನಿಗೆ ರಕ್ಷಣೆ ಮತ್ತು ರಾಖಿ  ಹಬ್ಬದ ನಂತರ ಆ ಮಣ್ಣಿನ ಉಂಡೆಯನ್ನು ಮನೆಯ ಪಾಟಿನಲ್ಲಿ ನೆನೆಸಿ ಸೇರಿಸಿದರೆ, ಅಲ್ಲೊಂದು ಗಿಡ ಬೆಳೆದು ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಕ್ವಿಲ್ಲಿಂಗ್ ಪೇಪರ್ರಿನ ರಾಖಿ, ಮಣ್ಣನ್ನು ಬಳಸಿ ಟೆರಾಕೋಟಾ ರಾಖಿ, ನ್ಯೂಸ್ ಪೇಪರಿನ ಮೇಲೆ ಪೈಂಟ್ ಮಾಡಿಯೋ ಅಥವಾ ನೆನೆಸಿ ರುಬ್ಬಿ ಒಣಗಿಸಿ ವಿವಿಧ ಆಕೃತಿಯ ರಾಖಿ, ನಮ್ಮ ಸುತ್ತಮುತ್ತಲಿನಲ್ಲೇ ದೊರೆಯುವ ವಿವಿಧ ಬಗೆಯ ಕಾಯಿ ಹಣ್ಣುಗಳ, ಮರದ, ಬೀಜಗಳನ್ನು ಆಯ್ದಿಟ್ಟುಕೊಂಡು ಜೋಡಿಸಿ ಮಾಡುವ ರಾಖಿ,  ಸಸ್ಯ ಆಧಾರಿತ ಬಣ್ಣಗಳಿಂದ ಅಲಂಕಾರ, ಗಿಡಮೂಲಿಕೆಯ ರಾಖಿ, ವಿಶಿಷ್ಟ ಬಗೆಯ ಎಲೆಗಳು ಮತ್ತು ಹೂಗಳನ್ನು ಒಣಗಿಸಿಟ್ಟುಕೊಂಡು, ಅವುಗಳನ್ನು ಸೇರಿಸಿ ಮಾಡಬಹುದಾದ ರಾಖಿ ಇತ್ಯಾದಿ ಹಲವು ಬಗೆಯ ಪರಿಸರ ಸ್ನೇಹಿ ರಾಖಿಗಳೀಗ ಮಾರುಕಟ್ಟೆಯಲ್ಲಿಯೂ ಕೂಡ ಹೊಸ ಟ್ರೆಂಡ್ ಆಗಿದೆ! ಮರದ ಬೇಸ್ ಮೇಲೆ ಮಂಡಲ ಆಧಾರಿತ ಪೇಂಟಿಂಗ್ ಮಾಡಿ, ರಾಖಿ ದಾರದ ಜೊತೆಗಿನ ಫ್ರಿಡ್ಜ್ ಮ್ಯಾಗ್ನೆಟ್ ಪರಿಕಲ್ಪನೆಯಲ್ಲಿ ನಾನು ಮಾಡಿದ ರಾಖಿಗಳು ಅನೇಕರ ಮನ ಗೆದ್ದಿದೆ. ಸೀಡ್ಬಾಲ್ ರಾಖಿಗಳು ಅದೆಷ್ಟೋ ಮನೆಯ ಬಾಲ್ಕನಿಯಲ್ಲಿ ಗಿಡವಾಗಿ ನಳನಳಿಸುತ್ತಿವೆ.   

ಹೀಗೆ ಕಲಾತ್ಮಕತೆ ಮತ್ತು ಆಸಕ್ತಿ ಇದ್ದರೆ ನಾವೇ ಖುದ್ದಾಗಿ ನಮ್ಮ ನಮ್ಮ ಮನೆಗಳಲ್ಲಿಯೇ ತಯಾರು ಮಾಡಿಕೊಳ್ಳಬಹುದು ಅಥವಾ ಕೊಂಡು ಬಳಸಿ ಇತರರಿಗೆ ಮಾದರಿಯಾಗಬಹುದು. ಮಕ್ಕಳಿಗೆ ಈ ಕುರಿತು ತಿಳಿಸಿದರೆ, ಮಕ್ಕಳ ಜೊತೆಗೂಡಿ ರಾಖಿ ಮಾಡಿದರೆ ಅದುವೇ ಹಬ್ಬದ ಸಂಭ್ರಮವಾಗುತ್ತದೆ. ಮೇಲಿನವುಗಳ ಹೊರತಾಗಿ ನಮ್ಮ ನಮ್ಮ ಸೃಜನಾತ್ಮಕ ಭಾವನೆಯಿಂದ ಭೂಮಿತಾಯಿಯ ಮೇಲಿನ ಗೌರವವನ್ನು ಅನೇಕ ಬಗೆಯಲ್ಲಿ ತೋರಿಸಬಹುದು. ಈ ರೀತಿಯ ಪರಿಸರ ಸ್ನೇಹಿ ರಾಖಿಯ ಬಳಕೆ ಅನವಶ್ಯಕ ಆಡಂಬರ ಮತ್ತು ಮಾಲಿನ್ಯವನ್ನು ಕಡಿತಗೊಳಿಸಿ, ಬಾಂಧವ್ಯದ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. 

 ರಾಖಿ ಎನ್ನುವುದು ಜಗತ್ತಿಗೆ ಕೇವಲ ಒಂದು ದಾರವಾಗಿರಬಹುದು. ಆದರೆ ಅದೊಂದು ರಕ್ಷಣೆ ಮತ್ತು ಒಗ್ಗಟ್ಟಿನ ವಿಶೇಷ ಸಂಕೇತ. ಭ್ರಾತೃತ್ವದ ಆಚರಣೆಯ ಈ ಸಂಭ್ರಮದಲ್ಲಿ, ಪರಿಸರಕ್ಕೊಂದಷ್ಟು ಪೂರಕವಾಗಿ ಸೀಡ್ಬಾಲ್ ರಾಖಿ ಮುಖೇನ ಹಸಿರು ಗಿಡಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಗೊಳಿಸುವುದು,  ರಾಖಿ ಹಬ್ಬಕ್ಕೆ ನಿಜವಾದ ಅರ್ಥ ನೀಡುವುದರ ಜೊತೆಗೆ ಗೋ ಗ್ರೀನ್ ರಾಖಿಗಳು ಕೈಗಳಿಗೆ ಕಲಾತ್ಮಕ ಮೆರಗನ್ನೂ ನೀಡುತ್ತವೆ. 


   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ