ಸೋಮವಾರ, ಜುಲೈ 1, 2024

ಹೂವು ಹೆಕ್ಕುವ ಸಮಯ..

ಸಂಜೆಯ ವಾಕಿಂಗ್ ಮುಗಿಸಿ ಬರುತ್ತಿದ್ದೆ. ಮಳೆ ಇಂದ ತೊಪ್ಪೆಯಾದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲೂ ಹಸಿರು ಮರಗಳು. ಅಲ್ಲಲ್ಲಿ ಹೂವಿನ ಮರಗಳಿಂದ ಉದುರಿ ಬಿದ್ದ ಹೂಗಳ ಹಾಸು. ಸುಂದರ ಅನುಭೂತಿ. ನೋಡುತ್ತಾ ಬರುತ್ತಲಿದ್ದೆ. ಬಿಳಿ ಹೂಗಳು ಕರೆದು ನಿಲ್ಲಿಸಿದವು. ಅಲ್ಲೇ ತಕ್ಷಣ ಬಗ್ಗಿ ಒಂದಷ್ಟು ಹೂಗಳ ಹೆಕ್ಕಿ, ಅದೇ ಮರದ ಬುಡಕ್ಕೆ ಹೂಗಳ ಜೋಡಿಸಿಟ್ಟು ಸಂಭ್ರಮಿಸಿದೆ. ಹಿಂದಕ್ಕೆ ಯಾರೋ ನಿಂತಂತೆ ಭಾಸವಾಗಿ ಸರಕ್ ಎಂದು ತಿರುಗಿ ನೋಡಿದರೆ, ಪುಟ್ಟದೊಂದು ಹುಡುಗಿ ನಿಂತಿದ್ದಾಳೆ. 

"ಅಕ್ಕ ಏನ್ ಮಾಡ್ತಿದೀ?" ಎಂದು ಕೇಳಿದಳು. 

"ಸುಮ್ನೆ ಹೂಗಳ ಜೋಡಿಸಿಟ್ಟೆ.." ಎಂದೆ. 



"ಅದರಿಂದ ಮರಕ್ಕೇನಾಗತ್ತೆ?" ಅಂದಳು. 

ನಕ್ಕು, 

"ಮರಕ್ಕೇನೂ ಆಗಲ್ಲ; ನಂಗೆ ಖುಷಿ ಆಯ್ತು ಹೀಗೆ ಹೂವು ಜೋಡಿಸಿಟ್ಟಿದ್ದು, ಮರಕ್ಕೆ ಖುಷಿ ಆಗಬೇಕು ಅಂದ್ರೆ ಇದೇ ಹೀಗೆ ಮರನ ಕೈಯಿಂದ ಮುಟ್ಟಿ ಸವರಬೇಕು. ಅವಾಗ ಮಾತ್ರ ಅದಕ್ಕೆ ನಾವು ಪ್ರೀತಿ ಮಾಡಿದ್ದು ಗೊತ್ತಾಗಿ ಖುಷಿ ಆಗತ್ತೆ.. " ಎಂದು ಮರವ ಮುಟ್ಟಿ ತೋರಿಸಿದೆ. 

ಅವಳೆಡೆಗೆ ಒಂದು ಮುಗುಳ್ನಗೆ ಬೀರಿ, ಮತ್ತಲ್ಲಿಂದ ಎದ್ದು ಹೊರಟೆ . 

ಕ್ಷಣಾರ್ಧದಲ್ಲಿ.. 

ಪಟಪಟ ಅಲ್ಲಿ ಬಿದ್ದಿದ್ದ ಉಳಿದ ಹೂಗಳ ಹೆಕ್ಕಲು ಪ್ರಾರಂಭಿಸಿದಳು ಆ ಹುಡುಗಿ!


"ನೀ ಏನ್ ಮಾಡ್ತಿ?" ಎಂದು ಕೇಳಿದೆ.

"ನಾನೂ ಹೂ ಹೆಕ್ಕಿ ಏನಾರ ಡಿಸೈನ್ ಮಾಡ್ತೀನಿ, ನೀ ಮಾಡಿದ್ ಇಷ್ಟ ಆಯ್ತ್ ಅಕ್ಕ ನಂಗೆ.." ಎಂದಳು. 

ಅಲ್ಲೇ ನೋಡುತ್ತಾ  ನಿಂತೆ.. 

ಹೆಸರು ಭಾಗ್ಯಶ್ರೀ, ಆರನೇ ತರಗತಿ, ಸರ್ಕಾರಿ ಶಾಲೆಗೆ ಹೋಗುವುದು, ಅಪ್ಪ ಗಾರೆ ಕೆಲ್ಸಕ್ಕೆ, ಅಮ್ಮ ಮನೆ ಕೆಲ್ಸಕ್ಕೆ ಹೋಗ್ತಾರೆ, ಅಲ್ಲೀಗಂಟ ಇಲ್ಲೇ ಅಣ್ಣನ ಜೊತೆ ಪಾರ್ಕಿನಲ್ಲಿ ಆಟಾಡ್ತಾ ಇರ್ತೀನಿ.. ಎಲ್ಲಾ ಕತೆ ಹೇಳಿದಳು.. 

ಹೂಗಳ ಚಂದ ಮಾಡಿ ಹೆಕ್ಕಿ, ಅವುಗಳ ಉದ್ದ ತೊಟ್ಟು ಮುರಿದು, ಪಕಳೆಗಳನ್ನಷ್ಟೇ ತನ್ನದೇ ಆದ ಯೋಚನೆಯಲ್ಲಿ ಜೋಡಿಸುತ್ತ ಹೋದಳು..ಆಮೇಲೆ ಮೇಲೆ ಎದ್ದು, ಮರವನ್ನ ಅಪ್ಪಿ ಹಾಕಿಕೊಂಡು, ಅದಕ್ಕೊಂದು ಮುತ್ತು, ನಗು ಮುಖದೊಂದಿಗೆ ಕೊಟ್ಟು ಬಾಯ್ ಅಕ್ಕ ಎಂದು ಹೇಳಿ ಓಡಿದಳು.. :) :) 







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ