ಮಂಗಳವಾರ, ಜುಲೈ 2, 2024

ಮಕ್ಕಳೊಂದಿಗೆ ಪ್ರವಾಸ - ಸ್ಥಳಗಳ ಕುರಿತಾಗಿ ಮಾಹಿತಿ

ಮಕ್ಕಳೊಂದಿಗೆ ಪ್ರವಾಸ ಎನ್ನುವುದು "ಒಹ್ ರಜೆ ಸಿಗ್ತು, ಎದ್ದು ಹೊರಟೆ ನಾನು.." ಎಂಬಷ್ಟು ಸುಲಭವಲ್ಲ. ಮಕ್ಕಳ ಸುರಕ್ಷತೆ, ಅವರಿಗೆ ಊಟ-ತಿಂಡಿ-ನಿದ್ರೆಯ ಲಭ್ಯತೆ, ಅವರ ವಯಸ್ಸಿಗೆ ತಕ್ಕಂತೆ ಅರ್ಥ ಮಾಡಿಸಬಹುದಾದ ವಿಷಯಗಳು, ಅವರ ಆಸಕ್ತಿ, ಅವರ ಸವಾಲುಗಳನ್ನು ತೆಗೆದುಕೊಳ್ಳುವ ದೈಹಿಕ ಸಾಮರ್ಥ್ಯ ಹೀಗೆ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್ ಮಾಡಬೇಕಾಗುತ್ತದೆ.  ಊರ ಕಡೆ ಇದ್ದಾಗ, ಸಮಯ ಸಿಕ್ಕಾಗಲೆಲ್ಲ ತೋಟ-ಗದ್ದೆ, ಊರು-ಕೇರಿ, ನೀರು, ಗುಡ್ಡ- ಬೆಟ್ಟ, ನೆಂಟರಿಷ್ಟರ ಮನೆ, ಜಾತ್ರೆ-ಹಬ್ಬ ಹೀಗೆ ಮಗಳನ್ನು ಸುತ್ತಿಸುವುದು ನಮ್ಮ ವಾಡಿಕೆ.ಪುಟ್ಟ ಮಕ್ಕಳನ್ನು ಕರೆದುಕೊಂಡು ಓಡಾಡಬಹುದಾದ ಒಂದಷ್ಟು ಸ್ಥಳಗಳ ಕುರಿತಾಗಿ ಮಾಹಿತಿ ನಮ್ಮ ಪುಟ್ಟ ಮಗಳನ್ನು ಓಡಾಡಿಸಿದ ಅನುಭವದೊಂದಿಗೆ.. 

ಪ್ರಾಣಿ - ಪಕ್ಷಿ ಪ್ರೀತಿ : 

ಸಕ್ರೆಬೈಲು : "ಆನೆ ಬಂತೊಂದ್ ಆನೆ, ಯಾವೂರಾನೆ, ಬಿಜಾಪುರದಾನೆ, ಇಲ್ಲಿಗ್ಯಾಕೆ ಬಂತು, ಹಾದಿ ತಪ್ಪಿ ಬಂತು, ಬೀದಿ ತಪ್ಪಿ ಬಂತು, ಕೊಬ್ರಿ ಬೆಲ್ಲ ತಂತು, ಮಕ್ಕಳಿಗೆಲ್ಲ ಹಂಚ್ತು, ಆನೆ ಓಡಿ ಹೋಯ್ತು.." ಎಂಬ ಶಿಶು ಪದ್ಯ ಕಲಿಯದೇ ಬೆಳೆಯದ ಮಕ್ಕಳಿಲ್ಲವೇನೋ..  ಆಗಿನ್ನೂ ಮಗಳಿಗೆ ಮೂರು ವರ್ಷ ತುಂಬಿತ್ತೇನೋ..ಮಗಳನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ಕರೆದುಕೊಂಡು ಹೋಗಿದ್ದೆವು.  ಬೆಳಿಗ್ಗೆ ೮-೧೧ ಗಂಟೆಯವರೆಗೆ ಪ್ರವಾಸಿಗರಿಗೆ ಆನೆಗಳನ್ನು ನೋಡಲು ಬಿಡುವ ಸಮಯವಾದ್ದರಿಂದ, ತುಸು ಬೇಗನೆ ಸಿದ್ಧರಾಗಿ ಆನೆ ಕ್ಯಾಂಪ್ ತಲುಪಿದ್ದೆವು. ಹಚ್ಚ ಹಸಿರಿನ ಮಧ್ಯೆ, ಎಳೆ ಬಿಸಿಲಿಗೆ, ರಸ್ತೆಯ ಒಂದು ತುದಿಯಲ್ಲಿ, ಮಾವುತರನ್ನು ಹೊತ್ತ ಬ್ರಹದಾಕಾರದ ಆನೆಗಳು ಒಂದರ ಹಿಂದೆ ಒಂದು ಕಾಡಿನಿಂದ ನಡೆದು ಬರುತ್ತಿದ್ದವು!  'ಗಜ ಗಾಂಭೀರ್ಯ' ಎಂದರೆ ಹೇಗಿರುತ್ತದೆ ಎಂಬುದನ್ನು ಅಕ್ಷರಶಃ ಕಂಡದ್ದು ನಾವು..! ಕುತ್ತಿಗೆಗೆ ಕಟ್ಟಿದ ಗಂಟೆ ಕಿಣಿ ಕಿಣಿ ಶಬ್ದ ಮಾಡುತ್ತಾ ಆನೆಗಳು ಬರುತಿರಲು ಮಗಳೆಂತು ಬೆರಗಣ್ಣಿನಿಂದ ನೋಡುತ್ತಿದ್ದಳು. ದೊಡ್ಡ ಕಿವಿಯ ಆನೆ, ಉದ್ದ ಸೊಂಡಿಲ ಆನೆ, ಮೋಟು ಬಾಲದ ಆನೆ, ಶಕ್ತಿ ಶಾಲಿ ಆನೆ ಎಂಬ ಪದ್ಯವನ್ನು ಕಣ್ಣಾರೆ ಕಂಡು ಅನುಭವಿಸಿದ ಕ್ಷಣವದು ಅವಳಿಗೆ..!! ರಾಜ್ಯದ ಈ  ಅತೀ ಮುಖ್ಯ ಆನೆ ತರಬೇತಿ ಕೇಂದ್ರ ಸಿಗುವುದು ಶಿವಮೊಗ್ಗ ನಗರದಿಂದ ೧೪ ಕಿಮೀ ಮುಂದಕ್ಕೆ ಹೋದರೆ ಗಾಜನೂರು ಡ್ಯಾಮ್ ಬಳಿ. ೧೧ ಗಂಟೆಯ ನಂತರ ಆನೆಗಳನ್ನು ಕಾಡಿಗೆ ಕಳುಹಿಸಿಬಿಡುತ್ತಾರೆ. ರಾತ್ರಿಯಿಡೀ ತಮ್ಮ ನೈಸರ್ಗಿಕ ಸ್ಥಳವಾದ ಕಾಡಿನಲ್ಲಿ ತಂಗುವ ಆನೆಗಳನ್ನು, ಮತ್ತೆ ಮರುದಿನ ಬೆಳಿಗ್ಗೆ ಶಿಬಿರಕ್ಕೆ ಕರೆತರಲಾಗುತ್ತದೆ. ಆನೆಗಳನ್ನು ಪಳಗಿಸುವ ಮಾವುತರ ಪಾಲಿಗೆ ಅವೇ ಅವರ ಮಕ್ಕಳು. ಸಧ್ಯಕ್ಕೆ ೨೪ ಆನೆಗಳನ್ನು ಹೊಂದಿರುವ ಈ ಕ್ಯಾಮ್ಪಿನಲ್ಲಿ ಪಳಗಿದ ದೊಡ್ಡ ಆನೆಗಳು ಪುಟ್ಟ ಪುಟ್ಟ ಮರಿಗಳೊಂದಿಗೆ ಪ್ರವಾಸಿಗರೆಡೆಗೆ ಅತ್ಯಂತ ಸ್ನೇಹದಿಂದ ವರ್ತಿಸುತ್ತದೆ. ಮಕ್ಕಳ ಕುತೂಹಲ ಪ್ರಶೆಗಳಿಗೆ,  ಆನೆಗಳ ಲಾಲನೆ-ಪೋಷಣೆ ಬಗ್ಗೆ, ತರಬೇತಿಗಳ ಬಗ್ಗೆ  ಅಲ್ಲಿನ ಸಿಬ್ಬಂದಿಯವರು ತಾಳ್ಮೆಯಿಂದ ಉತ್ತರಿಸುತ್ತಾರೆ. ಆನೆ ಸವಾರಿ ಮಕ್ಕಳಿಗೆ ಒಂದು ರೋಚಕ ಅನುಭವ. ಆನೆಗಳು ತಮ್ಮ ಪುಟ್ಟ ಪುಟ್ಟ ಮರಿಗಳೊಂದಿಗೆ ತುಂಗಾ ನದಿಯ ನೀರಿನಲ್ಲಿ ಸೊಂಡಿಲಿನಿಂದ ನೀರುಚಿಮ್ಮಿಸುತ್ತ ಆಟವಾಡವುದು, ಸ್ನಾನ ಮಾಡುವುದು ನೋಡುವುದೇ ಒಂದು ಮೋಜು.  ಟಿಕೆಟ್ ಮೇರೆಗೆ ಪ್ರವಾಸಿಗರು ಆನೆಗೆ ಸ್ನಾನ ಮಾಡಿಸಲು ಕೂಡ ಇಲ್ಲಿ ಅವಕಾಶವಿದೆ. ಶಿಬಿರದಲ್ಲಿ ಆನೆಗಳಿಗೆ ಕಾಯಿ, ಬೆಲ್ಲ ಅಕ್ಕಿ, ಕಬ್ಬು ಮಿಶ್ರಿತ ಆಹಾರಗಳನ್ನು ತಿನ್ನಿಸುವುದನ್ನು ಕೂಡ ನಾವು ನೋಡಬಹುದು.  ಆನೆಗಳನ್ನು ಅತೀ ಹತ್ತಿರದಿಂದ ನೋಡಲು, ಅವುಗಳನ್ನು ಮುಟ್ಟಿ, ಜಂಬೂ ಸವಾರಿ ಮಾಡಲು ಅವಕಾಶವಿರುವುದರಿಂದ, ಸಮಯ ಹೋದದ್ದೇ ತಿಳಿಯುವುದಿಲ್ಲ ಅಲ್ಲಿ! "ಒಂದು ಸಿಕ್ (ಚಿಕ್ಕ) ಆನೆ ತಗಂಡ್ ಹೋಪನ ನಮ್ಮನಿಗೆ ಆಟಾಡಕ್ಕೆ.." ಎಂದು ಮುಗ್ದವಾಗಿ ಕೇಳಿದ್ದಳು ಮಗಳು :) ಒಟ್ಟಾರೆಯಾಗಿ ಮಕ್ಕಳಿಗೆ ಪ್ರಾಣಿ ಪ್ರೀತಿ ಯನ್ನು ಮೈಗೂಡಿಸಲು, ಮಕ್ಕಳು ಖುಷಿ ಪಡಲು ಇದೊಂದು ಒಳ್ಳೆಯ ಪ್ರವಾಸೀ ಸ್ಥಳ. ಹಾಂ! ವನ್ಯ ಜೀವಿ ಸಪ್ತಾಹದ ಸಮಯದಲ್ಲಿ,  ಇಲ್ಲಿನ ಆನೆಗಳಿಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾರಂತೆ. ಮಾವುತರ ನಿರ್ದೇಶನವನ್ನು ಪಾಲಿಸುತ್ತ ಅಲ್ಲಿನ ಆನೆಗಳು ಕ್ರಿಕೆಟ್, ಫುಟಬಾಲ್, ರನ್ನಿಂಗ್ ರೇಸ್, ಬಾಳೆಹಣ್ಣು, ಕಬ್ಬು ತಿನ್ನುವ ಸ್ಪರ್ಧೆ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಾಣಿಪ್ರಿಯರನ್ನು, ಕ್ರೀಡಾ ಪ್ರಿಯರನ್ನು ರಂಜಿಸಿ ತಾವೂ ಹಬ್ಬ ಮಾಡುತ್ತಾವಂತೆ ಈ ಆನೆಗಳು :) 




ದುಬಾರೆ ಎಲಿಫೆಂಟ್ ಕ್ಯಾಂಪ್ : ಇದೇ ರೀತಿ ಇನ್ನೊಂದು ಆನೆಗಳನ್ನು ಪಳಗಿಸುವ ಮತ್ತು ತರಬೇತಿ ನೀಡುವ ಮುಖ್ಯ ಕೇಂದ್ರ ಕೊಡಗಿನ ನಡುಭಾಗ ಕುಶಾಲನಗರದ ಬಳಿ ಇರುವ ದುಬಾರೆ ಎಂಬ ಸ್ಥಳ. ಕಾವೇರಿ ನದಿಯ ತಟದಲ್ಲಿರುವ ಈ ಶಿಬಿರದಲ್ಲಿ ಬೆಳಿಗ್ಗೆ ೮ ರಿಂದ ಸಂಜೆ ೫ ವರೆಗೆ ಆನೆಗಳು ಈ ದುಬಾರೆ ಕ್ಯಾಮ್ಪಿನಲ್ಲಿದ್ದು ರಾತ್ರೆಗೆ ಕಾಡಿನಲ್ಲಿ ವಾಸ ಮಾಡುತ್ತವೆ. ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವಕ್ಕೆ ಭಾಗವಹಿಸುವ ಆನೆಗಳನ್ನು ಇಲ್ಲಿಯೇ ಪಳಗಿಸುತ್ತಾರೆ. ಇಲ್ಲಿಯೂ ಕೂಡ ಆನೆಗಳಿಗೆ ಸ್ನಾನಮಾಡಿಸುವುದು, ಸವಾರಿ ಮಾಡುವುದು ಮತ್ತು ಆಟವಾಡಿಸುವಂತಹ ಮೋಜಿನ ಚಟುವಟಿಕೆಗಳು ಪ್ರವಾಸಿಗರನ್ನು ಅತಿಯಾಗಿ ರಂಜಿಸುತ್ತದೆ. ಸುತ್ತಲೂ ನೀರು ಬೆಟ್ಟ ಕಾಡು ಹಸಿರಿನಿಂದ ಕೂಡಿರುವ ಈ ಸ್ಥಳದಲ್ಲಿ, ಟ್ರೆಕಿಂಗ್, ಪಕ್ಷಿ ವೀಕ್ಷಣೆ, ಸಫಾರಿ, ಹತ್ತಿರದ ರಿವರ್ ರಾಫ್ಟಿಂಗ್ ಇತ್ಯಾದಿ ಅನುಭವಗಳೊಂದಿಗೆ ಹೆಚ್ಚಿನ ಸಮಯ ಅಲ್ಲೇ  ಕಳೆಯಬೇಕೆಂಬ ಆಸಕ್ತಿಯಿದ್ದರೆ, ರೆಸಾರ್ಟ್ ವ್ಯವಸ್ಥೆ ಕೂಡ ಇದೆ.

ಗುಡವಿ ಪಕ್ಷಿಧಾಮ : ಸ್ನೇಹಿತರು ನಮ್ಮೂರು ಸಾಗರಕ್ಕೆ ಬಂದಾಗ, ನನ್ನ ಮಗಳನ್ನೂ ಸೇರಿಸಿ ಎಲ್ಲ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಎಲ್ಲಿ ಸುತ್ತಮುತ್ತ ಓಡಾಡಬಹುದಪ್ಪಾ ಎಂದು ಯೋಚಿಸುತ್ತಿದ್ದಾಗ ನಮಗೆ ನೆನಪಾದ್ದೇ ಹತ್ತಿರದ ಗುಡವಿ ಪಕ್ಷಿಧಾಮ. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನವಾಸಿ ರಸ್ತೆಯಲ್ಲಿದೆ ಈ ಗುಡವಿ ಪಕ್ಷಿಧಾಮ. ನೈಸರ್ಗಿಕವಾಗಿಯೇ ಹುಟ್ಟಿಕೊಂಡಿರುವ ಸರೋವರವೊಂದರ ಸುತ್ತಲಿನ ಬೆಳೆದುಕೊಂಡಿರುವ ಗಿಡಮರ ಪೊದೆಗಳೇ ಸಾವಿರಾರು ಹಕ್ಕಿಗಳಿಗೆ ಆಶ್ರಯ ಸ್ಥಳ. ಇಂತಹ ಒಂದು ಸುಂದರ ಸ್ಥಳವನ್ನು ಸ್ವಲ್ಪ ಅಭಿವೃದ್ಧಿ ಪಡಿಸಿ  ಪ್ರವಾಸಿಗರು ಓಡಾಡಿಕೊಂಡು ವಿವಿಧ ಹಕ್ಕಿಗಳ ಪ್ರಬೇಧವನ್ನು ನೋಡಲೆಂದು ಕಾಲುಹಾದಿಯನ್ನು ನಿರ್ಮಿಸಲಾಗಿದೆ. ನೀರಿಗೆ ಇಳಿಯುವ ಅವಕಾಶವಿಲ್ಲ ಆದರೆ ಮಕ್ಕಳು ಅತ್ಯಂತ ಸ್ವಚ್ಛಂದವಾಗಿ ಓಡಾಡಿಕೊಂಡು ದೂರದಲ್ಲಿ ಕಾಣುವ ಪೊದೆಗಳಲ್ಲಿನ ಸಾವಿರಾರು ಹಕ್ಕಿಗಳು, ಮರಿಗಳು ಅವುಗಳ ಗೂಡುಗಳನ್ನು ಕಂಡು ಸಂತಸ ಪಡಬಹುದು. ಸಂತಾನೋತ್ಪತ್ತಿಗಾಗಿ ವಿವಿಧ ಋತುಗಳಲ್ಲಿ ಜಗತ್ತಿನಾದ್ಯಂತ ಪಕ್ಷಿಗಳು ವಲಸೆ ಹೋಗುತ್ತವೆ. ಹಾಗೆಯೇ ಬೇರೆ ಬೇರೆ ಸೀಸನ್ನಿನ್ನಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಬಂದು ಸ್ವಲ್ಪ ಕಾಲ ವಾಸ ಮಾಡುತ್ತದೆ.  ಅಲ್ಲಲ್ಲಿ ಟ್ರೀ ಹೌಸ್ ಮಾದರಿಯ ಎತ್ತರದ ವೀವ್ ಪಾಯಿಂಟ್ಸ್ ನಿರ್ಮಾಣ ಮಾಡಿರುವುದರಿಂದ ಮಕ್ಕಳಿಗೆ ಅದನ್ನು ಹತ್ತಿ ಮೇಲಿನಿಂದ ಹಕ್ಕಿ ವೀಕ್ಷಣೆ ಮಾಡಲು ಭಾರೀ ಇಷ್ಟವಾಗುತ್ತದೆ. ಮೇಲಿನಿಂದ  ನೋಡಿದರೆ ಮರಗಳ ತುಂಬಾ ಬಿಳಿ ಹೂವುಗಳೇನೋ ಎನ್ನುವಂತೆ ಬೆಳ್ಳನೆಯ ಹಕ್ಕಿಗಳು ತುಂಬಿಕೊಂಡಿರುವುದೇನೋ ಎಂಬಂತೆ ಭಾಸವಾಗುತ್ತಿತ್ತು ಅಷ್ಟೊಂದು ಹಕ್ಕಿಗಳ ಬೈಠಕ್. ಕೇವಲ ಕಾರ್ಟೂನ್, ಪುಸ್ತಕಗಳಲ್ಲಿ ಕಾಣುವ ವಿಶೇಷ ಬಗೆಯ ಹಕ್ಕಿಗಳು ಇಲ್ಲಿ ಕಾಣಸಿಗುವುದರಿಂದ ಮಕ್ಕಳಿಗೆ  ಹಕ್ಕಿ ಪ್ರಭೇದಗಳ ಕುರಿತು ಆಸಕ್ತಿ ಬರುತ್ತದೆ. ಹಕ್ಕಿಗಳ ಕುರಿತಾಗಿ ವಿಶೇಷ ಆಸಕ್ತಿ ಇರುವವರು ಬೈನಾಕ್ಯುಲರ್ ತಂದು ಕೊಂಡರೆ ಅತ್ಯಂತ ಕೂಲಂಕುಷವಾಗಿ ಹಕ್ಕಿಗಳ ಚಲನವಲನ,  ದೇಹ ರಚನೆ, ಅವುಗಳ ಹಾರಾಟ, ಮರಿಗಳೊಡಗಿನ ಒಡನಾಟ ಎಲ್ಲವನ್ನೂ ಗಮನಿಸಬಹುದು. ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಥಳವಾದ್ದರಿಂದ ಪಕ್ಷಿಧಾಮದ ಹೊರಗೆ ಮಕ್ಕಳ ಆಟದ ಪುಟ್ಟ ಪಾರ್ಕ್ ಕೂಡ ಇದೆ. ಈ ಸುಂದರ ನೈಸರ್ಗಿಕ ಸ್ಥಳದಲ್ಲಿ ೨-೩ ಗಂಟೆ ಆರಾಮದಲ್ಲಿ ಕಳೆದು ಪುಟ್ಟ ಮಕ್ಕಳ ಒಂದು ದಿನದ ಪಿಕ್ಣಿಕ್ ಜಾಲಿಯಾಗಿ ಮುಗಿಸಿ ಬಂದೆವು. 



ರಂಗನತಿಟ್ಟು ಪಕ್ಷಿಧಾಮ : ಕರ್ನಾಟಕದ ಪಕ್ಷಿಕಾಶಿ ಎಂಬ ಹೆಸರಿನಿಂದ ಕರೆಯಲ್ಪಡುವ ರಂಗನತಿಟ್ಟು ಪಕ್ಷಿಧಾಮ ರಾಜ್ಯದ ಅತೀ ದೊಡ್ಡ ಪಕ್ಷಿಧಾಮವಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಪ್ರವಾಸೀ ಸ್ಥಳ ಬೆಂಗಳೂರಿನಿಂದ ಒಂದು ದಿನದ ಮಟ್ಟಿಗೆ ಹೋಗಿ ಪಕ್ಷಿ ಸಂಕುಲವನ್ನು ಮಕ್ಕಳಿಗೆ ತೋರಿಸಲು ಹೇಳಿ ಮಾಡಿಸಿದಂತಹ ಜಾಗ. ಎಂಟ್ರಿ ಫಿ ಕೊಟ್ಟು ಒಳನಡೆದರೆ ಸುಮಾರು ೪೦ ಎಕರೆಗಳಷ್ಟು ಜಾಗದಲ್ಲಿ ಕಾವೇರಿ ನದಿಯನ್ನಾವರಿಸಿ ಆರು ಚಿಕ್ಕ ಚಿಕ್ಕ ದ್ವೀಪ ಗಳಿಂದ ನೈಸರ್ಗಿಕವಾಗಿ ನಿರ್ಮಿತ ಪಕ್ಷಿಧಾಮ ನಿಮ್ಮ ಮುಂದೆ ಸಾವಿರಾರು ಹಕ್ಕಿಗಳ ಹೊಸ ಲೋಕವನ್ನೇ ತೆರೆದಿಡುತ್ತದೆ.ಮಕ್ಕಳಿಗೆಂತೂ ವಾವ್ ವಾವ ಎನ್ನುತ್ತಾ ನೂರಾರು ಬಗೆಯ ಹಕ್ಕಿಗಳನ್ನು ನೋಡುತ್ತಾ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಜೊತೆಗೆ ಮನರಂಜನೆಗೆ ತೆಪ್ಪದ ವಿಹಾರದ ಮೂಲಕ ಹಕ್ಕಿಗಳಿರುವ ಪೊದೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡಿಬರಹುದು. ಆದರೆ ತೆಪ್ಪದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಸು ಜಾಗ್ರತೆ! ಈ ನೀರಿನಲ್ಲಿ ಮೊಸಳೆಗಳು ಕೂಡ ಓಡಾಡಿಕೊಂಡಿರುವುದರಿಂದ, ನೀರಿಗೆ ಕೈ ಹಾಕುವುದೆಲ್ಲ ಸುರಕ್ಷಿತವಲ್ಲ.





ಟ್ರೆಕಿಂಗ್ 

ಕವಲೇದುರ್ಗ ಕೋಟೆ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಊರಿಂದ ೧೮ ಕಿಮೀ ದೂರದಲ್ಲಿ ಸಿಗುತ್ತದೆ ಕವಲೇದುರ್ಗ. ಒಂದು ಕಾಲದಲ್ಲಿ ಕೆಳದಿ ನಾಯಕರ ಭದ್ರ ಕೋಟೆಯಾಗಿದ್ದ ಈ ದುರ್ಗ, ಟಿಪ್ಪೂ ಸುಲ್ತಾನರ ಧಾಳಿಗೆ ಗುರಿಯಾಗಿ ಸಾಕಷ್ಟುನಶಿಸಿ ಹೋಗಿದೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಇದರ ಐತಿಹಾಸಿಕ ಪ್ರಾಮುಖ್ಯತೆ ತಿಳಿಯಬಹುದು. ಸಣ್ಣ ಮಕ್ಕಳಾದರೆ ಇಲ್ಲಿನ ಪ್ರಕೃತಿ, ಬೆಟ್ಟ ಹತ್ತುವ ಸವಾಲು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಕೋಟೆ ಸಮುದ್ರ ಮಟ್ಟಕ್ಕಿಂತ ೧೫೪೧ ಮೀಟರ್ ಎತ್ತರದಲ್ಲಿದೆ. ಸಂಪೂರ್ಣಕೋಟೆಯ ತುತ್ತತುದಿ ಹತ್ತಿ ಅತೀ ಎತ್ತರದ ಪ್ರದೇಶದಲ್ಲಿ ನಿಂತು ನೋಡಿದರೆ,  ಪಶ್ಚಿಮ ಘಟ್ಟದ ರಮಣೀಯ ನಿಸರ್ಗ ದೃಶ್ಯ ಮತ್ತು ವಾರಾಹಿ ಹಿನ್ನೆರಿನ ಸೆಲೆಗಳನ್ನು ಕಾಣಬಹುದಾಗಿದೆ. ಈ ಕೋಟೆಯನ್ನು ಹತ್ತಿ ಓಡಾಡಿ ಇಳಿದು ಬರುವುದಕ್ಕೆ ಸುಮಾರು ೫-೬ ಘಂಟೆಗಳು ಬೇಕಾಗಬಹುದಾದ್ದರಿಂದ, ಮಕ್ಕಳ ವಯಸ್ಸಿಗನುಗುಣವಾಗಿ ಹಾಗೂ ದೈಹಿಕ ಶಕ್ತಿಗನುಸಾರವಾಗಿ ಈ ಟ್ರೆಕ್ ಅನ್ನು ಆಯ್ದುಕೊಳ್ಳಬಹುದು. ಟ್ರೆಕಿಂಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಅವರ ಹೊಟ್ಟೆಗೆ ಅವಶ್ಯಕ ಆಹಾರ ಪದಾರ್ಥ, ಹಣ್ಣು ನೀರು ಎಲ್ಲವೂ ಕೊಂಡೊಯ್ಯುವುದು ಉತ್ತಮ. ಬ್ಯಾಗ್ ಆದಷ್ಟು ಹಗುರವಾಗಿದ್ದರೆ ಒಳ್ಳೆಯದು. ಎಲ್ಲಿಗೇ ಟ್ರಿಪ್ ಹೋಗುವುದಾದರೂ ತನ್ನ ಬೆನ್ನಿನ ಬ್ಯಾಗಿನಲ್ಲಿ, ಎಲ್ಲಿಯಾದರೂ ನೀರಾಟವಾಡಿದರೆ ಬದಲಾಯಿಸಲು ಒಂದು ಜೊತೆ ಬಟ್ಟೆ, ಬೂತಕನ್ನಡಿ, ಒಂದು ನೀರಿನ ಬಾಟಲ್ಲು ಮತ್ತು ಒಂದು ಸ್ನ್ಯಾಕ್ -  ಇಷ್ಟನ್ನು ಮಗಳು ಖಾಯಂ ಆಗಿ ತುಂಬಿಕೊಂಡು 'ನಾನ್ ರೆಡಿ' ಎನ್ನುತ್ತಾಳೆ ಮಗಳು. ಅಷ್ಟರ ಮಟ್ಟಿಗೆ ಮಕ್ಕಳು ಸ್ವತಂತ್ರರಾದರೆ ಅದೇ ಒಂದು ಕಲಿಕೆ ಅಲ್ಲವೇ? ಮಳೆಗಾಲದ ಸಮಯದಲ್ಲಿ ಮಳೆ ಬಿಡುವು ಕೊಟ್ಟಾಗ ನಾವು ಅಲ್ಲಿಗೆ ಭೇಟಿ ನೀಡಿದ್ದರಿಂದ, ಹಚ್ಚ ಹಸಿರಿನ ಮಡಿಲ ಮಾನ್ಸೂನ್  ಪ್ರವಾಸ ನಮ್ಮದಾಯಿತು. ಏಳು ವರ್ಷದ ಮಗಳ,  ನಿರಂತರವಾಗಿ ೬-೭ ಕಿಮೀ ಟ್ರೆಕ್ ಎಂದಾಗ, ನಾವು ಅವಳಿಗೆ ಆಸಕ್ತಿ ಕುತೂಹಲ ವಿರುವ ವಿಷಯಗಳ ಬಗ್ಗೆ ಮಾತನಾಡಿಸುತ್ತಾ, ಸುತ್ತಮುತ್ತಲಿನ ಪರಿಸರವನ್ನು ಹುಳ ಹುಪ್ಪಟಿ, ಹಕ್ಕಿ ದನಗಳನ್ನು ತೋರಿಸುತ್ತ ತುಸು ನಿಧಾನವಾಗಿಯೇ ಚಾರಣ ಮಾಡುತ್ತಿದ್ದೆವು . ಆಗಾಗ ನೀರಿನ ಬ್ರೇಕ್ಅವಶ್ಯಕ. ಕೋಟೆಯ ವಿನ್ಯಾಸ, ಅಲ್ಲಿ ಹಿಂದೆ ವಾಸವಿದ್ದ ಊರ ಜನರು, ಅಷ್ಟು ಎತ್ತರದ ಸ್ಥಳಕ್ಕೆ ಸಾಮಗ್ರಿಗಳನ್ನು ಸಾಗುಸುತ್ತಿದ್ದ ಬಗೆ, ಮಳೆ ಕೊಯ್ಲು ಇತ್ಯಾದಿ ವಿಷಯಗಳ ಕುರಿತಾಗಿ ನಿರಂತರವಾಗಿ ಅನೇಕ ವಿಷಯಗಳ ಚರ್ಚೆ ಮಾಡುತ್ತಾ ಹೋದ್ದರಿಂದ, ಮಗಳಿಗೆ ಈ ಸ್ಥಳ ಅತ್ಯಂತ ಇಷ್ಟವಾಯಿತು.   ಕವಲೇದುರ್ಗ ಕೋಟೆಯನ್ನು ಹತ್ತುವ ಪ್ರಾರಂಭದಲ್ಲೇ ಅಕ್ಕ ಪಕ್ಕ ಹಚ್ಚ ಹಸಿರಿನಿಂದ ಕೂಡಿದ ಗದ್ದೆಯೊಂದನ್ನು ದಾಟಿ ಹೋಗಬೇಕು. ಆ ನೋಟವೇ ನಮಗೆ ಒಂದು ರೀತಿಯ ಹುರುಪು ನೀಡುತ್ತದೆ. ಹಸಿರು ಗದ್ದೆ, ಹಾದಿ ತುಂಬಾ ಸವಾಲಿನ ಕಲ್ಲು ಹಾದಿ, ಕಾಲು ಜಾರಿದರೆ ಸಂಭಾಳಿಸಿಕೊಳ್ಳುವ ಕಲೆ, ಸುತ್ತಲೂ ದಟ್ಟ ಕಾಡು, ಮಳೆಗಾಲವಾದ್ದರಿಂದ ಅಲ್ಲಲ್ಲಿ ದುಡ್ಡದಿಂದ ಇಳಿದು ನೆಲ ಸೇರುತ್ತಿದ್ದ ಝರಿ, ಬ್ರಹದಾಕಾರ ಕಲ್ಲುಗಳಿಂದ ಮಾರ್ಪಟ್ಟ ಕಲ್ಲಿನ ಕೋಟೆಯ ದ್ವಾರ ಮತ್ತು ಇನ್ನಿತರ ಅವಶೇಷಗಳು, ದೇವಸ್ಥಾನ, ದೈತ್ಯಾವಾದ ಬಂಡೆಕಲ್ಲಿನ ಮೇಲೊಂದು ಗುಡಿ, ದೇವಸ್ಥಾನದ ಕಲ್ಲಿನ ಕೆತ್ತನೆಗಳು, ಹಿಂದಿನ ಕಾಲದ ರಾಜರ ಅರಮನೆಯ ಅವಶೇಷಗಳು, ಪ್ರಾಣಿಗಳಿಗೆ ನೀರುಣಿಸಲು ಇರುತ್ತಿದ್ದ ತೊಟ್ಟಿಗಳು, ಅಲ್ಲಲ್ಲಿ ಕಂಡು ಬರುವ ಕೆರೆಗಳು, ಅಮೋಘ ಸಸ್ಯರಾಶಿ, ದುಂಬಿಗಳ ಝೇಂಕಾರ, ಹಕ್ಕಿಗಳ ಕಲರವ, ಬೆಟ್ಟದ ತುತ್ತತುದಿಯಿಂದ ನೋಡಿದರೆ ದಕ್ಷಿಣ ದಿಕ್ಕಿಗೆ ಕುಂದಾದ್ರಿ ಪರ್ವತ, ದಟ್ಟ ಕಾಡುಗಳು ಉತ್ತರ ದಿಕ್ಕಿಗೆ ಕೊಡಚಾದ್ರಿ ಪರ್ವತ, ಸಂಜೆಗೆ ಮೇಲೆ ಹತ್ತುವ ಪ್ಲಾನ್ ಮಾಡಿಕೊಂಡರೆಂತೂ ಸೂರ್ಯಾಸ್ಥ ಅದ್ಭುತವಾಗಿ ಕಾಣುತ್ತದೆ. ಹೀಗೆ ಪ್ರತಿ ಹೆಜ್ಜೆ ಹೆಜ್ಜೆಗೂ ಹೊಸ ವಿಷಯಗಳನ್ನು ಮನಸಾರೆ ತುಂಬಿಕೊಳ್ಳಬಹುದಾದ ಫುಲ್ ಪ್ಯಾಕೇಜ್ ಕವಲೇದುರ್ಗ ಟ್ರೆಕ್. ಟ್ರೆಕ್ ಮುಗಿಸಿ ಕೆಳಗೆ ಇಳಿದು ಬಂದ ಮೇಲೂ ನೀರಾಟ ಪ್ರಿಯೆ ಮಗಳು ಅಲ್ಲಿನ ಹಾದಿ ಪಕ್ಕದ ತೋಟದಲ್ಲಿ ಹರಿಯುತ್ತಿದ್ದ ಝರಿಯಲ್ಲಿ ಮತ್ತೊಂದಷ್ಟು ಹೊತ್ತು ಆಟವಾಡಿ ಖುಷಿ ಪಟ್ಟಳು. 




ನೀರಾಟ

ನಿಪ್ಪಲಿ ಫಾಲ್ಸ್ : ನೀರಾಟ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಪ್ರಿಯವಾಗುತ್ತದೆ. ನಮ್ಮೂರು ಸಾಗರದಿಂದ ಜೋಗಕ್ಕೆ ಹೋಗುವ ದಾರಿಯಲ್ಲಿ ಬಲ ತಿರುವಿನಲ್ಲಿ ೫-೬ ಕಿಮೀ ಮುಂದಕ್ಕೆ ಹೋದರೆ ಸಿಗುತ್ತದೆ ನಿಪ್ಪಲಿ ಎಂಬ ಊರು . ಈ ಊರಿನ ಪಕ್ಕದಲ್ಲೇ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಕಟ್ಟಿರುವ ಹೊಸೂರ್ ಅಣೆಕಟ್ಟಿನಿಂದಾಗಿ ಹರಿಯುತ್ತಿರುವ ನೀರು ಅಣೆಕಟ್ಟನ್ನು ದಾಟಿ ಒಂದು ಜಲಪಾತದ ಮಾದರಿಯಲ್ಲಿ ಸುಮಾರು ೬-೭ ಅಡಿ ಮೇಲಿನಿಂದ ಕೆಳಗೆ ಬೀಳುತ್ತದೆ. ಪುಟ್ಟದಾದ ಈ ಜಲಪಾತಕ್ಕೆ ಬೆನ್ನು ಕೊಟ್ಟು ನಿಲ್ಲುವುದೇ ಭಾರಿ ಮಜಾ. ರಭಸದಿಂದ ಬೀಳುವ ನೀರಿಗೆ ಕಾಲು ಒಡ್ಡುವುದು, ಮೈ ಒಡ್ಡುವುದು ಒಂದು ರೀತಿ ನೈಸರ್ಗಿಕವಾದ ಆಕ್ಯುಪಂಚರ್ ರೀತಿ ದೇಹಕ್ಕೂ, ಮನಸ್ಸಿಗೂ ಸಹಾಯ ಮಾಡುತ್ತದೆ. ಅಣೆಕಟ್ಟಿನ ಹಿಂದೆ ತುಂಬಿರುವ ನೀರು ಕೇವಲ ಮೊಣಕಾಲಿನ ವರೆಗೆ ಬರುವುದರಿಂದ, ಜೊತೆಗೆ ನೈಸರ್ಗಿಕವಾಗಿಯೇ ನಿರ್ಮಿತ ಕಲ್ಲುಗಳ ಹಾಸಿನ ಮೇಲೆ ನೀರು ಹರಿಯುವುದರಿಂದ ಮಕ್ಕಳು ವಯಸ್ಕರರೆನ್ನದೆ ಯಾರಾದರೂ ಸುರಕ್ಷತೆಯಿಂದ ಯಾವುದೇ ಭಯವಿಲ್ಲದೆ ನೀರಾಡಬಹುದು. ಮೊದಲೇ ನೀರನ್ನು ಇಷ್ಟ ಪಡುವ ನಮ್ಮ ಮಗಳು, ಹೋದ ಕೂಡಲೇ ನೀರಿಗೆ ಮೈಯೊಡ್ಡಿ ಮಲಗಿ ಬಿಡುತ್ತಾಳೆ. ಕಾಲನ್ನು ಸ್ವಲ್ಪ ಕ್ಷಣ ನೀರಿಗೆ ನಿಶ್ಚಲವಾಗಿ ಇಟ್ಟುಕೊಂಡರೆ ಪುಟ್ಟ ಪುಟ್ಟ ಮೀನುಗಳು ಕಾಲಿನ ಸುತ್ತ ಮುತ್ತ ಓಡಾಡಿಕೊಂಡು ಕೊಡುವ ಕಚಗುಳಿ ಅನುಭವ ಖುಷಿಯೆನಿಸುತ್ತದೆ. ತಣ್ಣನೆಯ ನೀರು, ಸುತ್ತಲೂ ಮಲೆನಾಡಿನ ಸ್ವಚ್ಛ ಹಸಿರು ಪರಿಸರ ಆ ಸ್ಥಳವನ್ನು ಸ್ವರ್ಗ ಸದೃಶವನ್ನಾಗಿ ಮಾಡುತ್ತದೆ. ವರ್ಷವಿಡೀ ನೀರು ಹರಿಯುವ ಸ್ಥಳವಾದರೂ, ಮಳೆಗಾಲದಲ್ಲಿ ತುಂಬಿ ಹರಿಯುವಷ್ಟು ನೀರು ಬೇಸಿಗೆಯಲ್ಲಿ ಸಿಗದು. ಪ್ಲಾನ್ ಮಾಡಿಕೊಂಡು ಹಣ್ಣು ಸ್ನ್ಯಾಕ್ ಕಟ್ಟಿಕೊಂಡು ಹೋದರೆ ಆರಾಮದಲ್ಲಿ ಒಂದೆರಡು ಗಂಟೆಗಳ ಕಾಲ ನೀರಲ್ಲಿ ಆಟವಾಡಿ ಬರಬಹುದಾದಂತಹ ಸಣ್ಣ ಪಿಕ್ನಿಕ್ ಸ್ಥಳವಿದು. 



ಕೋಡಿ ಬೀಚ್, ಕುಂದಾಪುರ : ಬೀಚ್ ಎಂದರೆ ಯಾರಿಗೆಖುಷಿಯಾಗುವುದಿಲ್ಲ? ಕಡಲ ತೀರ, ಮರಳ ರಾಶಿ, ನೋಡಿದಷ್ಟೂ ಮುಗಿಯದ ಸಮುದ್ರ, ರಭಸದ ಅಲೆಗಳ ಹೊಡೆತ, ಕಡಲ ಒಡಲಿನಲ್ಲಿ ಮುಳುಗುವ ಕೆಂಪನೆಯ ಸೂರ್ಯಾಸ್ತ, ಬೀಸುವ ಗಾಳಿ ಇವೆಲ್ಲವೂ ಕೇವಲ ಮಕ್ಕಳಿಗೊಂದೇ ಅಲ್ಲ, ದೊಡ್ಡವರಿಗೂ ಕೂಡ ಒಂದು ಹಿತವಾದ ನೆಮ್ಮದಿಯನ್ನು, ಜೀವನೋತ್ಸಾಹವನ್ನು ಕೊಡುತ್ತದೆ. ಕುಂದಾಪುರದಿಂದ ಕೇವಲ ಆರು ಕಿಮೀ ದೂರದಲ್ಲಿರುವ ಕೋಡಿ ಬೀಚ್ ಗೆ ಸಂಬಂಧಿಕರ ಒಡಗೂಡಿ ಮಕ್ಕಳ ದಿಂಡನ್ನು ಕಟ್ಟಿಕೊಂಡು ಹೋಗಿದ್ದೆವು. ಮೊದಲೇ ಕುಣಿಯುತ್ತಿದ್ದ ಮಕ್ಕಳಿಗೆ ಬೀಚ್ ತಲುಪಿದ ಮೇಲಂತೂ ಉತ್ಸಾಹತಡೆಯಲಾಗುತ್ತಿರಲಿಲ್ಲ. ನಾವು ಹೋದ ಸಮಯಕ್ಕೆ ಬೀಚ್ ತಕ್ಕ ಮಟ್ಟಿಗೆ ಸ್ವಚ್ಛವಾಗಿಯೇ ಇದ್ದಿತ್ತು. ಪ್ರವಾಸ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಯಾವುದೇ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾದ್ದರಿಂದ, ಮಕ್ಕಳಿಗೆ ತೋರಿಸಿ, ತಿಳಿಸಿ ಕಲಿಸುವ ಎಲ್ಲ ಅವಾಕಾಶಗಳೂ ನಮಗೆ ಅಲ್ಲಿ ದೊರೆಯಿತು. ಇಲ್ಲಿನ ನೀರಿನ ಅಲೆಗಳು ತೀರಾ ಸೌಮ್ಯವೂ ಅಲ್ಲದ, ಅಬ್ಬರವೂ ಅಲ್ಲದ ಮಧ್ಯಮ ಬಿರುಸಿನ ವೇಗದ ಅಲೆಗಳು. ನೀರಿಗೆ ಹೋಗುವಾಗ ಮಕ್ಕಳ ಸುರಕ್ಷತೆ ಕಾಯ್ದುಕೊಳ್ಳಬೇಕಾದರೂ ಕೂಡ, ಸಣ್ಣ ಮಕ್ಕಳು  ತೀರದಲ್ಲಿ ಕುಳಿತು ಆಡಲು ಏನೂ ತೊಂದರೆಯಿಲ್ಲ. ಮರಳಿನಲ್ಲಿ ಬಿದ್ದು ಹೊರಳಾಡಿ ಆಟವಾಡುವುದು, ಕಾಲು ಮರಳಿನಲ್ಲಿ ಹುದುಗಿಸಿಕೊಂಡು ಆಟವಾಡುವುದು, ಏಡಿ ಕುಣಿ ಮಾಡುವುದು, ಶಂಖ ಕಪ್ಪೆಚಿಪ್ಪುಗಳನ್ನು ಆಯುವುದು, ಮರಳಿನಲ್ಲಿ ಚಿತ್ರ ಬಿಡಿಸುವುದು, ಸಮುದ್ರದ ಅಲೆಗಳಿಗೆ ಬೆನ್ನು ಕೊಟ್ಟು ಅವು ಬಂದು ರಪ್ಪೆಂದು ಬಡಿಯುವುದನ್ನು ಎಂಜಾಯ್ ಮಾಡುವುದು, ನೀರಿನ ತೀರದಲ್ಲಿ ಓಟ ಹೀಗೆ ಮಕ್ಕಳಿಗಂತೂ ಅವರದ್ದೇ ಪ್ರಪಂಚವಾಗಿತ್ತು. ಸಮುದ್ರ ನೀರು ಉಪ್ಪಾಗಿರುವುದರಿಂದ ಜೊತೆಗೆ ಈ ಎಲ್ಲ ಚಟುವಟಿಕೆಗಳು ದೈಹಿಕ ವ್ಯಾಯಾಮವಾಗುವುದರಿಂದ ಮಕ್ಕಳಿಗೆ ಬಾಯಾರಿಕೆ ತುಂಬಾ ಆಗುತ್ತದೆ. ಹಾಗಾಗಿ ತುಸು ಹೆಚ್ಚೇ ನೀರು ಇಟ್ಟುಕೊಂಡು ಹೋಗುವುದು ಸೂಕ್ತ. ರಸಭರಿತ ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಮಕ್ಕಳು ಆಟದ ನಂತರ ಚೆನ್ನಾಗಿ ಅವುಗಳನ್ನು  ಸವಿದರು... ನಿಸರ್ಗ-ನೈಸರ್ಗಿಕತೆ ಎಂಬುದು ಎಷ್ಟು ಸುಂದರ ಮತ್ತು ಅವುಗಳ ಪ್ರಾಮುಖ್ಯತೆ ಎಲ್ಲವೂ ಮಕ್ಕಳಿಗೆ ಇಂತಹ ಸ್ಥಳಗಳಿಗೆ ಕರೆದುಕೊಂಡು ಹೋದಾಗ ಅವರ ಅನುಭೂತಿಗೆ ಬರುತ್ತದೆ ಹಾಗೂ ಇಂತಹ ಕಲಿಕೆಗೆ ಯಾವುದೇ ಟೀಚರ್ ಬೇಕಾಗುವುದಿಲ್ಲ 




ನಾಡು ಸಂಸ್ಕೃತಿ 

ಮೈಸೂರು ಅರಮನೆ : "ಒಂದೂರಿನಲ್ಲಿ ಒಬ್ಬ ರಾಜ ಇದ್ದ, ಅವನದ್ದು ದೊಡ್ಡ ಅರಮನೆ.."ಎಂದೆಲ್ಲ ಶುರುವಾಗುವ ಮಕ್ಕಳ ಕಥೆಗಳಲ್ಲಿ, ಆ ರಾಜ, ರಾಜನ ಅರಮನೆ ಎಂಬಿತ್ಯಾದಿ ವಿಷಯಗಳನ್ನ ನಾವೆಲ್ಲಾ ದೊಡ್ಡವರು ವಿವರಿಸಿ ಹೇಳುತ್ತಿದ್ದ ಪದಗಳಿಂದಲೇ ಏನೋ ಒಂದು ಕಲ್ಪನೆ ತಂದುಕೊಳ್ಳುತ್ತಿದ್ದೆವು. ಈಗಿನ ಮಕ್ಕಳಿಗೆ ಅವರು ನೋಡುವ ಕಾರ್ಟೂನ್, ಸಿನಿಮಾಗಳ ಮೂಲಕ ಅರಮನೆಯ ಚಿತ್ರಣ ತಕ್ಕ ಮಟ್ಟಿಗೆ ಮನಸ್ಸಿನಲ್ಲಿ ಚಿತ್ರಿತವಾಗಿರುತ್ತದೆ. ಆದರೂ ಅನಿಮೇಟೆಡ್ ಕಲ್ಪನೆಗೂ ವಾಸ್ತವಿಕತೆಗೂ ಅಜಗಜಾಂತರ ವ್ಯತ್ಯಾಸ. ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಈಗ ಜನರಿಗೆ ಮುಕ್ತವಾಗಿ ನೋಡಲು ಅವಕಾಶವಿರುವ ಪ್ರವಾಸೀ ತಾಣವಾಗಿ ಏರ್ಪಟ್ಟಿರುವುದು ಒಂದು ಅದೃಷ್ಟ. "ರಾಜಂದು ಇಷ್ಟು ದೊಡ್ಡ ಮನೇನ ?" ಎಂಬ ಉದ್ಗಾರದೊಂದಿಗೆ ಪ್ರಾರಂಭವಾಗಿ ಅಲ್ಲಿರುವ ಪ್ರತಿಯೊಂದು ವಸ್ತುವೂ ಮಕ್ಕಳ ಮನಸ್ಸಿನಲ್ಲಿ ಕುತೂಹಲ ಕೆರಳಿಸುವಂತದ್ದೇ ಆಗಿದೆ. ಅರಮನೆಯ ಒಳ ಹೊಕ್ಕರೆ ಮಕ್ಕಳಿಗೆ ಅದೇ ಒಂದು ವಿಶಿಷ್ಟ ಅನುಭವ. ರಾಜನ ಸಿಂಹಾಸನ, ಚಿನ್ನದ ಅಂಬಾರಿ, ರಾಜರ ಪಟ್ಟದ ಕತ್ತಿ, ಆನೆಯ ಶಿಲ್ಪಕಲೆ, ದೇವಿಯ ಮೂರ್ತಿ,  ಶಸ್ತ್ರಾಸ್ತ್ರಗಳು, ಅಂಬಾ ವಿಲಾಸದಂತಹ ಅದ್ಭುತ ಸಭಾಂಗಣ, ಎತ್ತರೆತ್ತರಗುಮ್ಮಟಗಳು ,ವಿಶಿಷ್ಟ ಕೆತ್ತನೆಗಳಿಂದ ಕೂಡಿದ ವ ರ್ಣರಂಜಿತ ಗೋಡೆ ಕಂಬಗಳು, ಕಮಾನುಗಳು ಮತ್ತು ಪ್ರದರ್ಶನಕ್ಕಿಟ್ಟಿರುವ ರಾಜ ವಂಶದವರಿಗೆ ಸೇರಿದ ಪೋಷಾಕು ಧಿರಿಸು ಮತ್ತು ಇನ್ನಿತರ ವಸ್ತುಗಳು ಮಕ್ಕಳಿಗೆ ಹಿಂದಿನ ಕಾಲದ ರಾಜರ ವೈಭವವನ್ನು, ನಾಡ ಸಂಸ್ಕೃತಿಯ ಕಲ್ಪನೆಪಡೆಯಲು, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 



ಶೇಂಗಾ ಪರಿಶೆ : ಬೆಂಗಳೂರು ವಾಸಿಗರಾದ ನಾವು ಸಾಧ್ಯವಾದಾಗಲೆಲ್ಲ ಬಿಡುವಿನ ಸಮಯದಲ್ಲಿ ಹೊಸತನ್ನು ಬದಲಾವಣೆಯನ್ನು ಹುಡುಕಿ ಅಲ್ಲಿ ಇಲ್ಲಿ ಓಡಾಡುತ್ತಿರುತ್ತೇವೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯಲ್ಲಿ, ಬಸವನಗುಡಿಯಲ್ಲಿರುವ ಬ್ರಹತ್ ನಂದಿ ವಿಗ್ರಹಕ್ಕೆ ಕಡಲೇಕಾಯಿ ಅಭಿಷೇಕ   ಮಾಡಲಾಗುತ್ತದೆ. ಎರಡು ದಿನದ ಕಾರ್ಯಕ್ರಮ ಇದಾದರೂ ಕೂಡ, ಜಾತ್ರೆ ಒಂದು ವಾರ ನಡೆಯುತ್ತದೆ. ಸಾವಿರಾರು ಜನ ಪ್ರತಿನಿತ್ಯ ಇಲ್ಲಿಗೆ ಬಂದು ಸಂಭ್ರಮಿಸುತ್ತಾರೆ. ಇಂತಹ ಸ್ಥಳೀಯ  ರಸ್ತೆಯ ಇಕ್ಕೆಲಗಳಲ್ಲಿಯೂ ಸುತ್ತಮುತ್ತಲಿನ ರೈತರು ಶೇಂಗಾ ವನ್ನು ತಂದು ಮಾರುತ್ತಾರೆ. ಹಸಿ ಶೇಂಗಾ, ಹುರಿದ ಶೇಂಗಾ, ಬೇಯಿಸಿದ ಶೇಂಗಾ, ಶೇಂಗಾದಿಂದಲೇ ಮಡಿದ ತರಹೇವಾರಿ ತಿಂಡಿಗಳು ಜೊತೆಗೆ ಜಾತ್ರೆಯ ಇನ್ನಿತರ ಅಂಗಡಿ ಮುಗ್ಗಟ್ಟುಗಳು, ತೊಟ್ಟಿಲು, ಕಡ್ಲೆಪುರಿ, ಬೆಂಡು -ಬತ್ತಾಸು, ಮಕ್ಕಳಿಗೆ ಆಟಿಕೆಗಳು, ಬಲೂನು, ಹೆಣ್ಣು ಮಕ್ಕಳಿಗೆ ಬಳೆ-ಓಲೆ ಇತ್ಯಾದಿ ಎಲ್ಲವೂ ದೊರಕುತ್ತದೆ. ನಮ್ಮ ಮಗಳೆಂತು ಜಾತ್ರೆಯ ಯಾವ ಅಮ್ಯೂಸ್ಮೆನ್ಟ್ ಆಟಗಳನ್ನೂ ಬಿಡದೇ ಎಲ್ಲರೊಳಗೊಂದಾಗಿ ನುಗ್ಗಿ ಆಟವಾಡಿ, ಇಷ್ಟದ ಬಲೂನು ಕೊಡಿಸಿಕೊಂಡು, ಬೇಕಾದ್ದನ್ನು ತಿಂದು ತೇಗಿ ಸಂತೃಪ್ತಿಯಿಂದ ಮರಳುತ್ತಾಳೆ. ಮಕ್ಕಳಿಗೆ ಇಂತಹ ಸಾಂಪ್ರದಾಯಿಕ ಉತ್ಸವಗಳಿಗೆ, ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದರಿಂದ, ಅವರ ಜನರಲ್ ನಾಲೆಡ್ಜ್ ಬೆಳೆಯುವುದಲ್ಲದೆ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 



ಸಿರಿಕಲ್ಚರ್ : ಮಕ್ಕಳ ಕಾರ್ಟೂನಿನಲ್ಲಿ, ಪುಸ್ತಕಗಳಲ್ಲಿ ಹೇಗೆ ಕಂಬಳಿಹುಳುವು ಚಿಟ್ಟೆಯಾಗಿ ಪರಿವರ್ತಿತವಾಗುತ್ತದೆ, ರೇಷ್ಮೆ ಹುಳು ಗೂಡು ಕಟ್ಟಿ ಬೆಳೆದು ಹೊರಬಿದ್ದು ಚಿಟ್ಟೆಯಾಗುವ ಪರಿ ಇತ್ಯಾದಿ ಕುರಿತಾಗಿ ವಿಷಯಗಳು ಪಾಠಗಳು ಓದಲು ಸಿಕ್ಕಿರುತ್ತದೆ. ಇಂತಹ ಅದೆಷ್ಟೋ ಚಿತ್ರ ವಿಚಿತ್ರ ಅದ್ಭುತ ವಿದ್ಯಮಾನಗಳು ಪ್ರಕೃತಿಯಲ್ಲಿ ದಿನನಿತ್ಯ ನಡೆಯುತ್ತಲೇ ಇರುತ್ತದೆ. ನಾವು ದೊಡ್ಡವರು ಸ್ವಲ್ಪ ಗಮನಿಸಿ ಮಕ್ಕಳಿಗೆ ಅಂತವುಗಳನ್ನು ತೋರಿಸಬೇಕಾದ್ದು ನಮ್ಮ ಕೆಲಸ. ಸಂಬಂಧಿಕರೊಬ್ಬರ  ರೇಷ್ಮೆ ಸಾಕಾಣಿಕೆ ಕೃಷಿ ಬಗ್ಗೆ ತಿಳಿದು,ಅದನ್ನು ಮಕ್ಕಳಿಗೆ ತೋರಿಸಲೆಂದೇ  ಕರೆದುಕೊಂಡು ಹೋಗಿದ್ದೆವು. ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants).  ರೇಷ್ಮೆ ಹುಳುವಿನ ಸಾಕಾಣಿಕಾ ಸ್ಟಾಂಡ್ ಗಳು, ಆ ಸ್ಟ್ಯಾಂಡ್ಗಳ ತುಂಬಾ ಸಾವಿರಾರು ಹುಳುಗಳು ಚರ ಚರ ಎಂದು ಶಬ್ದ ಮಾಡಿಕೊಂಡು ಎಲೆಗಳನ್ನುತಿನ್ನುತ್ತಿದ್ದವು. ಎಳೆಯೊಂದನ್ನು ಕ್ಷಣಮಾತ್ರದಲ್ಲಿ ತಿಂದು ಇಲ್ಲವಾಗಿಸುವ ಆ ಸಣ್ಣದೇಹದ ಹುಳುಗಳನ್ನು ನೋಡಿ ಮಕ್ಕಳಿಗೆ ಬಿಟ್ಟು ನಮಗೂ ಕೂಡ ಆಶ್ಚರ್ಯವಾಯಿತು.ಕೃಷಿ ವಿಧಾನಗಳಾದ ಸೊಪ್ಪು ಪೂರೈಕೆ, ಹುಳುವಿನ ಕಸದ ಪ್ರತಿನಿತ್ಯದ ಸ್ವಚ್ಛತೆ, ಹುಳುಗಳಿರುವ ಸ್ಥಳ ಸೋಂಕು ತಾಗದಂತೆ ನೋಡಿಕೊಳ್ಳಬೇಕಾದ ಎಚ್ಚರಿಕೆ, ಸೊಪ್ಪುಗಳನ್ನು ತಿಂದು ದಪ್ಪಗಾಗಿ ಪ್ಯೂಪ ಹಂತಕ್ಕೆ ಬಂದ ನಂತರದ ರೇಷ್ಮೆ ತತ್ತಿಯ ವಿಂಗಡಣೆ ..ಹೀಗೆ ಅದೇಷ್ಟೋ ಬಗೆಯ ವಿಷಯಗಳು ನೋಡಲು ಕೇಳಿ ತಿಳಿದುಕೊಳ್ಳಲು ನಮಗೆ ಸಿಕ್ಕಿತು. ಮಕ್ಕಳಿಗೆ ಎಲ್ಲಾ ವೈಜ್ಞಾನಿಕ ವಿದ್ಯಮಾನಗಳೂ ಅರ್ಥವಾಗಬೇಕೆಂದಿಲ್ಲ ಆದರೆ ಅವರ ಬುದ್ಧಿ ಸಾಮರ್ಥ್ಯದಷ್ಟು ವಿಷಯಗಳನ್ನು ತಿಳಿದು ಪ್ರಶ್ನೆ ಮಾಡಿದರೂ ಸಾಕು ನಾವು ಗೆದ್ದಂತೆ. ಮಕ್ಕಳ ಪ್ರಶ್ನೆಗಳಿಗೆ ಅನುಮಾನಗಳಿಗೆ ಗೊತ್ತಿದ್ದಷ್ಟು ಉತ್ತರಿಸುತ್ತಾ ಎರಡು ತಾಸಿನ ಪಿಕ್ನಿಕ್ ಮುಗಿಸಿ ಬಂದೆವು.


ಮಕ್ಕಳಿಗೆ ಹೊಸತನ್ನುತೋರಿಸಲು, ಸಂತೋಷ ಪಡಿಸಲು ಯಾವುದೇ ಪ್ರಸಿದ್ಧ ಸ್ಥಳಗಳಿಗೇ ಪ್ರವಾಸ ಹೋಗಬೇಕೆಂದಿಲ್ಲ. ಬಿಡುವಿನ ಸಮಯ ಹೊಂದಿಸಿಕೊಂಡು, ಮಕ್ಕಳು ಫ್ರೀ ಆಗಿ ಓಡಾಡಿಕೊಂಡಿರುವ ಸ್ಥಳ ಅಥವಾ ಆಸಕ್ತಿಯಿಂದ ಹೊಸತೇನೋ ಕಂಡುಕೊಳ್ಳುವ ಸ್ಥಳಕ್ಕೆ ಕರೆದುಕೊಂಡುವ ಪ್ಲಾನ್ ಮಾಡಬಹುದು. ಹತ್ತಿರದ ಕೆರೆದಂಡೆ,ಪಾರ್ಕ್, ತೋಟ, ಗದ್ದೆ, ಫಾರ್ಮ್ಹೌಸ್, ಸಣ್ಣ ಪುಟ್ಟ ಫ್ಯಾಕ್ಟರಿ ಹೀಗೆ ಎಲ್ಲೆಲ್ಲಿ ಅವಕಾಶ ಮತ್ತು ಅನುಮತಿ ದೊರೆಯುತ್ತದೆಯೋ ಅಂತಹ ಸಾಧ್ಯವಾದಷ್ಟರ ಮಟ್ಟಿಗೆ ಪ್ರಾಕೃತಿಕ ಸ್ಥಳಗಳಿಗೆ ಮಕ್ಕಳ ಮನಸ್ಸನ್ನು ತೆರೆದಿಡುವುದು ಅವರ ಬೌದ್ಧಿಕ ಬೆಳವಣಿಗೆಗೆ ಉತ್ತಮ ಪೋಷಣೆ. 
ಪ್ರವಾಸಗಳು ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಜೀವನ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿಗೆ ನಾವು ಬಾಯಲ್ಲಿ ಹೇಳುವ ವಿಷಯಗಳಿಗಿಂತಲೂ ಅವರೇ ಸ್ವತಃ ಭೌತಿಕವಾಗಿ ಕಂಡು, ಅನುಭವಿಸುವ ವಿಷಯಗಳು ಬಲು ಬೇಗ ಅರ್ಥವಾಗುತ್ತದೆ . ಕೋಶ ಓದಿ ನೋಡು; ದೇಶ ಸುತ್ತಿ ನೋಡು ಎನ್ನುವಂತೆ ಓದುವದರಷ್ಟೇ ಜ್ಞಾನ ಸಂಪಾದನೆ, ನಾಲ್ಕು ಕಡೆ ತಿರುಗಾಡಿ ಸುತ್ತಮುತ್ತಲಿನದೆಲ್ಲ ಗಮನಿಸಿದಾಗಲೂ ಸಿಗುತ್ತದೆ. ಪುಟ್ಟ ಮಕ್ಕಳನ್ನು ತಿರುಗಾಡಿಸಲು ಕರೆದುಕೊಂಡು ಹೋದಾಗ ನಮ್ಮ ಅರಿವಿಗೂ ಮೀರಿ ಅವರು ಸಾಕಷ್ಟು ವಿಚಾರಗಳನ್ನು ಗಮನಿಸಿ ತಮ್ಮ ತುಂಬಿಕೊಳ್ಳುತ್ತಾರೆ. 

ಮಕ್ಕಳ ಟ್ರಿಪ್ ಎಂದರೆ ಕೇವಲ ತೆಗೆದುಕೊಂಡು ಹೋಗುವ ಸಾಮಾಗ್ರಿಗಳ ತಯಾರಿ ಮಾತ್ರವಲ್ಲ. ಅದೊಂದು ಮನಸ್ಥಿತಿಯ ತಯಾರಿ . ಮಕ್ಕಳೊಂದಿಗಿನ ಪ್ರವಾಸ ತಯಾರಿಗೆ ಹೀಗೊಂದಷ್ಟು ಟಿಪ್ಸ್ 

  •  ಮೊಟ್ಟಮೊದಲಿಗೆ ನಮ್ಮ ಮಕ್ಕಳು ನಮ್ಮ ಮಾತನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವರಿದ್ದರೆ, ನಾವು ಅವರನ್ನು ಕರೆದುಕೊಂಡು ಹೋಗುತ್ತಿರುವ ಜಾಗದ ಕುರಿತಾಗಿ ಸಂಕ್ಷಿಪ್ತವಾಗಿ ತಿಳಿಸಿ.
  •  ಮಕ್ಕಳ ಬ್ಯಾಗ್ ಅವರೇ ತಯಾರಿ ಮಾಡಿಕೊಳ್ಳಲಿ. 
  • ಪ್ರವಾಸಿ ಸ್ಥಳದ ಕುರಿತು ಕನಿಷ್ಠ ಮಾಹಿತಿ ಸಂಗ್ರಹ ಮಾಡಿಕೊಳ್ಳಿ ಜೊತೆಗೆ  ಮಕ್ಕಳನ್ನು ಕರೆದುಕೊಂಡು ತಲುಪಬೇಕಾದ ಸ್ಥಳದ ಮಧ್ಯೆ ಸಿಗಬಹುದಾದ/ತೋರಿಸಬಹುದಾದ ಜಾಗಗಳು, ವಿಷಯಗಳ ಕುರಿತಾಗಿ ನಾವು ಒಂದು ಪಟ್ಟಿ ಮಾಡಿಕೊಳ್ಳಬೇಕು. ಆಗ ಗಮ್ಯ ಒಂದೇ ಅಲ್ಲದೆ, ಇನ್ನೂ ಸಾಕಷ್ಟು ಹೊಸ ವಿಷಯಗಳು  ಅನುಭವಗಳನ್ನು ಮಕ್ಕಳಿಗೆ ನೀಡಬಹುದು.
  • ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಆಚರಣೆಗಳು ಸಂಪ್ರದಾಯಗಳು ಇರುತ್ತವೆ. ಸ್ಥಳೀಯ ಸಂಪ್ರದಾಯಗಳ ಕುರಿತಾಗಿ ಗೌರವ ಮತ್ತು ಕೆಲವು ಪ್ರವಾಸೀ ಸ್ಥಳಗಳ  ಬದ್ಧರಾಗುವುದನ್ನು ನಾವೂ ಪಾಲಿಸಿ ಮಕ್ಕಳಿಗೂ ಪಾಲಿಸಲು ತಿಳಿಸಬೇಕು. 
  • ಮಕ್ಕಳು ಪ್ರಯಾಣಕ್ಕೆ ತೊಂದರೆ ಕೊಡುತ್ತಾರೆಂಬ ಕಾರಣಕ್ಕೆ ಖಂಡಿತ ಮೊಬೈಲ್ ಅಥವಾ ಇನ್ಯಾವುದೇ ಸ್ಕ್ರೀನ್ ಅವರ ಕೈ ಹಿಡಿಸಿ ಕೂರಿಸಬೇಡಿ. ತಲೆ ಕೆಳಗೆ ಹಾಕಿ ಸ್ಕ್ರೀನ್ ಗೆ ಕಣ್ಣಿಟ್ಟುಕೊಂಡರೆ ಮಕ್ಕಳು ಸುತ್ತಮುತ್ತಲಿನ ಪರಿಸರ, ಆಗುಹೋಗುಗಳು ಯಾವುದನ್ನೂ ನೋಡಿ ಸಂಭ್ರಮಿಸಲಾಗುವುದಿಲ್ಲ. ಅದರ ಬದಲು ಮಕ್ಕಳನ್ನು ಎಂಗೇಜ್ ಮಾಡಲು ಒಂದಷ್ಟು ಮೌಖಿಕ ಆಟಗಳನ್ನು ಯೋಚಿಸಿಕೊಳ್ಳಿ. 

  • ಸಾಧ್ಯವಾದಷ್ಟು ಮನೆಯಿಂದ ಆಹಾರವನ್ನು ತಯಾರಿಸಿಕೊಂಡು ಕೊಂಡೊಯ್ಯಿರಿ. ಆಗ ಮಕ್ಕಳು ಹಸಿವಿಗೆ ಹೊರಗಡೆಯ ಪೊಟ್ಟಣದ ಆಹಾರವನ್ನು ತಿನ್ನುವುದನ್ನು ತಪ್ಪಿಸಬಹುದು.  ಕೊನೆ ಪಕ್ಷ ನೀರನ್ನು ಕೊಂಡೊಯ್ಯುವುದನ್ನಾದರೂ ಮರೆಯಬೇಡಿ. 

  • ಮನೆಗೂ ಪ್ರವಾಸ ಹೋದ ಸ್ಥಳಕ್ಕೂ ಇರುವ ಭೌಗೋಳಿಕ ವ್ಯತ್ಯಾಸ, ಹೋದ ಸ್ಥಳದಲ್ಲಿ ಅಲ್ಲಿನ ವ್ಯವಸ್ಥೆಗಳಿಗೆ ತಕ್ಕಂತೆ ನಮ್ಮನ್ನು ನಾವೇ ಹೊಂದಿಸಿಕೊಳ್ಳುವ ಅಡ್ಜಸ್ಟ್ ಆಗುವ ಸ್ವಭಾವ, ಪ್ರಾಣಿ ಪ್ರಕ್ಷಿ ಜೀವಿಗಳೆಡೆಗೆ ಪ್ರೀತಿ, ಕಾಳಜಿ, ನಮಗೆ ದೊರೆತಿರುವ ಸುಂದರ ಪ್ರಪಂಚದ ಸಂಪನ್ಮೂಲಗಳ ಕುರಿತಾಗಿ ಒಂದಷ್ಟು ವಿಷಯಗಳನ್ನು ಮಾತಿನ ಮೂಲಕ ಹಂಚಿಕೊಳ್ಳಿ 
  • ಪ್ರವಾಸ ಸ್ಥಳ ವನ್ನು ಸ್ವಚ್ಛವಾಗಿಡುವುದು ಸರ್ಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ  ಆಯಾ ಊರಿನವರಷ್ಟೇ ಅಲ್ಲ, ಮುಖ್ಯವಾಗಿ ನಮ್ಮ ಜವಾಬ್ಧಾರಿ ಕೂಡ. ಹಾಗಾಗಿ ಮಕ್ಕಳೆದುದುರು ಕಂಡಕಂಡಲ್ಲಿ ಕಸ ಎಸೆದು ಕುಬ್ಜರಾಗಬೇಡಿ. ಸಣ್ಣ ಮಕ್ಕಳು ನಮ್ಮ ಅನುಯಾಯಿಗಳಾಗಿರುತ್ತಾರೆ ಕಸ-ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಯನ್ನು ಹುಡುಕಿ ಹಾಕಿರಿ ಮತ್ತು ಮಕ್ಕಳಿಗೂ ಕಲಿಸಿರಿ. 







   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ