ಬುಧವಾರ, ಜುಲೈ 3, 2024

ಕಾಯಾಲ್ಕಾಪೀ..

ಕಾಯಾಲ್ಕಾಪೀ..

ಮಳೆಗಾಲ, ಕಾಫೀ ಪ್ರಿಯರಿಗೆ ಒಂತರ ಸುಗ್ಗಿ ಕಾಲ. ಸಾಧ್ಯವಾದಷ್ಟು ಸಾತ್ವಿಕ ಆಹಾರದೆಡೆಗೆ ಹೋಗಬೇಕು ಎಂದು, ಕಾಫೀ ಟೀ ಅನ್ನು ಕಮ್ಮಿ ಮಾಡಬೇಕು ಎಂದು ಪ್ರಯತ್ನಿಸಿದರೂ ಕೂಡ, ಹೇಳಿ ಕೇಳಿ ಮಲೆನಾಡೋರು ನಾವು, ಬ್ಲಡ್ಡಲ್ಲೇ ಕಾಫೀ ಹರಿತದೆ ಎನ್ನುವ ಜನ ನಾವು. ಸಸ್ಯಜನ್ಯ ಆಹಾರ ಪದ್ಧತಿ ಅನುಸರಿಸುತ್ತಿರುವ ನಾನು, ಆಗೀಗ ಕಾಫೀ ಹುಚ್ಚು ಹತ್ತಿದ ಕೂಡಲೇ, ನನಗಾಗಿ ಅತ್ಯಂತ ಪ್ರೀತಿಯಿಂದ ತೆಂಗಿನ ಕಾಯಿ ಹಾಲಿನ ಕಾಫಿ ಮಾಡಿಕೊಳ್ಳುತ್ತೇನೆ. ರೆಸಿಪಿ ಅಕ್ಕನಿಂದ ಬಳುವಳಿ. ಪ್ರತಿ ಸಲ ಮಾಡಿಕೊಂಡು ಕುಡಿದಾಗಲೂ ಖುಶಿ ಖುಶಿ ಫೀಲ್ ಆಗತ್ತೆ.. ಕುಡಿದ ಹತ್ತು ನಿಮಿಷ, ಕಾಫಿಯದ್ದೇ ಗುಂಗು.ಹೊಸ ಬಗೆ, ಯಾರಿಗಾದರೂ ಉಪಯೋಗಕ್ಕೆ ಬಂದೀತು ಎಂದು ಹಂಚಿಕೊಳ್ಳುತ್ತಿದ್ದೇನೆ. 


ಮೊದಲಿಗೆ ತೆಂಗಿನ ತುರಿ ಅಥವಾ ಕಾಯಿಯ ಹೋಳನ್ನು ಹೆಚ್ಚಿ, ಸ್ವಲ್ಪವೇ ನೀರನ್ನು ಹಾಕಿ ಸಂಪೂರ್ಣ ನುಣ್ಣಗಾಗುವವರೆಗೆ ಮಿಕ್ಸರ್ ಗ್ರಯಂಡರ್ನಲ್ಲಿ ಚೆನ್ನಾಗಿ ಅರೆದುಕೊಳ್ಳಬೇಕು. ನಂತರ ಪಾತ್ರೆಯೊಂದಕ್ಕೆ ಆ ನುಣ್ಣನೆಯ ಪೇಸ್ಟ್ ಅನ್ನು ವರ್ಗಾಯಿಸಿ, ಹಾಲಿಗಿಂತಲೂ ಸ್ವಲ್ಪ ಜಾಸ್ತಿ ತೆಳುವಾಗುವಷ್ಟು ನೀರನ್ನು ಸೇರಿಸಬೇಕು. ಅರ್ಧ ಗರಟೆ ತೆಂಗಿನ ಕಾಯಿಯಲ್ಲಿ ಅರ್ಧ ಲೀಟರ್ನಷ್ಟು ಹಾಲು ಮಾಡಬಹುದು. ಈ ದ್ರವವನ್ನು, ಸಾಟಿ ಪಂಚೆ ಎಂದು ಕರೆಯಲಾಗುವ ತೆಳುವಾದ ಶುದ್ಧವಾದ ಕಾಟನ್ ಬಟ್ಟೆಯ ಮೂಲಕ ಸೋಸಿದರೆ (ಈಗೆಲ್ಲ ಅಮೆಜಾನ್ ನಲ್ಲಿ ಸ್ಟ್ರೇನರ್ ಬ್ಯಾಗ್, ಮುಸ್ಲಿನ್ ಕ್ಲಾಥ್ ಬ್ಯಾಗ್ ಎನ್ನುವ ಸೋಸುವ ಬಟ್ಟೆಯ ಬ್ಯಾಗ್ ಕೂಡ ಸಿಗುತ್ತದೆ) ಶುದ್ಧವಾದ ಬಿಳಿಯಾದ ಕಾಯಿ ಹಾಲು ರೆಡಿ! 

ಇನ್ನೊಂದೆಡೆ, ಒಳ್ಳೆಯ ಫಿಲ್ಟರ್ ಕಾಫಿ ಪೌಡರ್ ಫಿಲ್ಟರ್ ಗೆ ಹಾಕಿ, ಘಮ್ಮೆನ್ನುವ ಫ್ರೆಶ್ ಬಿಸಿಬಿಸಿ ಡಿಕಾಕ್ಷನ್ಮಾಡಿಕೊಳ್ಳಬೇಕು.ಒಳ್ಳೆಯ ಕಾಫೀ ಪೌಡರ್ ಈಸ್ ಮಸ್ಟ್. 

ಒಂದು ವಿಷಯ ಎಂದರೆ, ಈ ಕಾಯಿ ಹಾಲನ್ನು ದನದ ಹಾಲಿನಂತೆ ಕುದಿಸಲು ಬರುವುದಿಲ್ಲ. ನಮಗೆ ಬೇಕಾದಷ್ಟು ಹಾಲನ್ನು ಪಾತ್ರೆಗೆ ಹಾಕಿ ಸ್ವಲ್ಪವೇ ಬೆಚ್ಚಗೆ ಮಾಡಿ, ಅದಕ್ಕೆ, ಬಿಸಿಬಿಸಿ  ಆಗ ತಾನೇ ಘಮಗುಡುತ್ತಿರುವ ಕಾಫೀ ಡಿಕಾಕ್ಷನ್ ಬೆರೆಸಿ ಎತ್ತಿ ಹೊಯ್ದರೆ ಅದ್ಭುತವಾದ ಕಾಫೀ ರೆಡಿ.. ಕಾಫಿಗೆ ಸಿಹಿಬಳಸುವವರು ನೀವಾದಲ್ಲಿ, ಸ್ವಲ್ಪವೇ ಸ್ವಲ್ಪ ಬೆಲ್ಲದ ಹುಡಿಯನ್ನು ನಿಮ್ಮ ರುಚಿಗೆ ತಕ್ಕಷ್ಟುಸೇರಿಸಿಕೊಳ್ಳಬಹುದು... 

ಇಂತಿಪ್ಪ ಬಿಸಿ ಬಿಸಿ ಕಾಫಿ ಗಂಟಲಲ್ಲಿ ಗುಟುಕು ಗುಟುಕಾಗಿ ಇಳಿಯುತ್ತಿದ್ದರೇ.. 

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.. 

ಎಷ್ಟೆಲ್ಲಾ ಕೆಲಸ ಎನಿಸಿತಾ? ಆದರೆ ಈ ಕಾಫಿಯ ವಿಶೇಷತೆ ಲ್ಯಾಕ್ಟೋ ಇಂಟಾಲರೆನ್ಸ್ ಇರುವವರಿಗೆ, ಕಾಫಿ ಮಿಸ್ಸಿಂಗ್ ಎನಿಸುವುದಿಲ್ಲ.ಮನೆಯಲ್ಲಿ ಹಾಲಿಲ್ಲದಾಗ ನೆಂಟರು ಬಂದರೆ ಏನು ಮಾಡುವುದು ಎಂಬ ತಲೆಬಿಸಿಯಿಲ್ಲ..ಮತ್ತೇನೇನು ಲಾಭ? ಹಾಲನ್ನು ಒಲೆ ಮೇಲೆ ಕಾಯಲು ಇಟ್ಟು ಅಲ್ಲೆಲ್ಲೋ ಟಿವಿ ನೋಡಲು ಹೋದೆ, ಉಕ್ಕಿ ಚೆಲ್ಲಿದ ಮೇಲೆ ವಾಪಸು ಬಂದೆ ಎಂಬ ಸನ್ನಿವೇಶ ಇಲ್ಲಿಲ್ಲ. ಅಲ್ಲಿಯೇ ನಿಂತು ಪ್ರಾರಂಭದಿಂದ ಕೊನೆಯವರೆಗೆ ನಾಜೂಕಾಗಿ ಮಾಡಬೇಕಾದ , ಒಂದು ಸಂಪೂರ್ಣ ಮೈಂಡ್ಫುಲ್ ಆಕ್ಟಿವಿಟಿ. ಕುಡಿದಾದ ಮೇಲೆ ದೇಹ ಮತ್ತು ಮನಸ್ಸು ಎರಡೂ ಆಕ್ಟಿವ್ ಎನಿಸುವ ಕ್ರಿಯೇಟಿವಿ..

ಎಲ್ಲರಿಗೂ ಒಮ್ಮೆಲೇ ಇದರ ರುಚಿ ಒಗ್ಗುತ್ತದೆ ಎಂದೇನಲ್ಲ..ಕ್ಯಾಲೊರೀಸ್ಗಳ ಲೆಕ್ಕಾಚಾರವಿದ್ದವರು ಅತಿಯಾಗಿ ಕಾಯಿಯ ಹಾಲನ್ನು ಬಳಸುವುದೂ ಸರಿಯಲ್ಲ. ಆದರೆ ಅಪರೂಪಕ್ಕೊಮ್ಮೆ, ನಮ್ಮನ್ನು ನಾವೇ ಪ್ರೀತಿಸಿಕೊಳ್ಳಲು ಸಂತೋಷವಾಗಿಡಲು, ಸುಂದರ ಅನುಭೂತಿ ಬೇಕು ಎಂದರೆ ಯೆಸ್ ಇದನ್ನು ಟ್ರೈ ಮಾಡಿ ನೋಡಿ..  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ