ಭಾನುವಾರ, ಮಾರ್ಚ್ 3, 2024

ಕೆಲವು ಸಿಹಿಗಳು ಅದೆಷ್ಟು ಮಧುರ!

ಸಾಗರಕ್ಕೆ ಹೋದಾಗ, ಸ್ನೇಹಿತೆಯ ಮನೆಗೆ ಭೇಟಿ ನೀಡುವುದಿತ್ತು. ಅದೂ ನಾನು, ನನ್ನ ಬಾಲ್ಯವನ್ನು ಕಳೆದ ಶ್ರೀನಗರ ಏರಿಯಾದಲ್ಲೇ ಇರುವವರ ಮನೆಗೆ. ಸ್ನೇಹಿತೆಯ ಮಗನಿಗೆ, ಹತ್ತಿರದಲ್ಲಿದ್ದ ಅಂಗಡಿಯಲ್ಲಿ ಹುರಿದ ಶೇಂಗಾ ತೆಗೆದುಕೊಳ್ಳಲು ಹೋದೆ. ಅದು ನಾವೆಲ್ಲ ಸಣ್ಣವರಿದ್ದಾಗ ಹೋಗುತ್ತಿದ್ದ ದಿನಸಿ ಅಂಗಡಿ -  "ವೆಂಟಕೇಶನ ಅಂಗಡಿ". ಅಂಗಡಿಯ ಮುಂದೆ ವಯಸ್ಸಾದ ವ್ಯಕ್ತಿ ಕುಳಿತಿದ್ದರು. ಅದು ನಮ್ಮ ಗಣೇಶಣ್ಣ ಅಂಗಡಿಯ ಮಾಲೀಕ. ಬೇಕಾದ ವಸ್ತುವನ್ನು ಕೇಳಿ ಪಡೆದುಕೊಂಡು, "ನಾನ್ಯಾರು ಗೊತ್ತಾಯ್ತ?" ಎಂದು ಕೇಳಿದೆ, ಸಂಜೆಯ ಮುಸುಕಿಗೆ ಅವರಿಗೆ ನನ್ನ ಗುರುತು ಸಿಗಲಿಲ್ಲ. ಹೊರಗಡೆ ಬಂದು ಬೀದಿ ದೀಪದ ಕಡೆಗೆ ನನ್ನ ತಿರುಗಿಸಿ, ಚಹರೆ ಹುಡುಕಲು ಪ್ರಯತ್ನಿಸಿದರು, ಗೊತ್ತಾಗಲಿಲ್ಲ. "ಗಣೇಶಣ್ಣ ನಾನು ಸೌಮ್ಯ, ಬಿ ಏನ್ ರಾಮಚಂದ್ರ ಅವ್ರ ಮಗಳು, ಯಶೋದಕ್ಕ ನ  ಮಗಳು, ಎರಡನೇವಳು" ಎಂದು ಹೇಳಿದ್ದೆ ತಡ, "ಅಯ್ಯೋ ಹುಡುಗಿ ಗುರ್ತೇ ಸಿಗಲಿಲ್ಲ ನಂಗೆ ಮೊದಲು, ಮಾರಾಯ್ತಿ ಎಷ್ಟು ಟೈಮ್ ಆಯ್ತು ನಿನ್ನ ನೋಡದೆ, ಆಗಿದ್ದಂಗೆ ಇದೀಯಲ ಮಾರಾಯ್ತಿ ಯಾವ್ದೋ ಸ್ಕೂಲ್ ಹುಡುಗಿ ಅಂತ ಅಂದುಕೊಂಡೆ.." ಎಂಬಿತ್ಯಾದಿ ಆಶ್ಚರ್ಯಚಕಿತ ಮಾತುಗಳೆಲ್ಲ ಪುಂಖಾನುಪುಂಖವಾಗಿ ಒಂದೇ ಉಸಿರಿಗೆ ಹೇಳುತ್ತಾ ಹೋದರು. ಅವರ ಮುಖದಲ್ಲಿ ಹಳೆಯ ಗುರ್ತದ ಜನ ಸಿಕ್ಕು ಮಾತನಾಡಿಸಿದ ಖುಷಿ ಎದ್ದು ಕಾಣುತ್ತಿತ್ತು. "ಇಲ್ಲಿ ಬಾಯಿಲ್ಲಿ, ನೀನು ಇಷ್ಟು ಪುಟ್ಟುಗಿದ್ದೆ ನಮ್ಮ ಅಂಗಡಿಗೆ ಬರ್ತಿದೆ, ಮಹಾಲಕ್ಟೊ ಮತ್ತೆ ಮ್ಯಾಂಗೋ ಬೈಟ್ ಕೇಳ್ತಿದ್ದೆ ನೀನು. ಇಕೋ ಈಗ ಈ ಚಾಕಲೇಟ್ ಬರತ್ತೆ ಮಹಾಲಕ್ಟೊಕಿಂತ ಸೂಪರ್ರು,  ಎಂದು ಯಾವುದೊ ಒಂದು ಗಾಜಿನ ಬಾಟಲಿಯ ತೆಗೆದು ಬೇಡ ಎಂದರೂ ಎತ್ತಿ ಕೊಟ್ಟರು. ಜೆಮ್ಸು ಕೊಡ್ತೀನಿ ಇರು ಒಂದು ಪ್ಯಾಕೆಟ್ಟು ಜೆಮ್ಸು ಪ್ಯಾಕೆಟ್ಟು ಹೆಸರು ಮಾತ್ರ ಬರೆದಿಡ್ತಿದ್ದೆ ನೀನು ಸಾಮಾನು ಲಿಸ್ಟ್ ಅಲ್ಲಿ ನಿಮ್ಮ ಅಮ್ಮೋರು ಬಂದು ತಗೊಂಡ್ ಹೋಗೋರು. ಇಲ್ನೋಡು ಜೀರಿಗೆ ಪೆಪ್ಪರಮೆಂಟು ೫ ರುಪಾಯಿಗೆ ಕಟ್ಟಿಸಿಕೊಳ್ತಿದ್ದೆ ತಗೋ ತಗೋ.. ನೀನು ಇಲ್ಲಿ ಕುರ್ಚಿಮೇಲೆ ಕೂತು ಎಲ್ಲ ತಿಂದು ಖಾಲಿ ಮಾಡ್ಕಂಡ್ ಹೋಗ್ತಿದ್ದೆ. ಇದೇ ಈ ಶೇಂಗಾ ಚಿಕ್ಕಿ..  ನಿಂಗೆ ನೆನಪಿದ್ಯಾ ಶೇಂಗಾ ಚಿಕ್ಕಿ ಒಂದು ಎರಡೂ ಪೀಸು ಎಲ್ಲ ತಗಂಡ್ರೆ ರಗಳೆ ಮಾಡ್ತಿದ್ದೆ ನೀನು, ೫-೬ ಪೀಸು ಕಟ್ಟಬೇಕಿತ್ತು ಪೇಪರು ಕೊಟ್ಟೆಗೆ ನಿಂಗೆ.., ಹುರಿದ ಶೇಂಗಾ ಕಟ್ಟಿಸ್ಕೊಂಡಿಯಲ.. ಯಾರೋ ಅಂದ್ಕೊಂಡ್ನಲ ಮಾರಾಯ್ತಿ..ಶೇಂಗಾ ತಿನ್ನೋದು ಬಿಟ್ಟಿಲ್ಲ ನೀನಿನ್ನವೇ? ತಗೋ ಈ ಮಿಕ್ಸ್ಚರ್ರು ಅಮ್ಮ ಕಟ್ಟುಸ್ಕೊಂಡು ಹೋಗೋರು, ಎರಡು ದಿನಕ್ಕೆ ಖಾಲಿ ಅಂತಿದ್ರು.. ತಗೋ ತಗೋ ಕೈ ಚಾಚು ನೀನು, ಹಿಡಿ ತಿನ್ನು.. ಅವಾಗ ಹೆಂಗಿದ್ಯೋ ಹಂಗೆ ಇದೆ ನೋಡು ರುಚಿ. ಆಮೇಲೆ ಈಗ ಖರ್ಜೂರದ ಸೀಸನ್ನು, ಈ ಸೀಸನ್ನಿನ್ನಲ್ಲಿ ನಿನ್ನ ಅಪ್ಪಾಜಿ ಖಾಯಂ ಒಯ್ಯೋರು, ಸೀಸನ್ನು ಮುಗ್ಯವರೆಗೂ, ನಮ್ಮ ಅಂಗಡಿಗೆ ಬಂದ್ರು ಅಂದ್ರೆ ನಾನು ಖರ್ಜೂರ ಕಟ್ಟದೇ.. ಇಕ ಇಕ ತಿನ್ನು ಬಾಯಿಗ್ ಹಾಕ್ಕೋ.. " ಎನ್ನುತ್ತಾ, literally ದೇವರಿಗೆ ನೈವೇದ್ಯ ಮಾಡಿದಂತೆ ನನಗೆ ಎಲ್ಲಾ ಡಬ್ಬಿಯಿಂದ ಎಲ್ಲಾ ತಿಂಡಿ ತಿನಿಸುಗಳನ್ನೂ ತೆಗೆದು ರುಚಿ ನೋಡಲು ತೆಗೆದು ಕೊಡುತ್ತ ಹೋದರು ಗಣೇಶಣ್ಣ! ಪ್ರೀತಿ ತುಂಬಿ ಸುರಿಯುತ್ತಿರುವ ಭಾವವದು! ದಿನಕ್ಕೆ ನೂರಾರು ಗ್ರಾಹಕರನ್ನು ಕಾಣುವ ಅವರು, ೩೦ ವರ್ಷಗಳ ಕೆಳಗೆ ಅಂಗಡಿಗೆ ಬರುತ್ತಿದ್ದ ಪುಟ್ಟ ಹುಡುಗಿಯ ಇಷ್ಟವಾದ ತಿಂಡಿಗಳನ್ನು ನೆನಪಿಟ್ಟುಕೊಂಡು, ಅವೆಲ್ಲವನ್ನೂ ತಮ್ಮ ಮನಸ್ಸಿನ ಸ್ಮೃತಿ ಪಟಲದಿಂದೆತ್ತಿ ಅದೆಷ್ಟು ಗಾಢವಾದ ಪ್ರೀತಿಯಿಂದ ಅದೇ ತಿಂಡಿಗಳನ್ನು ಬೇಡವೆಂದರೂ ತಿನ್ನು ತಿನ್ನು ಎಂದು ಒತ್ತಾಯಿಸುವ ಬಗೆ ಅದೆಷ್ಟು ಪ್ಯೂರ್! ಅಲ್ಲಿಗೂ ಸಮಾಧಾನವಿಲ್ಲ, ಮತ್ತೆ ಪಕ್ಕದಲ್ಲಿರುವ ತಮ್ಮ ಮನೆಗೆ ಹೋಗಿ, ಹೆಂಡತಿಯ ಕರೆದು, ನನ್ನ ಗುರುತು ಹಿಡಿಯಲು ತಿಳಿಸಿ ಕಾಡಿಸಿ, ನಮ್ಮ ಹುಡುಗಿ ಸೌಮ್ಯ ಇವಳು ಇನ್ನುವಲ್ಲಿ "ನಮ್ಮ" ಎನ್ನುವ ಆ ಪ್ರೀತಿಯ ಹಕ್ಕಿಗೆ ಮಣಿದು, ಮತ್ತಲ್ಲಿಯೇ ಕೂತು ೨೦ ನಿಮಿಷ ಮಾತಾಡಿ ಕಥೆ ಹೊಡೆದು, ಗಣೇಶಣ್ಣ ಕಟ್ಟಿಕೊಟ್ಟ ಖರ್ಜೂರವನ್ನು ಕೊಂಡು ತಂದೆ. ಖರ್ಜೂರ ತಿನ್ನುತ್ತಿದ್ದೆನೆ ಈಗ, ರುಚಿ ಮತ್ತು ಸಿಹಿ ಅದ್ಭುತ.. ಸಹಜವಾಗಿಯೇ ಇಷ್ಟು  ಸಿಹಿಯಿತ್ತೋ.. ಅಥವಾ ನನಗೆ ಹಾಗೆ ಅನ್ನಿಸುತ್ತಿದೆಯೋ ನಾ ಕಾಣೆ.. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ