ಮಂಗಳವಾರ, ಮಾರ್ಚ್ 5, 2024

ಜಲಕ್ಷಾಮ..ತಪ್ಪಿಸಿಕೊಂಡರೆ ಆರಾಮ

ನೀರಿನ ಮಹತ್ವ ತಿಳಿಯುವುದೇ ನೀರಿನ ಕೊರತೆಯಾದಾಗ. ವರ್ಷಪೂರ್ತಿ ನೀರಿನ ಪ್ರಾಮುಖ್ಯತೆ ಬಗ್ಗೆ ಅರಿಯದೆ, ಬೇಕಾಬಿಟ್ಟಿ ಬಳಸಿ ಬೇಸಿಗೆಗಾಲದಲ್ಲಿ ನೀರಿಲ್ಲದೆ ಒದ್ದಾಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಎಷ್ಟೇ ದೊಡ್ಡವರಾಗಿದ್ದರೂ, ನೀರಿನ ಸದ್ಬಳಕೆ ಕುರಿತಾದ ಜ್ಞಾನ ಎಲ್ಲರಿಗೂ ಇರುವುದಿಲ್ಲ. .. ನೀರನ್ನು ಯೋಚಿಸಿ ಬಳಸುವುದು ಕೇವಲ ಜಲಕ್ಷಾಮದ ಸಮಯದಲ್ಲಿನ ಚಟುವಟಿಕೆಯಾಗದೆ ಅದೊಂದು ಜೀವನಶೈಲಿ ಆಗಬೇಕು. ಒಂದಷ್ಟು ಟಿಪ್ಸ್ ಬೇಸಿಗೆಯಲ್ಲಿ ನೀರನ್ನು ಹೇಗೆ  ಹಿತಮಿತವಾಗಿ ಬಳಕೆ ಮತ್ತು ಮರುಬಳಕೆ ಮಾಡಬಹುದು ಎಂಬುದುದರ ಕುರಿತಾಗಿ. 


ಅಂಗಳ ಮತ್ತು ವಾಹನಗಳ ಸ್ವಚ್ಛತೆ :

ನಿತ್ಯ ರಂಗೋಲಿ ಹಾಕುವ ಜಾಗವನ್ನಷ್ಟೇ ಸಾರಿಸಿ ಉಳಿದ ಜಾಗವನ್ನು ಗುಡಿಸಿ, ವಾರಕ್ಕೊಮ್ಮೆ ಸ್ಪ್ರಿಂಕ್ಲರ್ ಅಳವಡಿಸಿದ ಪೈಪಿನಿಂದ ಇಡೀ ಅಂಗಳವನ್ನು ನೀರಿನಿಂದ ಚೊಕ್ಕವಾಗಿ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬಹುದು. 

ಕಾರು ಬೈಕುಗಳನ್ನು ಪ್ರತೀ ಸಲವೂ ಪೈಪ್ ನೀರಿನಿಂದ ತೊಳೆದು ಹೆಚ್ಚಿನ ನೀರನ್ನು ಪಾಲುಗೊಳಿಸುವುದಕ್ಕಿಂತ, ಬಕೆಟ್ ನೀರಿನಲ್ಲಿ ಬಟ್ಟೆಯ ಬಳಸಿ ಧೂಳನ್ನು ಒರೆಸಿ ತೆಗೆಯಬಹುದು. ಅವಶ್ಯಕತೆ ಇದ್ದರೆ ಜೆಟ್ ಸ್ಪ್ರೇಯರ್ ಬಳಸಿದರೆ ಗಾಡಿ ತೊಳೆಯಲು ಕಡಿಮೆ ನೀರು ಸಾಕು

ಅಡುಗೆ ಮನೆಗೆ ಬಳಸುವ ನೀರು  :

ತೊಳೆಯಲು ಇಡುವ ಪಾತ್ರೆ ಒಣಗಿದಷ್ಟೂ ಅದನ್ನು ತಿಕ್ಕಿ ತೊಳೆಯಲು ನೀರು ಜಾಸ್ತಿ ಬೇಕು. ಹಾಗಾಗಿ ಸಿಂಕಿನಲ್ಲಿ, ಒಂದೊಂದೇ ಪಾತ್ರೆಯನ್ನು ತೊಳೆಯುವ ಬದಲು, ತೊಳೆಯುವ ಪಾತ್ರೆಯ ಮೇಲೆ ಕೈತೊಳೆಯುವ ನೀರು, ತರಕಾರಿ ಅಕ್ಕಿ ತೊಳೆಯುವ ನೀರು ಬೀಳುವಂತೆ ಪಾತ್ರೆಯನ್ನು ನೆನೆಸಿಟ್ಟು,  ಕಡಿಮೆ ನೀರಿನಲ್ಲಿ ಒಟ್ಟಿಗೆ ಎಲ್ಲ ಪಾತ್ರೆ ತೊಳೆದು ಮುಗಿಸಬಹುದು. 

ನೀರಿನ ನಲ್ಲಿ ಬಳಸುವಾಗ ನೀರಿನ ವೇಗ ಕಡಿಮೆ ಇಡಬೇಕು. 

ಮನೆಯ ನಲ್ಲಿಗಳಿಗೆ ಸ್ಪ್ರಿಂಕ್ಲಿಂಗ್ ಕ್ಯಾಪ್ ಹಾಕಿದರೆ, ನೀರು ಹರಡಿಕೊಂಡು ಬೀಳುವುದರಿಂದ ಹೆಚ್ಚಿನ ನೀರುವ್ಯರ್ಥವಾಗುವುದಿಲ್ಲ. 

ನಗರ ಪ್ರದೇಶಗಳಲ್ಲಿ ಬೋರ್ ನೀರಿನ ಸವಳು ತೆಗೆಯಲು ಬಳಸು RO ಪ್ಯೂರಿಫೈರ್ ಬಳಸುವುದು ಸಾಮಾನ್ಯ. ಅದರಿಂದ  ಹೊರಬರುವ ನಿರುಪಯುಕ್ತ ನೀರು ಸುಮ್ಮನೆ ಹರಿದು ಬಿಡುವುದಕ್ಕಿಂತ, ಅದನ್ನು ಬಕೆಟುಗಳಲ್ಲಿ ಸಂಗ್ರಹಿಸಿ, ಶೌಚಕ್ಕೆ ಮತ್ತು ಫ್ಲಶಿಂಗ್ ಟ್ಯಾಂಕಿಗೆ ಆಗಾಗ ತೆಗೆದುಕೊಂಡು ಹೋಗಿ ತುಂಬಿಟ್ಟರೆ, ನೀರಿನ ಮರುಬಳಕೆಯಾಗುತ್ತದೆ. 

ಮನೆಗೆಲಸದವರು ಕಡಿಮೆ ಸಮಯದಲ್ಲಿ ಕೆಲಸ ಮುಗಿಸುವ ಭರದಲ್ಲಿ ವೇಗವಾಗಿ ನೀರನ್ನು ಹರಿಸಿ ಪಾತ್ರೆ ಮತ್ತು ಬಟ್ಟೆಯನ್ನು ತೊಳೆಯುವ ತಾರಾತುರಿಯಲ್ಲಿರುತ್ತದೆ. ಗಮನಿಸಿ ನೀರನ್ನು ಹಿತಮಿತವಾಗಿ ಬಳಸುವಲ್ಲಿ ನಿರ್ದೇಶನ ನೀಡಿ. 

ಎಲ್ಲರೂ ಒಟ್ಟಿಗೆ ಕುಳಿತು ಊಟ ತಿಂಡಿ, ಕಾಫೀ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ತಯಾರಿಸುವ ಬಿಸಿ ಮಾಡುವ ಪಾತ್ರೆಗಳು ಒಮ್ಮೆಲೇ ಬಳಸಿಕೊಂಡರೆ, ಹೆಚ್ಚಿನ ಪಾತ್ರೆ ತೊಳೆಯಲು ಬರುವುದಿಲ್ಲ. 

ಕುಡಿಯುವ ನೀರಿನ ಲೋಟ ಸಣ್ಣದಿರಲಿ. ಬೇಕಾದರೆ ಮತ್ತೆ ಮತ್ತೆ ಹಾಕಿಕೊಳ್ಳಬಹುದು. ಆದರೆ ಹೆಚ್ಚಾದರೆ ಸುಮ್ಮನೆ ಪೋಲಾಗುತ್ತದೆ. 

ಬಚ್ಚಲುಮನೆಯಲ್ಲಿ ನೀರಿನ ಬಳಕೆ :

ಸ್ನಾನ ಮಾಡುವಾಗ ಹೆಚ್ಚಿನ ರಾಸಾಯನಿಕ ಸೋಪಿನ ಬಳಕೆ ಮಾಡದೆ, ಕಹಿಬೇವಿನ ರಸ, ನಿಂಬೆ ಸಿಪ್ಪ್ರೆ ಇತ್ಯಾದಿ ಬಳಕೆಯ ಮಾಡಿಕೊಂಡರೆ, ಸ್ನಾನಕ್ಕೆ ಬಳಸಿದ ನೀರನ್ನು ಗಟಾರಿಗೆ ಕಳಿಸುವ ಬದಲು  ಗಿಡಗಳಿಗೆ ಹರಿಯುವಂತೆ ಮಾಡಬಹುದು. 

ಹಲ್ಲುಜ್ಜುವಾಗ ನಲ್ಲಿ ನೀರನ್ನು ಕಟ್ಟಿ, ಬಾಯಿ ತೊಳೆಯುವಾಗ ಮಾತ್ರ ಮತ್ತೆ ಬಳಸಿಕೊಳ್ಳಿ

ಯಾವುದೇ ನಲ್ಲಿ ತೊಟ್ಟಿಕ್ಕದಂತೆ ಎಚ್ಚರವಹಿಸಬೇಕು. 

ಶವರ್ ಮಿತವಾಗಿ ಬಳಸಿ, ನಿರ್ಧಿಷ್ಟ ಪ್ರಮಾಣದ ನೀರನ್ನು ಬಕೇಟಿನಲ್ಲಿ ತುಂಬಿಕೊಂಡು ಅದಷ್ಟರಲ್ಲಿಯೇ ಸ್ನಾನ ಮುಗಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳಿತು.  ಸಾಬೂನು ಹಚ್ಚಿಕೊಳ್ಳುವಷ್ಟು ಹೊತ್ತು ಶವರ್ ಅನ್ನು ಆಫ್ ಮಾಡಿ ಮತ್ತೆ ಮೈ ತೊಳೆದುಕೊಳ್ಳುವಾಗ ಆನ್ ಮಾಡಿಕೊಳ್ಳಬಹುದು. ತಣ್ಣೀರು ಸ್ನಾನ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ತಣ್ಣೇರಿನ ಕಾರಣಕ್ಕೆ ಕಡಿಮೆ ಸಮಯದಲ್ಲಿ ಸ್ನಾನವನ್ನು ಮುಗಿಸುತ್ತೇವೆ. 

ನೀರನ್ನು ಬಳಸುವ ಚೊಂಬು ಸಣ್ಣದಿದ್ದರೆ ಉತ್ತಮ. 

ವಾಷಿಂಗ್ ಮೆಶೀನು ಹೆಚ್ಚು ನೀರು ಬಳಸಿಕೊಳ್ಳುವ ಉಪಕರಣಗಳಲ್ಲಿ ಒಂದು. ಬಿರು ಬೇಸಿಗೆಯಾದ್ದರಿಂದ ಬಟ್ಟೆಗಳು ಬಲುಬೇಗ ಒಣಗುತ್ತವೆ. ಹಾಗಾಗಿ, ಅನಿವಾರ್ಯತೆ ಇಲ್ಲದಿದ್ದಲ್ಲಿ ಎರಡು ದಿನಕ್ಕೊಮ್ಮೆ ಮೆಶೀನು ಬಳಸದೆ ೫-೬ ದಿನಗಳಿಗೊಮ್ಮೆ ಬಳಸಿಕೊಳ್ಳಿ. 

ಕಡಿಮೆ ನೀರಿನ ಬಳಕೆ ಮಾಡುವ ಡಿಶ್ ವಾಶರ್ ಮತ್ತು ವಾಷಿಂಗ್ ಮಷೀನುಗಳು ಮಾರುಕಟ್ಟೆಯಲ್ಲಿ ಲಭ್ಯ. ಕೊಳ್ಳುವಾಗ ಗಮನದಲ್ಲಿರಲಿ. ೫೦% ಕಡಿಮೆ ನೀರನ್ನು ಉಪಯೋಗಿಸುವ ಸಾಮರ್ಥ್ಯದ ನೀರಿನ  ಫ್ಲಶ್ ಗಳೂ ಕೂಡ ಈಗ ಲಭ್ಯ. 

ಹೂದೋಟಕ್ಕೆ ನೀರು :

ಹಗಲಿಗೆ ನೆಲ ಮತ್ತು ಮಣ್ಣು ಕಾಯುವುದರಿಂದ, ನೀರು ಹಾಕಿದಾಗ ಹೆಚ್ಚಿನ ನೀರು ಆವಿಯಾಗಿ ಹೋಗುತ್ತದೆ. ಹಾಗಾಗಿ ರಾತ್ರೆಯ ತಂಪಿನ ನಂತರ ಬೆಳಿಗ್ಗೆ ಮುಂಚೆ ಗಿಡಗಳಿಗೆ ನೀರು ಉಣಿಸಿ.

ಗಿಡಗಳ ಬುಡಕ್ಕೆ ಒಣ ಹುಲ್ಲು, ಎಲೆಗಳು, ತೆಂಗಿನಕಾಯಿ ಜುಂಜಿನ ಮುಚ್ಚಿಗೆ ಹಾಕಿಡಿ. ಆಗ ಹೆಚ್ಚಿನ ತೇವಾಂಶ ಉಳಿದುಕೊಂಡು, ಗಿಡಗಳಿಗೆ ನೀರು ಕಡಿಮೆ ಸಾಲುತ್ತದೆ.    

ಸಾಧ್ಯವಿದ್ಧರೆ ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ನೀರು, ಬಚ್ಚಲು ಮನೆಯಿಂದ ಸ್ನಾನದ ನೀರನ್ನು ಕೈತೋಟದ ಜಾಗಕ್ಕೆ ಹರಿಯಲು ವ್ಯವಸ್ಥೆ ಮಾಡಬಹುದು. ನಗರ ಪ್ರದೇಶದಲ್ಲಿ ಹೆಚ್ಚಿನವರ ಮನೆಯಲ್ಲಿ ಪಾಟಿನಲ್ಲಿ ಗಿಡಗಳನ್ನು ಬೆಳೆಸುವ ಅನಿವಾರ್ಯತೆ ಇರುತ್ತದೆ. ಪಾಟಿನಲ್ಲಿ ಬೇಡದ ಪ್ಲಾಸ್ಟಿಕ್ ಬಾಟಲುಗಳನ್ನು, ದಾರವನ್ನು ಬಳಸಿ ಹನಿ ನೀರಾವರಿ ಪದ್ದತಿಯಲ್ಲಿ ನೀರನ್ನು ಉಣಿಸಿದರೆ ಗಿಡಗಳಿಗೆ ತಂಪಿನ ಜೊತೆ ಹೆಚ್ಚಿನ ನೀರು ಪೈಪಿನಿಂದ ಒಮ್ಮೆಲೇ ಹಾಕಿ ಅದು ನಿರುಪಯುಕ್ತವಾಗಿ ಹರಿದು ಹೋಗುವುದು ತಪ್ಪುತ್ತದೆ. 

ಅಕ್ಕಿ ತೊಳೆದ ನೀರು, ತರಕಾರಿ ತೊಳೆದ ನೀರನ್ನು ಬಕೇಟಿನಲ್ಲಿ ಒಟ್ಟು ಮಾಡಿ, ಗಿಡಗಳಿಗೆ ನೀರುಣಿಸಲು ಮರುಬಳಕೆ ಮಾಡಬಹುದು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ