ಭಾನುವಾರ, ಮಾರ್ಚ್ 3, 2024

walk2HEAL - ನಡಿಗೆ

 ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ನನ್ನ ಪ್ರತಿನಿತ್ಯದ ಚಟುವಟಿಕೆ. ಕಬ್ಬನ್ ಪಾರ್ಕಿನಲ್ಲಿ ನಾಲ್ಕು ಕಿಲೋಮೀಟರ್ ನಡಿಗೆಯ ವಾಕಥಾನ್ ಕಾರ್ಯಕ್ರಮದ ಬಗ್ಗೆ ತಿಳಿದು, ಭಾನುವಾರ ಬೆಳಿಗ್ಗೆಗೆ ಮಗಳ ಜೊತೆ ವಾಕ್ ಮಾಡುವ ಪ್ರೋಗ್ರಾಂ ಫಿಕ್ಸ್ ಆಯಿತು. 

ಅದು ಗೋಪಾಲ್ಸ್ ಸ್ವಯಂ ಸೇವಾ ಸಂಸ್ಥೆಯಿಂದ "walk2HEAL" ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ಆರೋಗ್ಯಕ್ಕಾಗಿ ನಡಿಗೆ. HEAL stands for -

H - Health,

E - Environment

A - Agriculture

L - Lifestyle


ನಮ್ಮ ಆರೋಗ್ಯ, ಪ್ರಕೃತಿಯೊಂದಿಗಿನ ಬೆಸುಗೆ, ಮಾಲಿನ್ಯ ರಹಿತ ಕೃಷಿ - ಆ ಮೂಲಕ ನಮಗೆ ದೊರಕುವ ಆಹಾರ ಹಾಗೂ ಇವೆಲ್ಲದರ ಜೊತೆ ಅಡಕವಾಗಿರುವ ನಮ್ಮ ಜೀವನಶೈಲಿ ಇವೆಲ್ಲವೂ ಒಂದಕ್ಕೊಂದು ಪೂರಕವಾದ ಅಂಶಗಳು. ಇವೆಲ್ಲದರ ಕುರಿತಾದ ಜಾಗೃತಿಗಾಗಿ ನಡೆಸಿದ ಜಾಥಾ ಈ ನಡಿಗೆ ಕಾರ್ಯಕ್ರಮ.





 ದೇಸಿ ಹಸುಗಳ ಸಂರಕ್ಷಣೆ ಮತ್ತು ಪಾಲನೆಯ ಸದುದ್ದೇಶದಿಂದ ಹುಟ್ಟಿಕೊಂಡಿರುವ, ಒಂದು ಸ್ವಯಂ ಸೇವಾ ಸಂಸ್ಥೆ ಗೋಪಾಲ್ಸ್. ಇಲ್ಲಿ ಗೋ ಎಂದರೆ ಗೋವು ಎಂದರ್ಥ ಮತ್ತು ಪಾಲ್ಸ್ ಎಂದರೆ ಇಂಗ್ಲೀಷಿನಲ್ಲಿ, ಸ್ನೇಹಿತರು ಎಂಬುದಕ್ಕೆ ಸೂಚಿಸುವ ಪದ. ಹಸುವಿನ ಸ್ನೇಹಿತರು ನಾವು ಎಂಬರ್ಥ ಈ ಸೇವಾ ಸಂಸ್ಥೆಯ ಹೆಸರೇ ತುಂಬಾ ಕ್ರಿಯಾತ್ಮಕವೆನಿಸಿತು. ಈ ಸಂಸ್ಥೆಗಾಗಿ ಕೆಲಸ ಮಾಡುವವರ್ಯಾರೂ ತಮ್ಮ ಹೊಟ್ಟೆಪಾಡಿನ ದುಡಿಮೆಗೋಸ್ಕರ ಈ ಸಂಸ್ಥೆಯನ್ನು ನೆಚ್ಚಿಕೊಂಡವರಲ್ಲ, ಅವರ ಜೀವನಧಾರದ ದುಡಿಮೆಯ ಹೊರತಾಗಿ ಹವ್ಯಾಸಕ್ಕಾಗಿ, ಪ್ರಕೃತಿಯ ಭಾಗವಾದ ನಾವು ಪ್ರಕೃತಿಗೆ ಮರಳಿ ಕೊಡಬೇಕು ಎಂಬ ನಂಬಿಕೆಯಿಂದ ಸ್ವಯಂ ಸೇವಕರಾಗಿ, ತಮ್ಮ ಶನಿವಾರ ಭಾನುವಾರಗಳು ಮತ್ತು ಬಿಡುವಿನ ಸಮಯದಲ್ಲಿ ದುಡಿಯುವುವರ ಸಂಖ್ಯೆ ನೂರಾರು. ಇಲ್ಲಿ ಎಲ್ಲರೂ ಗೋಪಾಲರು!!



ಒಂದು ಸಾಮೂಹಿಕ ನಡಿಗೆ ಇರುತ್ತದೆ ಅಷ್ಟೇ ಎಂಬ ಭಾವನೆಯಿಂದ ಹೋಗಿದ್ದ ನಾವು ಅಲ್ಲಿ ಕಾರ್ಯಕ್ರಮವನ್ನು ನಡೆಸಿದ ಬಗ್ಗೆ ಕಂಡು ಪ್ರಭಾವಿತರಾದೆವು. ವಿದ್ಯಾರ್ಥಿಗಳು, ದೊಡ್ಡ ದೊಡ್ಡ ನೌಕರಿಯಲ್ಲಿ ಇರುವವರು, ಗೃಹಿಣಿಯರು, ಹಿರಿಯ ನಾಗರಿಕರು ಹೀಗೆ ವಯಸ್ಸು ಲಿಂಗ ಯಾವುದರ ಮಿತಿ ಇಲ್ಲದೆ ಒಂದೇ ಕುಟುಂಬದವರಂತೆ ಓಡಾಡಿಕೊಂಡಿದ್ದ ಸ್ವಯಂಸೇವಕರ ಉತ್ಸಾಹವೇ ಕಾರ್ಯಕ್ರಮದ ಹೈಲೈಟ್! ಎಲ್ಲರೂ ನಮ್ಮನ್ನು ಆದರದಿಂದ ಸ್ವಾಗತಿಸಿದರು. ಕಾರ್ಯಕ್ರಮದ ಪ್ರತಿ ಹಂತಕ್ಕೆ ನೀಡಿದ ವಿವರಣೆ ಸಮರ್ಪಕವಾಗಿತ್ತು. ಸುಂದರವಾದ ವಾಕ್ ಟು ಹೀಲ್ ರಂಗೋಲಿ, ಅಲ್ಲಲ್ಲಿ ದೇಸಿ ದನಗಳ ಉಳಿಸುವಿಕೆಯ ಕುರಿತಾದ ಚಂದದ ಪೋಸ್ಟರ್ಗಳು ಕಾರ್ಯಕ್ರಮವನ್ನು ಹಬ್ಬವನ್ನಾಗಿಸಿತ್ತು. ನಡಿಗೆಯಲ್ಲಿ ಭಾಗವಹಿಸುವವರೆಲ್ಲರಿಗೂ ಕಾಟನ್ ಶರ್ಟ್, ಜ್ಯೂಸ್, , ಸೆಲ್ಫಿ ಬೂತ್ ಫೋಟೋ ಅವಕಾಶ ಇತ್ಯಾದಿ ನಮ್ಮ ಪಾಲ್ಗೊಳ್ಳುವಿಕೆಗೆ ಮತ್ತಷ್ಟು ಮೆರಗು ನೀಡಿದಂತಾಯಿತು. ನನ್ನ ಅನೇಕ ಯೋಗ ಮಿತ್ರರ ಭೇಟಿಗೆ ಈ ಕಾರ್ಯಕ್ರಮ ಸ್ಥಳವಾಯಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ, ಸಂಸ್ಥೆಯ ಮುಖ್ಯಸ್ಥರು ಮತ್ತು ರಾಯಭಾರಿಗಳು ಉಪಸ್ಥಿತರಿದ್ದರು. ನಮ್ಮ ಯೋಗ ಗುರುಗಳಾದ ಸುಬ್ಬು ಭಯ್ಯ ನಡಿಗೆಯ ಪ್ರಾಮುಖ್ಯತೆ, ನಾವು ಮನುಷ್ಯರಾಗಿ ಮೂಕ ಪ್ರಾಣಿಗಳಿಗೆ ಹೇಗೆ ಸಹಾಯ ಮಾಡಬಹುದು ಇತ್ಯಾದಿ ವಿಷಯಗಳ ಕುರಿತಾಗಿ ಚಿಕ್ಕ ಚೊಕ್ಕ ಮಾತುಗಳನ್ನಾಡಿದರು. ಇಂದಿನ ಕಾರ್ಯಕ್ರಮಕ್ಕೆ ನಿಮ್ಮ ಕೈಜೋಡಿಸುವುದರ ಜೊತೆಗೆ ಕಾಲನ್ನು ಜೋಡಿಸಿ ಎಂದು ಎಲ್ಲರನ್ನು ನಗೆಗಡಲಲ್ಲಿ ತಿಳಿಸಿದರು. ವಾರ್ಮ್ ಅಪ್ ವ್ಯಾಯಾಮಕ್ಕೆ  ಗೋಪಾಲ ಭಜನೆ, ನೃತ್ಯ ಮಾಡಿಸಿದ್ದು ವಿಭಿನ್ನ ಮತ್ತು ವಿಶಿಷ್ಟವಾಗಿತ್ತು. ನಂತರ, ಸುಮಾರು 800 ಜನರು ಪಾಲ್ಗೊಂಡ 'ವಾಕಥಾನ್' ಸುಂದರವಾದ ಕಬ್ಬನ್ ಪಾರ್ಕ್ನ ಬೆಳಗಿನಲ್ಲಿ 'ನಡೆಯಿತು'. ಕಾರ್ಯಕ್ರಮದ ಮುಖ್ಯಸ್ಥರುಗಳಾದ ಪ್ರೊ ಮಹಾದೇವನ್, ಡಾ  ಅಹಲ್ಯಾ ಶರ್ಮಾ, ಅನೇಕ ಕಂಪೆನಿಗಳ ಸಿಇಒ ಗಳು ಕೂಡ ನಮ್ಮೊಡನೆ  ಹೆಜ್ಜೆ ಹಾಕುತ್ತಿದ್ದುದು, ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೂರಕ್ಕೂ ಹೆಚ್ಚು ನಮ್ಮ ಯೋಗ ಮಿತ್ರರು  ಇದರಲ್ಲಿ ಪಾಲ್ಗೊಂಡಿದ್ದು ಕಂಡು ಹೆಮ್ಮೆಯೆನಿಸಿತು. ಗೋವುಗಳ ಹತ್ಯೆಯ ಕುರಿತಾಗಿ, ಬೀದಿ ನಾಟಕವನ್ನೂ ಕೆಲವು ವಿದ್ಯಾರ್ಥಿಗಳು ಪ್ರದರ್ಶಿಸಿ ತೋರಿಸಿದರು. ಒಗ್ಗಟ್ಟಿನಿಂದ ಹಳದಿ ಬಣ್ಣದ ಶರ್ಟ್ ಧರಿಸಿ ಹೀಗೆ ನೂರಾರು ಜನರ ಒಟ್ಟಿಗೆ ಹೋಗುವುದು ಮಗಳಿಗೆ ಒಂದು ಹೊಸ ಅನುಭವ. ಹಿಂದಿನ ದಿನ, "ಸಿಕ್ಕಿದ್ದು ಒಂದು ಭಾನುವಾರ ನಾ ಮಲಗ್ತೀ ಅಮ್ಮ" ಎನ್ನುತ್ತಿದ್ದ ಮಗಳು ತನ್ನ ಸ್ನೇಹಿತೆಯೊಡನೆ, ಕಬ್ಬನ್ ಪಾರ್ಕ್ ನ ಪ್ರಶಾಂತ ವಾತಾವರಣ, ಹೂಗಳಿಂದ ಮೈದಳೆದು ನಿಂತಿದ್ದ ಮರ ಗಿಡಗಳು, ಹಕ್ಕಿ ಪಾರಿವಾಳಗಳು, ಬೆಕ್ಕಿನ ಮರಿ, ಅಲ್ಲೇ ಒಂದು ನಡೆಯುತ್ತಿದ್ದ ಸಾಕು ನಾಯಿಗಳ ಕಾರ್ಯಕ್ರಮದಲ್ಲಿ ಕಂಡ ಹತ್ತಾರು ಜಾತಿಯ ಅವಳಿಷ್ಟದ ನಾಯಿಗಳ ನೋಡುತ್ತಾ, ಅದಾಗಲೇ ಐದು ಕಿಲೋಮೀಟರ್ ನಡೆದು ಮುಗಿಸಿದ್ದಳು. "ದಿನಾ ಇಷ್ಟೊತ್ತಿಗೆ ಶಾಲೆಯಲ್ಲಿ ಇರ್ತಿ, ಸಂಡೆ ಲೇಟ್ ಏಳನ ಅನ್ನುಸ್ತು, ಆದ್ರೆ ಈ ತರ ಪ್ರೋಗ್ರಾಮ್ ಆದ್ರೆ ನಾ ಎದ್ದು ಬತ್ತಿ ಅಮ್ಮಾ" ಎಂದು ತನ್ನ ಸಣ್ಣ ಪ್ರಮಾಣದ ಸಹಕಾರವನ್ನು ತಿಳಿಸಿದಳು. ಹಿರಿಯರು ಕಿರಿಯರೆನ್ನದೆ ಎಲ್ಲರೂ ಉತ್ಸಾಹದಿಂದ ನಡೆದೆವು. ದೃಷ್ಟಿ  ಮಾಂದ್ಯರಾದ ವಿಕ್ರಂ, ವರಲಕ್ಷ್ಮೀ ಯನ್ನು ಸೇರಿದಂತೆ ಇನ್ನೂ ಅನೇಕ ವಿಶೇಷ ಚೇತನರು ಇತರರ ಸಹಾಯದೊಂದಿಗೆ ಅಂದಲ್ಲಿ ನಡೆದರು!! 

ನಡಿಗೆ ಮುಗಿಸಿ ಬಂದವರಿಗೆ ತಂಪಿಗೆ ಮಜ್ಜಿಗೆ, ಶುಚಿ ರುಚಿಯಾದ ತಿಂಡಿ, ಮೆಡಲ್, ಚಂದದ ಮಲ್ಲಿಗೆಯ ಗಿಡವನ್ನೊಳಗೊಂಡು, ಗೋಮಯದ ಪ್ರಾಡಕ್ಟ್ಸ್ಗಳಾದ ಅಗರಬತ್ತಿ, ಧೂಪ, ನೆಡಲಿಕ್ಕೊಂದು  ಪರಿಸರ ಸ್ನೇಹಿ ಚೀಲದಲ್ಲಿ ತುಂಬಿ ಕಳಿಸಿದರು. ಗೋಮಯದಿಂದ ಹಣತೆಯನ್ನು ತಮ್ಮ ಕೈಯಾರೆ ಮಾಡಲು  ಅವಕಾಶವಿದ್ದ ಕೌಂಟರ್ ಮಕ್ಕಳಿಗೆ ಖುಶಿ ಕೊಟ್ಟಿತು. ಇಷ್ಟೆಲ್ಲಾ ಉಡುಗೊರೆಗಳ ಜೊತೆಗೆ ಈ ಕಾರ್ಯಕ್ರಮ ಮುಗಿಸಿ ಹೊರಡುವಾಗ ನಾವು ಪಡೆದದ್ದೇನು? ಹೊಸ ಸ್ನೇಹಿತರ ಪರಿಚಯ, ನಾಲ್ಕು ಕಿಮೀ ಆರೋಗ್ಯಕರ ಉಸಿರಿನೊಂದಿಗೆ ನಡೆಯುವ ಆತ್ಮವಿಶ್ವಾಸ ಅದಕ್ಕಿಂತ ಮಿಗಿಲಾಗಿ ಒಳ್ಳೆಯ ಉದ್ದೇಶಕ್ಕೆ ನಾವು ನೀಡಿದ ಪ್ರೋತ್ಸಾಹದ ಕುರಿತು ಧನ್ಯತೆ. 


ವೈಯುಕ್ತಿಕವಾಗಿ ಸಸ್ಯಜನ್ಯ ಆಹಾರ ಪದ್ಧತಿಯನ್ನು ಪರಿಪಾಲಿಸುವ ನನಗೆ ಪ್ರಾಣಿ ಹಿಂಸೆ ಆಗದಂತೆ ನಡೆಸುವ ಯಾವ ಸೇವೆಯೂ ದೇವರ ಸೇವೆಗೆ ಸಮಾನ. ಅದರ ಜೊತೆಗೆ ಜನರ ಉತ್ತಮ ಆರೋಗ್ಯಕ್ಕಾಗಿ ಜೀವನಶೈಲಿಗೆ, ಪ್ರಕೃತಿಗೆ  ಸಹಾಯಕವಾಗುವ ಯಾವುದೇ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮತ್ತಷ್ಟು ಹೆಚ್ಚಲಿ, ಜನರ ಅರಿವಿಗೆ ಇನ್ನಷ್ಟು ತಲುಪಲಿ ಎಂಬ ಹಾರೈಕೆಯೊಂದಿಗೆ ನಾವು ಅಲ್ಲಿಂದ ಬೀಳ್ಕೊಂಡೆವು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ